ಆನೇಕಲ್, ಜೂನ್ 23: ದಿನಸಿ ತರಲು ಅಂಗಡಿಗೆ ತೆರಳುತ್ತಿದ್ದ ಯುವತಿಯ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದಲ್ಲದೇ, ಆಕೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ನಡೆದಿದೆ.
ರೇಣುಕಾ ಯಲ್ಲಮ್ಮ ಬಡಾವಣೆ ನಿವಾಸಿಯಾಗಿರುವ ಯುವತಿ ರವಿವಾರ (ಜೂ. 23) ಸಂಜೆ 4 ಗಂಟೆ ಸುಮಾರಿಗೆ ದಿನಸಿ ತರಲು ಅಂಗಡಿಗೆ ಹೊರಟಿದ್ದಳು. ಈ ವೇಳೆ ಐದಾರು ಜನರು ಯುವಕರು ನಡುರಸ್ತೆಯಲ್ಲಿ ಯುವತಿಯನ್ನು ಅಡ್ಡ ಹಾಕಿದ್ದಾರೆ. ಬಳಿಕ, ಓರ್ವ ಯುವಕ ಯುವತಿಯ ಮೈಕೈ ಮುಟ್ಟಿ ಎಳೆದಾಡಿದ್ದಾರೆ. ಇದಕ್ಕೆ ಯುವತಿ ಪ್ರತಿರೋಧ ತೋರಿದ್ದಾಳೆ. ಆಗ, ಓರ್ವ ಯುವಕ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ.
ಈ ವೇಳೆ ಸ್ಥಳೀಯರು ಯುವತಿಯ ನೆರವಿಗೆ ಧಾವಿಸಿದ್ದಾರೆ. ನೆರವಿಗೆ ಧಾವಿಸಿದ ಸ್ಥಳೀಯರ ಮೇಲೂ ಯುವಕರು ಹಲ್ಲೆ ಮಾಡಿದ್ದಾರೆ. ಯುವತಿಯನ್ನು ಬಚಾವ್ ಮಾಡಿ ಸ್ಥಳೀಯರು ಮನೆ ಬಳಿ ಕರೆದುಕೊಂಡು ಬಂದರೂ ಬಿಡದ ಯುವಕರು, ಆಕೆಯ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಯುವತಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಮಾತನಾಡಿ, ನಾನು (ಯುವತಿ) ಅಂಗಡಿ ಹೋಗುವ ಸಂದರ್ಭದಲ್ಲಿ ಯುವಕರು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಎಲ್ಲರೂ ಕುಡಿದಿದ್ದರು, ಗಾಂಜಾ ಹೊಡೆದಿದ್ದರು. ಆಗ, ಅವರು ನನ್ನ ಅಡ್ಡಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹೊಡೆಯಲು ಮತ್ತು ಮುಟ್ಟಲು ಬಂದರು. ಈ ವೇಳೆ ಸ್ಥಳೀಯರು ನನ್ನ ರಕ್ಷಿಸಿದರು ಎಂದು ಹೇಳಿದರು.
ಸ್ಥಳೀಯರು ಯುವಕರಿಗೆ ಹೊಡೆದರು. ನಾನೂ ಕೂಡ ಯುವಕರಿಗೆ ಹೊಡೆದೆ. ಸಾರ್ವಜನಿಕರಿಗೂ ಯುವಕರು ಹೊಡೆದರು. ಅಲ್ಲದೇ, ನನ್ನ ಮನೆ ಗೇಟ್ ಎಗರಿ ಒಳ ನುಗ್ಗಿದರು. ಏಳೆಂಟು ಜನ ಯುವಕರಿದ್ದರು. ಯುವಕರು ನಮ್ಮ ಮನೆ ಹಿಂದುಗಡೆ ವಾಸವಾಗಿದ್ದಾರಂತೆ. ಕಳೆದ ಒಂದು ವಾರದಿಂದ ಈ ಬಡವಾಣೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಡ್ಯಾನ್ಸ್ ಕಾರ್ಯಕ್ರಮದ ಹೆಸರಲ್ಲಿ ವಂಚನೆ: ಸಾವಿರಾರು ರೂ ಪಡೆದು ಅವಕಾಶ ನೀಡಿದ ಮಹಿಳೆ
ಹಲ್ಲೆ ಮತ್ತು ದೌರ್ಜನ್ಯ ನಡೆಸಿದ ಯುವಕರು ಯಾರೆಂದು ಗೊತ್ತಿಲ್ಲ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ನಾನು ದೂರು ನೀಡಿದ್ದೇನೆ. ನಾನು ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ವಾರದ ಹಿಂದೆ ರೇಣುಕಾ ಯಲ್ಲಮ್ಮ ಬಡಾವಣೆ ಮನೆಗೆ ಶಿಫ್ಟ್ ಆಗಿದ್ದೆವು ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಮಕ್ಕಳ ಜೊತೆ ವಾಸವಿದ್ದೇನೆ ಎಂದರು.
Published On - 4:44 pm, Mon, 23 June 25