Karnataka Politics: ಮುಂದಿನ ಚುನಾವಣೆಯಲ್ಲಿ 6-7 ಬಿಜೆಪಿ ಸಂಸದರಿಗೆ ಟಿಕೆಟ್ ಇಲ್ಲ; ಏನಿದು ಲೆಕ್ಕಾಚಾರ?
ಬಿಜೆಪಿ ಪಕ್ಷ ಈಗ ಮೊದಲಿನಂತೆ ಇಲ್ಲ. ಬಿಜೆಪಿ ಪಕ್ಷದಲ್ಲಿ ವೈಯಕ್ತಿಕ ಸಾಧನೆ, ಜನಪ್ರಿಯತೆ, ವರ್ಚಸ್ಸು, ಗೆಲ್ಲುವ ಸಾಮರ್ಥ್ಯ, ವಯಸ್ಸು, ಪಕ್ಷ ನಿಷ್ಠೆ ಎಲ್ಲವನ್ನೂ ಪರಿಗಣಿಸಿ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲಾಗುತ್ತೆ.
ಬೆಂಗಳೂರು: ಬಿಜೆಪಿ ಪಕ್ಷದಲ್ಲಿ 75 ವರ್ಷ ದಾಟಿದವರಿಗೆ ಪ್ರಮುಖ ಹುದ್ದೆ, ಸ್ಥಾನಮಾನ, ಅಧಿಕಾರ ನೀಡಲ್ಲ ಎಂಬ ಅಲಿಖಿತ ನಿಯಮವು 2014ರಿಂದ ಜಾರಿಯಲ್ಲಿದೆ. ಈ ನಿಯಮವನ್ನು 2024ರ ಲೋಕಸಭಾ ಚುನಾವಣೆಗೆ ಅನ್ವಯಿಸಿದರೆ, ಬಿಜೆಪಿ ಪಕ್ಷವು ಕರ್ನಾಟಕದ ಘಟಾನುಘಟಿ ಸಂಸದರಿಗೆ ಮುಂದಿನ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವಂತಿಲ್ಲ. ಜೊತೆಗೆ ಕೆಲ ಲೋಕಸಭಾ ಸದಸ್ಯರು ಈಗಾಗಲೇ ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಘೋಷಣೆ ಮಾಡಿದ್ದಾರೆ. ಇನ್ನೂ ಕೆಲವರು ಚುನಾವಣೆಗೆ ಸ್ಪರ್ಧೆ ಮಾಡದಿರಲು ಮಾನಸಿಕವಾಗಿ ಸಿದ್ಧವಾಗಿದ್ದಾರೆ.
ಕರ್ನಾಟಕದಲ್ಲಿ ಕಳೆದ ಶನಿವಾರದಿಂದ ಬಿಜೆಪಿಯ ಲೋಕಸಭಾ ಸದಸ್ಯರೊಬ್ಬರ ಖಾಸಗಿ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿದ್ದರ ಬಗ್ಗೆ ಚರ್ಚೆಯಾಗುತ್ತಿದೆ. ಅದರ ಜೊತೆಗೇ ಆ ಲೋಕಸಭಾ ಸದಸ್ಯರಿಗೆ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಲ್ಲ ಎಂಬ ಮಾತನ್ನು ಬಿಜೆಪಿ ನಾಯಕರು ಕೂಡ ಹೇಳುತ್ತಿದ್ದಾರೆ. ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ಹಿನ್ನಡೆ ಅನುಭವಿಸಿದ್ದವರಿಗೆ ಈಗ ವಿಡಿಯೋ ಸೋರಿಕೆಯಿಂದ ಮತ್ತಷ್ಟು ಮುಜುಗರ, ಮಾನಸಿಕ ಯಾತನೆ ಕೂಡ ಆಗುತ್ತಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ತಮ್ಮದಲ್ಲ ಎಂದು ಸಂಸದರು ಸ್ಪಷ್ಟನೆಯನ್ನು ನೀಡಿದ್ದಾರೆ.
ಆದರೆ, ಬಿಜೆಪಿ ಪಕ್ಷ ಈಗ ಮೊದಲಿನಂತೆ ಇಲ್ಲ. ಬಿಜೆಪಿ ಪಕ್ಷದಲ್ಲಿ ವೈಯಕ್ತಿಕ ಸಾಧನೆ, ಜನಪ್ರಿಯತೆ, ವರ್ಚಸ್ಸು, ಗೆಲ್ಲುವ ಸಾಮರ್ಥ್ಯ, ವಯಸ್ಸು, ಪಕ್ಷ ನಿಷ್ಠೆ ಎಲ್ಲವನ್ನೂ ಪರಿಗಣಿಸಿ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲಾಗುತ್ತೆ. ಇವುಗಳಲ್ಲಿ ಕೆಲವೊಂದು ಮಾನದಂಡ ಪೂರೈಸದವರಿಗೆ ಟಿಕೆಟ್ ನಿರಾಕರಿಸಿದ ಹತ್ತಾರು ಉದಾಹರಣೆಗಳಿವೆ. ಈಗ ಕರ್ನಾಟಕದಲ್ಲಿ ಹಾಲಿ 25 ಮಂದಿ ಬಿಜೆಪಿಯ ಲೋಕಸಭಾ ಸದಸ್ಯರಿದ್ದಾರೆ. ಇವರ ಪೈಕಿ ಕನಿಷ್ಠ ಆರೇಳು ಮಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಬೇರೆ ಬೇರೆ ಕಾರಣಗಳಿಗೆ ಟಿಕೆಟ್ ನೀಡಲ್ಲ ಎಂಬುದು ಈಗ ಚರ್ಚೆಯಾಗುತ್ತಿದೆ. ಬಿಜೆಪಿಯ ಕೆಲ ಲೋಕಸಭಾ ಸದಸ್ಯರೇ ಮಾನಸಿಕವಾಗಿ ಬಿಜೆಪಿಯಿಂದ ದೂರ ಸರಿದು ಬಿಟ್ಟಿರುವುದು ಕೂಡ ವಾಸ್ತವ. ಇನ್ನೂ ಕೆಲವರು ವಯಸ್ಸಿನ ಕಾರಣದಿಂದ ಮತ್ತೆ ಲೋಕಸಭೆಗೆ ಸ್ಪರ್ಧೆ ಮಾಡುವ ಉತ್ಸಾಹ, ಆಸಕ್ತಿಯನ್ನು ಹೊಂದಿಲ್ಲ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯ ವಿ.ಶ್ರೀನಿವಾಸ್ ಪ್ರಸಾದ್ ಸದ್ಯ ಮಾನಸಿಕವಾಗಿ ಬಿಜೆಪಿಯಿಂದ ದೂರವಾಗಿದ್ದಾರೆ. ಕೆಲವೊಮ್ಮೆ ಪ್ರಧಾನಿ ಮೋದಿ ವಿರುದ್ಧವೇ ಬಹಿರಂಗವಾಗಿ 2019ರ ಬಳಿಕ ಮಾತನಾಡಿದ್ದಾರೆ. ಇನ್ನೂ ಕೆಲವೊಮ್ಮೆ ಕರ್ನಾಟಕದ ಬಿಜೆಿಪಿಯ ಆಗ್ರಗಣ್ಯ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧವೂ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅವರಿಗೆ ಈಗಾಗಲೇ 74 ವರ್ಷ ವಯಸ್ಸು. 2024ರ ಲೋಕಸಭಾ ಚುನಾವಣೆ ವೇಳೆಗೆ 77 ವರ್ಷ ವಯಸ್ಸಾಗುತ್ತೆ. ಹೀಗಾಗಿ ವಿ.ಶ್ರೀನಿವಾಸ್ ಪ್ರಸಾದ್ ಬಿಜೆಪಿಯಲ್ಲೇ ಉಳಿದರೂ ಕೂಡ ಮುಂದಿನ ಲೋಕಸಭಾ ಚುನಾವಣೆಗೆ ಮತ್ತೆ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆ.
ಇನ್ನೂ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಿ.ಎನ್. ಬಚ್ಚೇಗೌಡ ಕೂಡ ಮಾನಸಿಕವಾಗಿ ಬಿಜೆಪಿಯಿಂದ ದೂರ ಸರಿದಿದ್ದಾರೆ. ಬಿಜೆಪಿಯ ಪಕ್ಷದ ಸಂಘಟನೆಯ ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ಆಯ್ಕೆಯಾಗಿದ್ದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಈಗಾಗಲೇ ಕಾಂಗ್ರೆಸ್ ಪಕ್ಷದ ಸಹ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ. ಆದರೆ, ಬಿ.ಎನ್. ಬಚ್ಚೇಗೌಡರು, ತಾವು ಬಿಜೆಪಿಯ ಚಿಹ್ನೆಯಿಂದ ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಈ ಲೋಕಸಭೆಯ ಅವಧಿ ಮುಗಿಯುವವರೆಗೂ ಕಾನೂನು ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಬಿಜೆಪಿಯಲ್ಲೇ ಮುಂದುವರಿಯುತ್ತಾರೆ. ಈಗಲೇ ಬೇರೆ ಪಕ್ಷ ಸೇರಲು ಯತ್ನಿಸಿದರೆ, ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತೆ. 2009, 2014ರಲ್ಲಿ ಸೋತು, 2019ರಲ್ಲಿ ಗೆದ್ದಿರುವ ಲೋಕಸಭಾ ಸದಸ್ಯ ಸ್ಥಾನಕ್ಕೆ ಈಗ ರಾಜೀನಾಮೆ ನೀಡುವುದು ಜಾಣ ನಡೆಯಲ್ಲ ಎಂಬ ಕಾರಣಕ್ಕೆ ಹಿರಿಯ ರಾಜಕಾರಣಿಯೂ ಆಗಿರುವ ಬಿ.ಎನ್. ಬಚ್ಚೇಗೌಡ ಬಿಜೆಪಿ ಲೋಕಸಭಾ ಸದಸ್ಯರಾಗಿ ಮುಂದುವರಿದಿದ್ದಾರೆ. ಬಚ್ಚೇಗೌಡರು ಎಂದೂ ಬಿಜೆಪಿ ವಿರುದ್ಧ ಬಹಿರಂಗವಾಗಿ ಮಾತನಾಡಿಲ್ಲ. ಬಚ್ಚೇಗೌಡರು ಈಗ ಚಿಕ್ಕಬಳ್ಳಾಪುರದ ಕಡೆ ಭೇಟಿ ನೀಡುವುದು ಕೂಡ ಅಪರೂಪವಾಗಿದೆ. ಬಚ್ಚೇಗೌಡರಿಗೆ ಆರೋಗ್ಯದ ಸಮಸ್ಯೆ ಇದೆ. ಜೊತೆಗೆ ಮುಂದಿನ ಚುನಾವಣೆಗೆ ಬಚ್ಚೇಗೌಡರು ಸ್ಪರ್ಧೆ ಮಾಡಲ್ಲ ಎಂದು ಆಪ್ತರು ಹೇಳಿದ್ದಾರೆ.
ಇನ್ನೂ ಮಾಜಿ ಪ್ರಧಾನಿ ದೇವೇಗೌಡರನ್ನು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಿ ರಾಜಕಾರಣದ ದೈತ್ಯ ಸಂಹಾರಿ (Giant killer) ಆಗಿ ಹೊರಹೊಮ್ಮಿರುವ ಜಿ.ಎಸ್. ಬಸವರಾಜು ಅವರು ಕೂಡ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆಗಳಿಲ್ಲ. ಜಿ.ಎಸ್.ಬಸವರಾಜು ಅವರಿಗೆ ಈಗಾಗಲೇ 80 ವರ್ಷ ವಯಸ್ಸಾಗಿದೆ. ಮುಂದಿನ ಲೋಕಸಭಾ ಚುನಾವಣೆೆ ವೇಳೆಗೆ 83 ವರ್ಷ ವಯಸ್ಸಾಗುತ್ತದೆ. ಹೀಗಾಗಿ 2009ರ ಲೋಕಸಭಾ ಚುನಾವಣೆಯೇ ತಮ್ಮ ಕೊನೆಯ ಚುನಾವಣೆ ಎಂದಿದ್ದ ಜಿ.ಎಸ್. ಬಸವರಾಜು ಅವರ ಪಾಲಿಗೆ 2019ರ ಲೋಕಸಭಾ ಚುನಾವಣೆಯೇ ಕೊನೆಯ ಚುನಾವಣೆ ಆಗಬಹುದು. ಜೊತೆಗೆ ವಯಸ್ಸಿನ ಕಾರಣದಿಂದ ಬಿಜೆಪಿ ಹೈಕಮಾಂಡ್ 2024ರಲ್ಲಿ ಜಿ.ಎಸ್.ಬಸವರಾಜು ಅವರಿಗೆ ಟಿಕೆಟ್ ನಿರಾಕರಿಸಬಹುದು. ವಯಸ್ಸಿನ ಕಾರಣದಿಂದ ನಾನು ಮುಂದಿನ ಲೋಕಸಭಾ ಚುನಾವಣೆಗೆ ನಿಲ್ಲಲ್ಲ ಎಂದು ಜಿ.ಎಸ್. ಬಸವರಾಜು ತುಮಕೂರಿನ ಪತ್ರಕರ್ತರ ಜೊತೆ ಹೇಳಿದ್ದಾರೆ.
2024ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ದೊಡ್ಡ ಆಕಾಂಕ್ಷಿಗಳ ದಂಡೇ ಇದೆ. ಸಂಘ ಪರಿವಾರದ ಹಿನ್ನಲೆಯವರು, ಮಾಜಿ ಶಾಸಕರು ಕೂಡ ಲೋಕಸಭಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೊತೆಗೆ ತುಮಕೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ವಿ.ಸೋಮಶೇಖರ್ ತುಮಕೂರಿನ ಬಿಜೆಪಿ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನಿವೃತ್ತ ಜಿಲ್ಲಾಧಿಕಾರಿ ವಿ.ಸೋಮಶೇಖರ್ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಈ ಹಿಂದೆಯೇ ಬಿಜೆಪಿ ಸೇರಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಗೆ ಇತ್ತೀಚೆಗೆ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ನೀಡಿದ್ದರು. ತುಮಕೂರು ನಗರದ ರಿಯಲ್ ಎಸ್ಟೇಟ್ ಉದ್ಯಮಿ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೇ, ಈಗ ತಾವು ಆರ್‌ಎಸ್ಎಸ್ ಕಾರ್ಯಕರ್ತರಾಗಿದ್ದೆ ಎಂದು ತುಮಕೂರು ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇನ್ನೂ ಬಾಗಲಕೋಟೆ ಕ್ಷೇತ್ರದ ಪಿ.ಸಿ.ಗದ್ದಿಗೌಡರ್ ಸೇರಿದಂತೆ ಕೆಲವರಿಗೆ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಉತ್ಸಾಹ, ಹುಮ್ಮಸ್ಸು ಇಲ್ಲ. ಕೆಲವರು ರಾಜ್ಯ ರಾಜಕಾರಣದತ್ತ ದೃಷ್ಟಿ ಹಾಯಿಸಿದ್ದಾರೆ. ಬೆಂಗಳೂರಿನ ಓರ್ವ ಲೋಕಸಭಾ ಸದಸ್ಯರಿಗೂ ಖಾಸಗಿ ಕ್ಷಣಗಳ ವಿಡಿಯೋ ರಾಜಕೀಯ ಬದುಕಿಗೆ ಅಪತ್ತು ತರುವ ಸಾಧ್ಯತೆಯೂ ಇದೆ.
ಜೊತೆಗೆ ಲೋಕಸಭಾ ಸದಸ್ಯರಾಗಿ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಈ ಮೊದಲು ಪ್ರತಿಯೊಬ್ಬ ಲೋಕಸಭಾ ಸದಸ್ಯರಿಗೂ ವರ್ಷಕ್ಕೆ ತಲಾ 5 ಕೋಟಿ ರೂಪಾಯಿ ಕ್ಷೇತ್ರಾಭಿವೃದ್ದಿ ಅನುದಾನ ನೀಡಲಾಗುತ್ತಿತ್ತು. ಈ ಹಣವನ್ನು ಯಾವ ಯಾವ ಕೆಲಸ, ಊರುಗಳಿಗೆ ನೀಡಬೇಕೆಂಬುದನ್ನು ಲೋಕಸಭಾ ಸದಸ್ಯರೇ ನಿರ್ಧರಿಸಿ, ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡುತ್ತಿದ್ದರು. ಆದರೇ, ಈಗ ಕೊರೊನಾ ಕಾರಣದಿಂದ ಎಂಪಿ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯನ್ನು ನೀಡುತ್ತಿಲ್ಲ. ಇದು ಹಿರಿಯ ಲೋಕಸಭಾ ಸದಸ್ಯರ ನಿರುತ್ಸಾಹಕ್ಕೆ ಕಾರಣವಾಗಿದೆ. ಈಗ ಅಭಿವೃದ್ದಿ ಕಾರ್ಯಗಳ ಅನುದಾನಕ್ಕಾಗಿ ರಾಜ್ಯ ಸರ್ಕಾರದತ್ತ ನೋಡಬೇಕಾಗಿದೆ.
ಬಿಜೆಪಿ ಪಕ್ಷವು ವಯಸ್ಸು, ಅನಾರೋಗ್ಯದ ಕಾರಣದಿಂದಲೇ ರಾಷ್ಟ್ರ ಮಟ್ಟದ ಘಟಾನುಘಟಿ ನಾಯಕರುಗಳಿಗೆ ಲೋಕಸಭಾ ಟಿಕೆಟ್ ನಿರಾಕರಿಸಿದೆ. ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಷಿಗೆ ವಯಸ್ಸಿನ ಕಾರಣದಿಂದ ಮೋದಿ ಜಮಾನದಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಅನಾರೋಗ್ಯದ ಕಾರಣದಿಂದ ಸುಷ್ಮಾ ಸ್ವರಾಜ್, ಉಮಾಭಾರತಿ, ಅರುಣ್ ಜೇಟ್ಲಿ ಲೋಕಸಭೆ ಚುನಾವಣೆಗೆ ತಾವಾಗಿಯೇ ಸ್ಪರ್ಧೆ ಮಾಡದೆ ಹಿಂದೆ ಸರಿದಿದ್ದರು.
ಇದನ್ನೂ ಓದಿ: ಹೈಕೋರ್ಟ್ನಿಂದ ಜಿಪಂ ಚುನಾವಣೆ ಅಧಿಸೂಚನೆ ರದ್ದು: ಮುಂದೂಡಿಕೆ ಅನಿವಾರ್ಯ
ಓಂ ಬಿರ್ಲಾರಿಂದ ಜಂಟಿ ಅಧಿವೇಶನ: ಬಿಜೆಪಿಯಿಂದ ಕೆಟ್ಟ ಸಂಪ್ರದಾಯ; ಕಾರ್ಯಕ್ರಮ ಬಹಿಷ್ಕಾರಕ್ಕೆ ಕಾಂಗ್ರೆಸ್ ನಿರ್ಧಾರ
(BJP Decided not to Give ticket to 7 MPs for Next Election amid of Age Limit)