ಬೆಂಗಳೂರಿನಲ್ಲಿದ್ದಾರೆ ಹೆಣದ ಮೇಲೂ ಹಣ ಮಾಡೋ ಭ್ರಷ್ಟರು! ಗಣ್ಯರಿಗೇ ಹೀಗಾದರೆ ಸಾಮಾನ್ಯರ ಪಾಡೇನು?

ಭಾರತ್ ಪೆಟ್ರೋಲಿಯಂನ ನಿವೃತ್ತ ಸಿಎಫ್‌ಒ ಶಿವಕುಮಾರ್ ಬೆಂಗಳೂರಿನಲ್ಲಿ ಮಗಳ ಮರಣದ ನಂತರ ಅನುಭವಿಸಿದ ಭ್ರಷ್ಟಾಚಾರ ಮತ್ತು ಕಿರುಕುಳವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದು ಸಂಚಲನಕ್ಕೆ ಕಾರಣವಾಗಿದೆ. ಆರೋಪಗಳ ಆಧಾರದ ಮೇಲೆ ಸದ್ಯ ಬೆಳ್ಳಂದೂರು ಠಾಣೆಯ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಲಾಗಿದೆ. ಇದರಿಂದಾಗಿ, ಒಬ್ಬ ಹಿರಿಯ ನಿವೃತ್ತ ಅಧಿಕಾರಿಗೇ ಹೀಗಾದರೆ ಜನಸಾಮಾನ್ಯರ ಪಾಡೇನು ಎಂಬ ಪ್ರಶ್ನೆ ಉದ್ಭವಿಸಿದೆ.

ಬೆಂಗಳೂರಿನಲ್ಲಿದ್ದಾರೆ ಹೆಣದ ಮೇಲೂ ಹಣ ಮಾಡೋ ಭ್ರಷ್ಟರು! ಗಣ್ಯರಿಗೇ ಹೀಗಾದರೆ ಸಾಮಾನ್ಯರ ಪಾಡೇನು?
ಸಾಂದರ್ಭಿಕ ಚಿತ್ರ

Updated on: Oct 30, 2025 | 1:15 PM

ಬೆಂಗಳೂರು, ಅಕ್ಟೋಬರ್ 30: ಭಾರತ್ ಪೆಟ್ರೋಲಿಯಂ ನಿಗಮದ (Bharat Petroleum Corporation Limited) ನಿವೃತ್ತ ಸಿಎಫ್​ಒ ಶಿವಕುಮಾರ್ ಅವರಿಂದ ಲಂಚ ಪಡೆದ ಆರೋಪದಲ್ಲಿ ಬೆಂಗಳೂರಿನ (Bengaluru) ಬೆಳ್ಳಂದೂರು ಪೊಲೀಸ್ ಠಾಣೆಯ ಪಿಎಸ್​ಐ ಸಂತೋಷ್ ಹಾಗೂ ಕಾನ್​ಸ್ಟೇಬಲ್ ಗೋರಖ್​ನಾಥ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಗಳ ಮರಣದ ನಂತರ ಬೆಂಗಳೂರಿನಲ್ಲಿ ತಾವು ಎದುರಿಸಿದ ಕಿರುಕುಳ ಮತ್ತು ಲಂಚಕ್ಕೆ ಸಂಬಂಧಿಸಿದ ಅಸಹನೀಯ ಅನುಭವವನ್ನು ಶಿವಕುಮಾರ್ ಲಿಂಕ್ಡ್​​ಇನ್​ನಲ್ಲಿ ಪೋಸ್ಟ್ ಮಾಡಿದ್ದರು. ಇದರ ಆಧಾರದಲ್ಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಶಿವಕುಮಾರ್ ಮಾಡಿದ್ದ ಆರೋಪಗಳೇನು?

ಐಐಎಂ ಅಹಮದಾಬಾದ್‌ನಿಂದ ಬಿಟೆಕ್ ಕಾಂಪ್ ಸೈನ್ಸ್ ಮತ್ತು ಎಂಬಿಎ ಪದವಿ ಪಡೆದಿದ್ದ ನನ್ನ ಏಕೈಕ ಮಗಳು ಅಕ್ಷಯ ಶಿವಕುಮಾರ್ (34 ವರ್ಷ) 2025 ರ ಸೆಪ್ಟೆಂಬರ್ 18 ರಂದು ಬ್ರೈನ್ ಹೆಮರೇಜ್​ನಿಂದಾಗಿ ನಮ್ಮ ಕಣ್ಣೆದುರೇ ಮನೆಯಲ್ಲಿ ನಿಧನಳಾದಳು. ಆಕೆಯ ನಿಧನದ ನಂತರ ಆಂಬ್ಯುಲೆನ್ಸ್ ಚಾಲಕ, ಪೊಲೀಸರು, ಸ್ಮಶಾನ ಹಾಗೂ ಜಿಬಿಎ (ಹಿಂದಿನ ಬಿಬಿಎಂಪಿ) ಅಧಿಕಾರಿಗಳಿಂದ ನಾನು ಅನುಭವಿಸಿದ ನೋವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಶಿವಕುಮಾರ್ ಲಿಂಕ್ಡ್​​ಇನ್​​ನಲ್ಲಿಪೋಸ್ಟ್ ಮಾಡಿದ್ದಾರೆ. ಲಂಚ ನೀಡಿದ ಬಗ್ಗೆ ಉಲ್ಲೇಖಿಸಿದ್ದಾರೆ.

ಕಸವನಹಳ್ಳಿಯ ಒಂದು ಆಸ್ಪತ್ರೆಯಿಂದ ಕೋರಮಂಗಲದ ಸೇಂಟ್ ಜಾನ್ಸ್‌ಗೆ ಪಾರ್ಥಿವ ಶರೀರವನ್ನು ಒಯ್ಯಲು 3000 ರೂ. ಪಾವತಿಸಿ ಎಂದು ಆಂಬ್ಯುಲೆನ್ಸ್ ಸಿಬ್ಬಂದಿ ಹೇಳಿದರು. ಪೊಲೀಸರು ಕೂಡ ತುಂಬಾ ದಾರ್ಷ್ಟ್ಯದಿಂದ ವರ್ತಿಸಿದರು. ನಾವು ಪೋಸ್ಟ್ ಮಾರ್ಟಂಗಾಗಿ ದೇಹವನ್ನು ಕೊಂಡೊಯ್ಯಬಹುದು ಎಂದು ಪೊಲೀಸ್ ಸಿಬ್ಬಂದಿ ಹೇಳಿದಾಗ ಇನ್ಸ್‌ಪೆಕ್ಟರ್ ದರ್ಪ ತೋರಿದರು. ಅದೃಷ್ಟವಶಾತ್ ನನ್ನ ಮಾಜಿ ಉದ್ಯೋಗದಾತರು ಮಧ್ಯ ಪ್ರವೇಶಿಸಿದ ನಂತರ ಸುಮ್ಮನಾದರು. ಆ ನಂತರ ಮರಣೋತ್ತರ ಪರೀಕ್ಷೆ ಮುಗಿದು ನಾವು ಅವಳ ಕಣ್ಣುಗಳನ್ನು ದಾನ ಮಾಡಿದೆವು ಮತ್ತು ದೇಹವನ್ನು ದಹನಕ್ಕಾಗಿ ಬಿಡುಗಡೆ ಮಾಡಲಾಯಿತು ಎಂದು ಶಿವಕುಮಾರ್ ಉಲ್ಲೇಖಿಸಿದ್ದರು.

ಸ್ಮಶಾನದಲ್ಲೂ ಸುಲಿಗೆ, ಪೋಸ್ಟ್ ಮಾರ್ಟಂ ವರದಿಗೂ ಹಣ

ಸ್ಮಶಾನದಲ್ಲಿ ಅವರು ಹಣ ಕೇಳಿದರು, ಅದನ್ನು ಪಾವತಿಸಿದೆವು. ನಂತರ ಎಫ್‌ಐಆರ್ ಮತ್ತು ಪೋಸ್ಟ್ ಮಾರ್ಟಮ್ ವರದಿಯ ಪ್ರತಿಗಾಗಿ 4 ದಿನಗಳ ನಂತರ ಪೊಲೀಸರನ್ನು ಭೇಟಿಯಾದೆವು. ಆಗ ಅವರು ಹಣ ಕೇಳಿದರು. ಪೊಲೀಸ್ ಠಾಣೆಯಲ್ಲೇ ಹಣ ತೆಗೆದುಕೊಂಡರು. ಆದರೆ, ಅವರು ಲಂಚ ಪಡೆದ ಜಾಗದಲ್ಲಿ ಸಿಸಿಟಿವಿ ಇರಲಿಲ್ಲ. ವಾಸ್ತವದಲ್ಲಿ ಸಬ್ ಇನ್ಸ್‌ಪೆಕ್ಟರ್ ತುಂಬಾ ಚೆನ್ನಾಗಿ ಮಾತನಾಡಿದರು ಮತ್ತು ಮೇಲಿನ ದಾಖಲೆಗಳಿಗೆ ಸಹಿ ಹಾಕಿದರು. ಆದರೆ, ಲಂಚ ನೀಡಲು ಅವರ ಸಹಾಯಕರನ್ನು ಭೇಟಿಯಾಗಲು ಹೇಳಿದರು ಎಂದು ಶಿವಕುಮಾರ್ ಆರೋಪಿಸಿದ್ದರು.

ಶಿವಕುಮಾರ್ ಲಿಂಕ್ಡ್​​ಇನ್ ಪೋಸ್ಟ್

ಇದನ್ನೂ ಓದಿ: ಲಂಚ ಪಡೆದು ಸಿಕ್ಕಿಬಿದ್ದ ಬೆಂಗಳೂರು, ಬೀದರ್, ಮಂಡ್ಯದ​​ ಮೂವರು ವೈದ್ಯರ ಅಮಾನತು

ಮರಣ ಪ್ರಮಾಣಪತ್ರಕ್ಕಾಗಿ ಜಿಬಿಎ ಕಚೇರಿಗೆ ಸತತ 5 ದಿನಗಳ ಕಾಲ ಅಲೆದಿದ್ದೆ. ಜಾತಿ ಗಣತಿಯ ಕಾರಣ ಕಚೇರಿಯಲ್ಲಿ ಸಿಬ್ಬಂದಿ ಇಲ್ಲ ಎಂದು ಹೇಳಿಕಳುಹಿಸಿದರು. ನಂತರ ಜಿಬಿಎ ಉನ್ನತ ಅಧಿಕಾರಿಯನ್ನು ಸಂಪರ್ಕಿಸಿದೆ. ಹೆಚ್ಚಿನ ಹಣವನ್ನು ಪಡೆದ ನಂತರ ಮರಣ ಪ್ರಮಾಣಪತ್ರ ನೀಡಿದರು. ವ್ಯವಸ್ಥೆ ಈ ರೀತಿ ಆದರೆ ಇನ್ನು ಸಾಮಾನ್ಯ ಜನರು ಏನು ಮಾಡಬಹುದು ಎಂಬ ಬಗ್ಗೆ ಅಚ್ಚರಿಯಾಗಿದೆ ಎಂದು ಲಿಂಕ್ಡ್​​ ಇನ್ ಪೋಸ್ಟ್​​ನಲ್ಲಿ ಶಿವಕುಮಾರ್ ಉಲ್ಲೇಖಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ