ಬೆಂಗಳೂರು: ನಗರದ ನ್ಯೂ ತರಗುಪೇಟೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಮಾಹಿತಿಗಳು ಲಭ್ಯವಾಗಿದೆ. ಸ್ಫೋಟ ಸಂಭವಿಸಲು ರೀಲ್ ಪಟಾಕಿಯೇ ಕಾರಣ ಎಂದು ಪ್ರಾಥಮಿಕ ವಿವರಗಳು ಲಭಿಸಿವೆ. ರೀಲ್ ಪಟಾಕಿಯ ದೊಡ್ಡ ಡ್ರಮ್ ನೆಲಕ್ಕೆ ಬಿದ್ದು ಸ್ಫೋಟ ಆಗಿದೆ. ಎಫ್ಎಸ್ಎಲ್, ಬಾಂಬ್ ನಿಷ್ಕ್ರಿಯ ತಂಡದಿಂದ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ರಿಂಗ್ ಕ್ಯಾಪ್ಸ್ ಗನ್ಗಳಲ್ಲಿ ಪಟಾಕಿ ಹಾಕಿ ಹೊಡೆಯಲಾಗುತ್ತೆ. ಹಿಂದೆ ಮಕ್ಕಳು ರೀಲ್ ಪಟಾಕಿಯಿಟ್ಟು ನೆಲಕ್ಕೆ ಹೊಡೀತಿದ್ದರು. ನಟ್ಟು ಬೋಲ್ಟ್ ನಡುವೆ ರೀಲ್ ಪಟಾಕಿಯಿಟ್ಟು ಹೊಡೀತಿದ್ರು. ಇಲ್ಲೂ ಕೂಡ ಬಾಕ್ಸ್ ಬಿದ್ದಾಗ ಅದೇ ರೀತಿಯ ಘಟನೆ ಆಗಿದೆ. ಪಟಾಕಿ ರೀಲ್ ದೊಡ್ಡದಿದ್ದು, ನೆಲಕ್ಕೆ ಬಿದ್ದಾಗ ಸ್ಫೋಟಿಸಿದೆ ಎಂದು ಹೇಳಲಾಗಿದೆ.
ವಿ.ವಿ. ಪುರಂ ಠಾಣೆಗೆ ಭಯೋತ್ಪಾದಕ ನಿಗ್ರಹ ದಳದ ತಂಡ ಭೇಟಿ ನೀಡಿದೆ. ಎಸಿಪಿ ವೇಣುಗೋಪಾಲ್ ನೇತೃತ್ವದ ಎಟಿಸಿ ತಂಡ ಭೇಟಿ ನೀಡಿ, ಸ್ಫೋಟದ ಹಿನ್ನೆಲೆ ಮಾಹಿತಿ ಕಲೆ ಹಾಕುಲಾಗುತ್ತಿದೆ. ಬೆಂಗಳೂರಿನ ನ್ಯೂ ತರಗುಪೇಟೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪಟಾಕಿ ಗೋದಾಮು ಮಾಲೀಕ ಗಣೇಶ್ ಬಾಬು ಬಂಧಿಸಲಾಗಿದೆ. ವಿ.ವಿ. ಪುರಂ ಠಾಣೆ ಪೊಲೀಸರಿಂದ ಗಣೇಶ್ ಬಾಬು ಅರೆಸ್ಟ್ ಮಾಡಲಾಗಿದೆ. ಗಾಯಾಳು ಗಣಪತಿ ದೂರಿನಂತೆ ಗಣೇಶ್ ಬಾಬು ಬಂಧನವಾಗಿದೆ. ಘಟನೆ ಸಂಭವಿಸಿದ ಕೂಡಲೇ ಬಾಬುರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ಬಳಿಕ ಅರೆಸ್ಟ್ ಮಾಡಿದ್ದಾರೆ.
ನಗರದ ನ್ಯೂ ತರಗುಪೇಟೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಗೋದಾಮಿನ ಮಾಲೀಕ ಬಾಬು ವಿರುದ್ಧ ಗಣಪತಿ ಎಂಬವರು ದೂರು ನೀಡಿದ್ದಾರೆ. ತಳ್ಳುವಗಾಡಿ ಕೆಲಸ ಮಾಡಿಕೊಂಡಿದ್ದ ಗಣಪತಿ ದೂರು ಕೊಟ್ಟಿದ್ದಾರೆ. ನಾನು 30 ವರ್ಷಗಳಿಂದ ತಳ್ಳುವಗಾಡಿ ಕೆಲಸ ಮಾಡಿಕೊಂಡಿದ್ದೆ. ಅವೆನ್ಯೂ ರಸ್ತೆಯ ಕಣ್ಣನ್ ಎಂಬುವರು ಹೇಳಿದ್ದರಿಂದ ಸ್ಫೋಟವಾದ ಸ್ಥಳಕ್ಕೆ ಕೆಲಸಕ್ಕೆ ತೆರಳಿದ್ದೆ. ಪತ್ರಕಾಳಿ ಅಮ್ಮನ್ ಲಾರಿ ಸರ್ವಿಸ್ ಗೋದಾಮಿಗೆ ಹೋಗಿದ್ದೆ. ಅಲ್ಲಿ ಸ್ಫೋಟಕವನ್ನು ಸರಿಯಾಗಿ ನಿರ್ವಹಣೆ ಮಾಡದೆ ಇಟ್ಟಿದ್ದರು. ತಳ್ಳುವ ಗಾಡಿಯಲ್ಲಿ 10 ಪಟಾಕಿ ಬಾಕ್ಸ್ಗಳನ್ನು ತುಂಬಿಸಿದ್ದೆ. ಗೋದಾಮಿನಿಂದ ಹೊರಬಂದಾಗ ದೊಡ್ಡಮಟ್ಟದ ಶಬ್ದ ಕೇಳಿಸಿತು. ಇದರಿಂದ ತಳ್ಳುವ ಗಾಡಿಯಲ್ಲಿದ್ದ 10 ಪಟಾಕಿ ಬಾಕ್ಸ್ ಸ್ಫೋಟಗೊಂಡಿದೆ ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿತ್ತು. ಪಕ್ಕದ ಅಂಗಡಿಯಲ್ಲಿ ಅಸ್ಲಂ, ಮನೋಹರ್ ದೇಹ ಛಿದ್ರವಾಗಿತ್ತು. ತನ್ನ ತಲೆ, ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಕೆಲವರು ತೀವ್ರ ರಕ್ತಸ್ರಾವವಾಗಿ ಬಿದ್ದು ಒದ್ದಾಡುತ್ತಿದ್ದರು. ಸ್ಥಳೀಯರು ನನ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ರು. ಇಂದು ನಡೆದ ಘಟನೆಗೆ ಗಣೇಶ್ ಬಾಬು ನೇರ ಕಾರಣ. ಬಾಬು, ಪತ್ರಕಾಳಿ ಅಮ್ಮನ್ ಲಾರಿ ಸರ್ವಿಸ್ ಮಾಲೀಕ ಎಂದು ವಿ.ವಿ. ಪುರಂ ಠಾಣೆ ಪೊಲೀಸರಿಗೆ ಗಾಯಾಳು ಗಣಪತಿ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪಟಾಕಿ ಸ್ಫೋಟದಿಂದ ಇಷ್ಟು ಪ್ರಮಾಣದ ಅವಘಡ ಆಗಲ್ಲ- ಎಫ್ಎಸ್ಎಲ್ ತಜ್ಞರ ಹೇಳಿಕೆ
ಇದನ್ನೂ ಓದಿ: ಬೆಂಗಳೂರು ನಿಗೂಢ ಸ್ಫೋಟ ಪ್ರಕರಣ: ಗೋದಾಮು ಮಾಲೀಕ ಪೊಲೀಸರ ವಶಕ್ಕೆ; ಒಬ್ಬ ಗಾಯಾಳು ಸ್ಥಿತಿ ಗಂಭೀರ
Published On - 8:34 pm, Thu, 23 September 21