AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೋಲಾರದ ಯುವತಿ ಮುಖ್ಯ ಗಾಯಕಿ!

ಕೋಲಾರದ ಕೆ.ಎಂ. ಶ್ರುತಿ ಅವರು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಗಾಯಕಿಯಾಗಿ ಆಯ್ಕೆಯಾಗಿದ್ದಾರೆ. ಎನ್‌ಸಿಸಿ ಕೆಡೆಟ್ ಆಗಿರುವ ಶ್ರುತಿ ಅವರು ಬೆಂಗಳೂರಿನ ಅಂಬೇಡ್ಕರ್​ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಗೀತದಲ್ಲಿ ಜೂನಿಯರ್‌ ಹಾಗೂ ಸೀನಿಯರ್‌ ಪೂರ್ಣಗೊಳಿಸಿರುವ ಶ್ರುತಿ, ಸದ್ಯ ವಿದ್ವತ್‌ ಕಲಿಯುತ್ತಿದ್ದಾರೆ.

ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೋಲಾರದ ಯುವತಿ ಮುಖ್ಯ ಗಾಯಕಿ!
ಎಂಕೆ ಶ್ರುತಿ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Dec 28, 2024 | 2:35 PM

Share

ಕೋಲಾರ, ಡಿಸೆಂಬರ್​ 28: ನವದೆಹಲಿಯಲ್ಲಿ (Delhi) ನಡೆಯುವ ಗಣರಾಜ್ಯೋತ್ಸವ (Republic Day) ಕಾರ್ಯಕ್ರಮದಲ್ಲಿ ಮುಖ್ಯ ಗಾಯಕಿಯಾಗಿ ಕೋಲಾರದ (Kolar) ಯುವತಿ ಆಯ್ಕೆಯಾಗಿದ್ದಾರೆ. ಹೌದು, ಜನವರಿ 26ರಂದು ಗಣರಾಜ್ಯೋತ್ಸವದ ದಿನ ದೇಶದ ಗಮನ ಸೆಳೆಯುವ ಗಣರಾಜ್ಯೋತ್ಸವ ಫೆರೆಡ್​ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗಾಯಕಿ, ಎನ್‌ಸಿಸಿ ಕೆಡೆಟ್‌ ಕೆ.ಎಂ.ಶ್ರುತಿ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಶಿಬಿರದಲ್ಲಿ ಮುಖ್ಯ ಗಾಯಕಿಯಾಗಿ ಶ್ರುತಿ ಅವರು ಹಾಡಲಿದ್ದಾರೆ. ಶ್ರುತಿ ಎನ್‌ಸಿಸಿ ಬೆಂಗಳೂರು ಗ್ರೂಪ್‌ ‘ಎ’ನಿಂದ ಆಯ್ಕೆಯಾಗಿದ್ದು, ಇವರು ಕರ್ನಾಟಕ ಗೋವಾ ಎನ್‌ಸಿಸಿ ನಿರ್ದೇಶನಾಲಯವನ್ನು ಪ್ರತಿನಿಧಿಸಲಿದ್ದಾರೆ.

ಯಾರು ಈ ಶ್ರುತಿ?

ಸಂಗೀತ ಶಿಕ್ಷಕಿಯಾಗಿರುವ ಕೆ.ಎಂ.ಶ್ರುತಿ ಅವರು ಎನ್‌.ಮಹದೇವ್‌ ಹಾಗೂ ಸಿ.ಎನ್‌.ಕಸ್ತೂರಿ ಅವರ ಜೇಷ್ಠ ಪುತ್ರಿ. ಸದ್ಯ ಬೆಂಗಳೂರಿನ ನಾಗರಬಾವಿಯಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಇನ್ಸ್​ಟ್ಯೂಟ್​ ಆಫ್​ ಟೆಕ್ನಾಲಜಿ ಕಾಲೇಜಿನಲ್ಲಿ ಕಂಪ್ಯೂಟರ್​ ಸೈನ್ಸ್ ವಿಭಾಗದಲ್ಲಿ ಬಿ.ಇ. ಐದನೇ ಸೆಮಿಸ್ಟರ್‌ ಓದುತ್ತಿದ್ದಾರೆ. ಎನ್‌ಸಿಸಿ ಕೆಡೆಟ್ ಆಗಿರುವ ಶ್ರುತಿ ಅವರು ಪ್ರೌಢ ಶಿಕ್ಷಣವನ್ನು ಕೋಲಾರದ ಸುವರ್ಣ ಸೆಂಟ್ರಲ್‌ ಶಾಲೆಯಲ್ಲಿ ಪೂರ್ಣಗೊಳಿಸಿ, ವಿದ್ಯಾಜ್ಯೋತಿ ಶಾಲೆಯಲ್ಲಿ ಪಿಯುಸಿ ವ್ಯಾಸಾಂಗ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಅಂಬೇಡ್ಕರ್ ಕಾಲೇಜಿನಲ್ಲಿ ಎಂಜಿನಿಯರಿಂಗ್​ ಓದುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದಷ್ಟೇ ಶ್ರುತಿ ಎನ್​ಸಿಸಿಗೆ ಸೇರಿದ್ದರು.

ಇದನ್ನೂ ಓದಿ: Republic Day: ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಂಬೇಡ್ಕರ್ ​​ಭಾವಚಿತ್ರ ಕಡ್ಡಾಯ: ಸರ್ಕಾರ ಆದೇಶ

ಆಯ್ಕೆಯಾಗಿದ್ದು ಹೇಗೆ?

ಕಳೆದ ಆರು ತಿಂಗಳಿಂದ ವಿವಿಧೆಡೆ ಒಂಬತ್ತು ಶಿಬಿರಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದ ನಂತರ ಈ ಅವಕಾಶ ಶ್ರುತಿ ಅವರ ಪಾಲಿಗೆ ಒಲಿದು ಬಂದಿದೆ. ರಾಜ್ಯದಲ್ಲಿ ಸುಮಾರು 80 ಸಾವಿರ ಎನ್‌ಸಿಸಿ ಕೆಡೆಟ್‌ಗಳಿದ್ದಾರೆ. ಅವರಲ್ಲಿ ಶ್ರುತಿ ಕರ್ನಾಟಕ-ಗೋವಾ ಎನ್‌ಸಿಸಿ ನಿರ್ದೇಶನಾಲಯ ಪ್ರತಿನಿಧಿಸಿಯಾಗಿ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ-ಗೋವಾ ಎನ್‌ಸಿಸಿ ನಿರ್ದೇಶನಾಲಯದಿಂದ ಶ್ರುತಿ ಸೇರಿದಂತೆ ಒಟ್ಟು 124 ಕೆಡೆಟ್‌ಗಳು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಆ ಪೈಕಿ ಇದೇ ಡಾ.ಬಿ.ಆರ್‌.ಅಂಬೇಡ್ಕರ್‌ ಎಂಜಿನಿಯರಿಂಗ್​ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಎನ್‌.ವಿಶ್ವಾಸ್‌ ಅವರು ಕೂಡಾ ಪಿ.ಎಂ ರ‍್ಯಾಲಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಶ್ರುತಿಗೆ ತಾಯಿಯೇ ಗುರು!

ಹೌದು, ಗಣರಾಜ್ಯೋತ್ಸವ ಪೆರೆಡ್​ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಗಾಯಕಿಯಾಗಿ ಅವಕಾಶ ಪಡೆದುಕೊಂಡಿರುವ ಶ್ರುತಿ ಅವರಿಗೆ ತಾಯಿ ಕಸ್ತೂರಿ ಅವರೇ ಗುರು. ತಾಯಿ ಸಂಗೀತ ಶಿಕ್ಷಕಿಯಾಗಿದ್ದು ತಾಯಿಯ ಪ್ರೇರಣೆಯಿಂದಲೇ ತಾನು ಸಂಗೀತದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಶ್ರುತಿ ಹೇಳಿದರು. ಸಂಗೀತದಲ್ಲಿ ಜೂನಿಯರ್‌ ಹಾಗೂ ಸೀನಿಯರ್‌ ಪೂರ್ಣಗೊಳಿಸಿರುವ ಶ್ರುತಿ, ಸದ್ಯ ವಿದ್ವತ್‌ ಕಲಿಯುತ್ತಿದ್ದಾರೆ. ಹಲವು ಸ್ಥಳೀಯ ಸಂಗೀತ ಸ್ವರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿರುವ ಶ್ರುತಿ ಅವರಿಗೆ ಇದು ಜೀವನದಲ್ಲಿ ಮರೆಯಲಾಗ ಕ್ಷಣ ಎಂದರು .

ದೇಶದ ಪ್ರತಿಷ್ಠೆಯ ಸಂಕೇತ ಎನ್ನುವ ರೀತಿಯಲ್ಲಿ ಗಣರಾಜ್ಯೋತ್ಸವ ಫೆರೆಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದೇಶ ಹಾಗೂ ವಿದೇಶಗಳ ಗಮನ ಸೆಳೆಯುತ್ತದೆ. ಅಲ್ಲಿ ವಿಶೇಷ ಆಕರ್ಷಣೆಯಾಗಿ, ಧ್ವಜವಂದನೆ, ಪಿಎಂ ರ‍್ಯಾಲಿ, ಆಕರ್ಶಕ ಪೆರೇಡ್‌, ವಾಯುಸೇನೆ, ನೌಕಾಸೇನೆ, ಭೂಸೇನೆಯ ವಿವಿಧ ವಿಭಾಗಗಳ ಕಸರತ್ತು, ಅದರ ಜೊತೆಗೆ ಅತ್ಯಾಕರ್ಶಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಬ್ದಚಿತ್ರಗಳ ಮೆರವಣಿಗೆ ನಡೆಯುತ್ತವೆ.

Kolar Mk Shruti (1)

ಎಂಕೆ ಶ್ರುತಿ ಮತ್ತು ತಂಡ

ಇಂಥಹದೊಂದು ಕಾರ್ಯಕ್ರಮಗಳನ್ನು ನಾವು ಮನೆಯಲ್ಲಿ ಕೂತು ಟಿವಿ ಅಥವಾ ಪೇಪರ್​ನಲ್ಲಿ ನೋಡುತ್ತಿದ್ದೆವು, ಈಗ ರಾಷ್ಟ್ರಪತಿ, ಪ್ರಧಾನ ಮಂತ್ರಿ ಅವರ ಎದುರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುತ್ತಿರುವ ಬಹಳ ಖುಷಿ ತಂದಿದೆ, ಇದು ನನ್ನ ಜೀವನದ ಅತ್ಯಂತ ಮಹತ್ವಪೂರ್ಣ ಕ್ಷಣ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಶ್ರುತಿ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ಕಾರ್ಯಕ್ರಮದ ನಿಮಿತ್ತ ಈಗಾಗಲೇ ಶ್ರುತಿ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ನಡೆಯುವ ಪೂರ್ವಭಾವಿ ತಾಲೀಮು ಹಾಗೂ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಒಟ್ಟಾರೆಯಾಗಿ ಚಿನ್ನದ ನಾಡು ಕೋಲಾರದ ಯವತಿಯೊಬ್ಬಳು ದೇಶದ ಹೆಮ್ಮಯ ಪ್ರತೀಕ ಗಣರಾಜ್ಯೋತ್ಸವ ಪೆರೇಡ್​ ಹಾಗೂ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದು ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ವಿಚಾರವೇ ಸರಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:34 pm, Sat, 28 December 24