ಅಬ್ಬಾ! ನಮ್ಮ ಮೆಟ್ರೋ ರೈಲನ್ನೇ ತಡೆದು ನಿಲ್ಲಿಸಿದ ಪ್ರಯಾಣಿಕರು: ಕೇಸ್ ಬುಕ್

ನಮ್ಮ ಮೆಟ್ರೋ ರೈಲನ್ನೇ ಪ್ರಯಾಣಿಕರು ತಡೆದು ನಿಲ್ಲಿಸಿರುವಂತಹ ಘಟನೆ ಬೆಂಗಳೂರಿನ ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೆಟ್ರೋ ಸಂಚಾರ ವಿಳಂಬ ಖಂಡಿಸಿ ರೈಲು ತಡೆದಿದ್ದರು. ಇದೀಗ ಮೆಟ್ರೋ ರೈಲು ತಡೆದಿದ್ದ ಪ್ರಯಾಣಿಕರ ವಿರುದ್ಧ BMRCL​ ಅಧಿಕಾರಿಗಳಿಂದ ಜಯನಗರ ಠಾಣೆಗೆ ದೂರು ನೀಡಲಾಗಿದೆ.

ಅಬ್ಬಾ! ನಮ್ಮ ಮೆಟ್ರೋ ರೈಲನ್ನೇ ತಡೆದು ನಿಲ್ಲಿಸಿದ ಪ್ರಯಾಣಿಕರು: ಕೇಸ್ ಬುಕ್
ಮೆಟ್ರೋ ತಡೆದಿದ್ದ ಪ್ರಯಾಣಿಕರು
Edited By:

Updated on: Nov 17, 2025 | 9:30 PM

ಬೆಂಗಳೂರು, ನವೆಂಬರ್​ 17: ನಮ್ಮ ಮೆಟ್ರೋ (Namma Metro) ಸಂಚಾರ ವಿಳಂಬ ಖಂಡಿಸಿ ರೈಲು ತಡೆದಿದ್ದ ಪ್ರಯಾಣಿಕರ ವಿರುದ್ಧ ಇದೀಗ ಬೆಂಗಳೂರಿನ ಜಯನಗರ ಠಾಣೆಗೆ ದೂರು ನೀಡಲಾಗಿದೆ. ಕೆಲ ಪ್ರಯಾಣಿಕರ ನಡೆಯಿಂದಾಗಿ ಇತರೆ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳಿಂದ ದೂರು ನೀಡಲಾಗಿದೆ.

ನಡೆದದ್ದೇನು?

ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಮುಂಜಾನೆ 5 ಗಂಟೆ ಬದಲಿಗೆ 6 ಗಂಟೆಗೆ ಮೆಟ್ರೋ ಸಂಚಾರ ಹಿನ್ನೆಲೆ ಮೆಟ್ರೋ ರೈಲಿನ ಡೋರ್ ಕ್ಲೋಸ್ ಆಗಲು ಬಿಡದೆ ತಡೆದಿದ್ದಾರೆ. ಇದರಿಂದಾಗಿ 6 ಗಂಟೆ ಬದಲು 6.30ಕ್ಕೆ ಮೆಟ್ರೋ ಸಂಚಾರ ಆರಂಭವಾಗಿದೆ. ಹೀಗಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್​​ನಿಂದ, ಬೊಮ್ಮಸಂದ್ರ ಕಡೆಗೆ ಶಾರ್ಟ್ ಲೂಪ್ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಜಯನಗರ ಪೊಲೀಸ್ ಠಾಣೆಗೆ BMRCL ಅಧಿಕಾರಿಗಳು ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?

ದೂರುದಾರ ಇಂದು ಬೆಳಿಗ್ಗೆ 5.30 ಗಂಟೆಗೆ ರಾಷ್ಟ್ರೀಯ ವಿದ್ಯಾಲಯ ಮೆಟ್ರೋ ನಿಲ್ದಾಣ (ಹಳದಿ ಮಾರ್ಗ)ದಿಂದ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ. ಹಸಿರು ಮಾರ್ಗದಲ್ಲಿ, ಪ್ರಯಾಣಿಸಿ ಬಂದು ಹಳದಿ ಮಾರ್ಗದ ಪಥ ಬದಲಾವಣೆಗಾಗಿ ಕಾಯುತ್ತಿದ್ದ ಪ್ರಯಾಣಿಕರ ಪೈಕಿ ಸುಮಾರು 10 ರಿಂದ 15 ಜನರ ಗುಂಪು ಹಳದಿ ಮಾರ್ಗದಲ್ಲಿ ಇನ್ನು ಏಕೆ ರೈಲು ಬರುತ್ತಿಲ್ಲ ಎಂದು ಏರು ಧ್ವನಿಯಲ್ಲಿ ಕೇಳುತ್ತಿದ್ದರು. ಆಗ ದೂರುದಾರ ಹಳದಿ ಮಾರ್ಗದಲ್ಲಿ ರೈಲು 6 ಗಂಟೆಗೆ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ಎಂದಿನಂತೆ ಹಳದಿ ಮಾರ್ಗದಲ್ಲಿ ಸಂಚರಿಸಿರುವ ರೈಲು ಬೆಳಿಗ್ಗೆ 6ಗಂಟೆಗೆ ಪ್ಲಾಟ್‌​ಫಾರಂ 3ರಿಂದ ಹೊರಡಲು ಸುಮಾರು 05.55ಕ್ಕೆ ಬಂದಿರುತ್ತದೆ. ಆದರೆ ಅಪರಿಚಿತ ಆಸಾಮಿಗಳು ಮೆಟ್ರೋ ರೈಲು ಸಂಚರಿಸಲು ಬಿಡದೇ ಬಾಗಿಲಿನಲ್ಲಿ ಕಾಲನ್ನು ಇಟ್ಟು ಆಡಚಣೆ ಉಂಟು ಮಾಡಿ ತಡೆದಿರುತ್ತಾರೆ ಹಾಗೂ ಸಹ ಪ್ರಯಾಣಿಕರನ್ನು ಹುರಿದುಂಬಿಸಿ, ಕಾನೂನು ಬಾಹಿರವಾಗಿ ಒತ್ತಾಯ ಪೂರ್ವಕವಾಗಿ ರೈಲಿನ ಬಾಗಿಲು ಹಾಕಲು ಬಿಡದೆ, ಮೆಟ್ರೋ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುತ್ತಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು – ತುಮಕೂರು ಮೆಟ್ರೋ ಯೋಜನೆ ಡಿಪಿಆರ್​ಗೆ ಬಿಡ್ ಕರೆದ ಬಿಎಂಆರ್ ಸಿಎಲ್

ಮೆಟ್ರೋ ರೈಲು ನಿರ್ವಾಹಕ ಅಜೀತ್ ಜೆ, ಅವರು ಬಂದು ಸಮಯದ ಅಭಾವ ಆಗಿದೆ, ರೈಲು ಹೋಗಲು ಬಿಡುವಂತೆ ಹೇಳಿದರೂ ಮೆಟ್ರೋ ಬಾಗಿಲು ಮುಚ್ಚಲು ಬಿಡದೆ ರೈಲು ನಿಲಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಸುಮಾರು 35 ನಿಮಿಷಗಳ ಕಾಲ ತಡೆಹಿಡಿದು ಇತರೆ ಪ್ರಯಾಣಿಕರಿಗೂ ಸಂಚರಿಸಲು ತೊಂದರೆನ್ನುಂಟು ಮಾಡಿರುತ್ತಾರೆ. ಹೀಗಾಗಿ ಕರ್ತವ್ಯಕ್ಕೆ ಅಡ್ಡಿಪರಿಸಿದ ಪ್ರಯಾಣಿಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:04 pm, Mon, 17 November 25