ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ ನಿರ್ಧಾರವನ್ನು ಪ್ರಶ್ನಿಸಿದ ಬಿಕೆ ಹರಿಪ್ರಸಾದ್; ಖಾಸಗೀಕರಣದ ಹುನ್ನಾರ ಎಂದು ಟೀಕೆ
BK Hariprasad: ಮಕ್ಕಳಲ್ಲಿ ಸಂಘ ಪರಿವಾರದ ಸಿದ್ದಾಂತ ತುಂಬಲು ಹೊರಟಿದ್ದಾರೆ . ಈ ಶಿಕ್ಷಣ ನೀತಿಗೆ ನಮ್ಮ ವಿರೋಧ ಇದೆ. ಈ ಹೊಸ ನೀತಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಇರುತ್ತೋ ಇರಲ್ಲವೋ ಗೊತ್ತಿಲ್ಲ. ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಮ್ಮ ವಿರೋಧ ಇದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಿಂದ ರಾಜ್ಯದ ಅಧಿಕಾರ ಕಿತ್ತುಕೊಳ್ಳುವ ಹುನ್ನಾರ ಮಾಡಲಾಗಿದೆ. ರಾಜೀವ್ ಗಾಂಧಿ ಶಿಕ್ಷಣ ನೀತಿ ಅನುಷ್ಠಾನ ಮಾಡುವಾಗ ಎಲ್ಲಾ ವಿಭಾಗದ ತಜ್ಞರು ಇದ್ದರು. ಆದರೆ ಹೊಸ ನೀತಿಯಲ್ಲಿ ಇಂತಹ ಪ್ರಯತ್ನಗಳು ಆಗಿಲ್ಲ. ಹೊಸ ನೀತಿ ತರುವಾಗ ಎಲ್ಲರ ಜೊತೆ ಚರ್ಚೆ ನಡೆಸಬೇಕು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಜತೆ ಚರ್ಚಿಸಬೇಕು. ಆದರೆ ಇಲ್ಲಿ ಯಾರ ಜೊತೆ ಚರ್ಚೆ ಮಾಡಲಾಗಿದೆ ಎಂದು ಹೇಳುತ್ತಿಲ್ಲ ಎಂದು ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
ಕ್ರೈಸ್ತ, ಮುಸ್ಲಿಂ ಕಾಲೇಜುಗಳು ಪಾಲಿಸಬೇಕೆಂದು ಹೇಳಲಾಗಿದೆ. ಯುಜಿಸಿ ಮುಚ್ಚಿ ಏಕರೂಪದ ಕೇಂದ್ರ ವ್ಯವಸ್ಥೆ ಜಾರಿ ಹುನ್ನಾರವಿದೆ. ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳು ಇದಕ್ಕೆ ಸಿದ್ಧವಾಗಿಲ್ಲ. ಸರ್ಕಾರ ಕನಿಷ್ಠ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಕೇಂದ್ರ ಸರ್ಕಾರ ಮಕ್ಕಳನ್ನು ಬಲಿಪಶು ಮಾಡುತ್ತಿದೆ. ದೆಹಲಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಫೇಲ್ ಆಗಿದೆ. ಈಗ ಇದನ್ನು ರಾಜ್ಯದಲ್ಲಿ ಜಾರಿಮಾಡಲು ಮುಂದಾಗಿದೆ. 19 ಸಾವಿರ ಭಾಷೆ ಇರುವ ದೇಶದಲ್ಲಿ ಹಿಂದಿ ಹೇರಿಕೆ ಯತ್ನ ಆಗುತ್ತಿದೆ. ಕೇಂದ್ರ ಸರ್ಕಾರ ಹಿಂದಿ ಹೇರುವ ಕೆಲಸಕ್ಕೆ ಮುಂದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಿಂದಿ ಹೇರುವ ಕೆಲಸವಾಗ್ತಿದೆ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ಯುನಿವರ್ಸಲ್ ಎಜುಕೇಶನ್ಗೆ ಈ ನೀತಿ ವಿರುದ್ದವಾಗಿದೆ. ತರಗತಿ ವಿಭಾಗ ಪದ್ದತಿಯೂ ಕೂಡಾ ಗೊಂದಲಮಯವಾಗಿದೆ. ಹೊಸ ಶಿಕ್ಷಣ ನೀತಿ ಜಾರಿಗೆ ಸರಿಯಾಗಿ ಮೂಲಭೂತ ಸೌಕರ್ಯಗಳೇ ಇಲ್ಲ. ಇದೊಂದು ಘಾತುಕ ಶಿಕ್ಷಣ ನೀತಿ. ಮಕ್ಕಳಿಗೆ ಯಾವುದೇ ಒಳ್ಳೆಯದು ಮಾಡೊಲ್ಲ. ಈ ಶಿಕ್ಷಣ ನೀತಿಯನ್ನು ಸಂಸತ್ ನಲ್ಲಿ ಮೊದಲು ಚರ್ಚೆ ಮಾಡಬೇಕು. ಆದಾದ ಬಳಿಕ ರಾಜ್ಯಗಳಲ್ಲಿ ಚರ್ಚೆ ಆಗಬೇಕಿತ್ತು. ಆದರೆ, ಆರ್ಎಸ್ಎಸ್ ಸಂಘಟನೆಗಳ ಜೊತೆ ಚರ್ಚೆ ಮಾಡಿದ್ದಾರೆ. ಆರ್ಎಸ್ಎಸ್ ರಿಜಿಸ್ಟರ್ ಸಂಸ್ಥೆ ಅಲ್ಲ. ಅದಕ್ಕೆ ಅಕೌಂಟೆಬಿಲಿಟಿ ಇದ್ಯಾ? ಏನಾದ್ರು ಆದ್ರೆ ಅವ್ರನ್ನ ಕೇಳೋಕೆ ಆಗೊಲ್ಲ. ಸಂಘ ಪರಿವಾರದ ಸಿದ್ದಾಂತ ತುಂಬಲು ಬಿಜೆಪಿ ಮುಂದಾಗಿದೆ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳಲ್ಲಿ ಸಂಘ ಪರಿವಾರದ ಸಿದ್ದಾಂತ ತುಂಬಲು ಹೊರಟಿದ್ದಾರೆ . ಈ ಶಿಕ್ಷಣ ನೀತಿಗೆ ನಮ್ಮ ವಿರೋಧ ಇದೆ. ಈ ಹೊಸ ನೀತಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಇರುತ್ತೋ ಇರಲ್ಲವೋ ಗೊತ್ತಿಲ್ಲ. ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಮ್ಮ ವಿರೋಧ ಇದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ನ ನಿಲುವು ತ್ರಿಭಾಷ ಸೂತ್ರ. ಮಾತೃಭಾಷೆ, ಹಿಂದಿ, ಇಂಗ್ಲಿಷ್ ಇರಬೇಕು ಅನ್ನೋದು ನಮ್ಮ ನಿಲುವು. ನೆಹರು ಅವ್ರು ಅದನ್ನೆ ಅನುಷ್ಠಾನ ಮಾಡಿದ್ರು. ರಾಷ್ಟ್ರೀಯ ಶಿಕ್ಷಣ ನೀತಿ ತಂಡ ಉತ್ತರ ಭಾರತದ ರಾಜ್ಯಗಳಿಗೆ ಭೇಟಿಯೇ ಕೊಟ್ಟಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಆರ್.ಎಸ್.ಎಸ್. ಅಂಗ ಸಂಸ್ಥೆಗಳ ಜೊತೆ ಚರ್ಚೆ ಮಾಡಿದೆ. ಈ ನೀತಿಯಲ್ಲಿ ಕೆಲ ಸಂಘಟನೆಗಳ ಹಸ್ತಕ್ಷೇಪ ಕಾಣುತ್ತಿದೆ. ಕಸ್ತೂರಿ ರಂಗನ್ ಹೊರತು ಪಡಿಸಿ ಉಳಿದ ಸದಸ್ಯರು ಆರ್.ಎಸ್.ಎಸ್. ಮೂಲ, ರಾಜಕೀಯ ಮೂಲದಿಂದ ಬಂದವರು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಸದಸ್ಯರ ಬಗ್ಗೆ ಹರಿಪ್ರಸಾದ್ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ನೀತಿ ಖಾಸಗೀಕರಣ ಮಾಡುವ ಹುನ್ನಾರ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.
ಸಂವಿಧಾನ ವಿರೋಧಿ, ಒಕ್ಕೂಟ ವ್ಯವಸ್ಥೆಗೆ ವಿರೋಧವಾಗಿ ಬಿಜೆಪಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿದೆ. ಕೊರೊನಾ ಸಮಯದಲ್ಲಿ ಜನ ಮನೆಯಲ್ಲಿ ಇದ್ದಾಗ ಬಿಜೆಪಿ ಕರಾಳ ಕಾನೂನು, ಕರಾಳ ನೀತಿ ಜಾರಿಗೆ ತಂದಿದೆ. ಕಸ್ತೂರಿ ರಂಗನ್ ಮುಖ ಇಟ್ಟುಕೊಂಡು ಬಿಜೆಪಿ ಇಂತಹ ನೀತಿ ಜಾರಿಗೆ ತಂದಿದೆ. ಹಿಂದಿನ ಶಿಕ್ಷಣ ನೀತಿಯಲ್ಲಿ ಎಲ್ಲಾ ವರ್ಗದ, ಸಮುದಾಯಗಳಿಗೆ ಸಮಾನತೆ ಇತ್ತು. ಆದ್ರೆ ಹೊಸ ನೀತಿಯಲ್ಲಿ ಹಿಂದುಳಿದ, ದಲಿತ ವರ್ಗಕ್ಕೆ ಯಾವುದೇ ಭದ್ರತೆ ಇಲ್ಲ. ಉಚಿತ ಕಡ್ಡಾಯ ಶಿಕ್ಷಣ ಕೂಡ ಎನ್ಇಪಿಯಲ್ಲಿ ಪ್ರಸ್ತಾಪ ಆಗಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ಶಿಕ್ಷಣ ನೀತಿ ಬಗ್ಗೆ ಗೊತ್ತಿಲ್ಲದಿದ್ರೆ ಬೇರೆಯವರ ಬಳಿ ಕೇಳಿ ತಿಳಿಯಲಿ: ಡಿಕೆ ಶಿವಕುಮಾರ್ಗೆ ಅಶ್ವತ್ಥ್ ನಾರಾಯಣ ತಿರುಗೇಟು
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ; ಪೊಲೀಸರ ಲಾಠಿಚಾರ್ಜ್ ವೇಳೆ ಇಬ್ಬರಿಗೆ ಗಾಯ
Published On - 7:56 pm, Thu, 23 September 21