ಬೆಂಗಳೂರು: ಕನಕಪುರ ರೋಡ್ ಜಂಕ್ಷನ್, ಕಾಮಾಕ್ಯ ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಡಬಲ್ ಡೆಕ್ಕರ್ ಫ್ಲೈಓವರ್

| Updated By: Ganapathi Sharma

Updated on: Dec 16, 2024 | 8:04 AM

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕನಕಪುರ ಮತ್ತು ಕಾಮಾಕ್ಯ ಜಂಕ್ಷನ್​ನಲ್ಲಿ ಪ್ರತಿದಿನ ವಾಹನ ಸವಾರರು ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಅದಕ್ಕೆ ಬ್ರೇಕ್ ಹಾಕಲು ನಮ್ಮ ಮೆಟ್ರೋ ಎರಡೆರಡು ಡಬಲ್ ಡೆಕ್ಕರ್ ಮೊರೆ ಹೋಗಿದೆ.

ಬೆಂಗಳೂರು: ಕನಕಪುರ ರೋಡ್ ಜಂಕ್ಷನ್, ಕಾಮಾಕ್ಯ ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಡಬಲ್ ಡೆಕ್ಕರ್ ಫ್ಲೈಓವರ್
ರಾಗಿಗುಡ್ಡ ಟು ಸೆಂಟ್ರಲ್ ಸಿಲ್ಕ್ ಬೋರ್ಡ್ ಡಬಲ್ ಡೆಕ್ಕರ್ ಫ್ಲೈಓವರ್
Follow us on

ಬೆಂಗಳೂರು, ಡಿಸೆಂಬರ್ 16: ಜೆಪಿ ನಗರ ಮೆಟ್ರೋ ಸ್ಟೇಷನ್​​ನಿಂದ ಕೆಂಪಾಪುರ ಮಾರ್ಗಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಈ ಆರೆಂಜ್ ಮಾರ್ಗದಲ್ಲಿ ಎರಡು ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಅಸ್ತು ಎಂದಿದೆ. 507 ಕೋಟಿ ರುಪಾಯಿ ವೆಚ್ಚದಲ್ಲಿ ಜೆಪಿ ನಗರ ಮೆಟ್ರೋ ಸ್ಟೇಷನ್ ಬಳಿಯ ಕನಕಪುರ ರೋಡ್ ಜಂಕ್ಷನ್​ನಲ್ಲಿ ಒಂದು ಡಬಲ್ ಡೆಕ್ಕರ್ ಫ್ಲೈ ಓವರ್ ಹಾಗೂ ಕಾಮಾಕ್ಯ ಜಂಕ್ಷನ್​ನಲ್ಲಿ ಮತ್ತೊಂದು ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ಬಿಎಂಆರ್​ಸಿಎಲ್ ಮುಂದಾಗಿದೆ.

ಒಂದೇ ಮೆಟ್ರೋ ಮಾರ್ಗದಲ್ಲಿ ಎರಡು ಡಬಲ್ ಡೆಕ್ಕರ್: ದಕ್ಷಿಣ ಭಾರತದಲ್ಲೇ ಮೊದಲು

ಇದರೊಂದಿಗೆ, ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಒಂದೇ ಮೆಟ್ರೋ ಮಾರ್ಗದಲ್ಲಿ ಎರಡು ಡಬಲ್ ಡೆಕ್ಕರ್ ಫ್ಲೈ ಓವರ್‌ ನಿರ್ಮಾಣ ಮಾಡಿದ ಹೆಗ್ಗಳಿಗೆ ಬೆಂಗಳೂರಿನದ್ದಾಗಲಿದೆ‌. ಕೆಳಗಡೆ ವಾಹನಗಳು, ಮಧ್ಯ ಭಾಗದಲ್ಲಿ ಫ್ಲೈ ಓವರ್ ಅದರ ಮೇಲ್ಭಾಗದಲ್ಲಿ ಮೆಟ್ರೋ ರೈಲು ಸಂಚಾರ ಮಾಡಲಿದೆ.‌

ಎರಡು ಡಬಲ್ ಡೆಕ್ಕರ್ ಫ್ಲೈ ಓವರ್‌ ನಿರ್ಮಾಣದ ಬಗ್ಗೆ ಬಿಎಂಆರ್​ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಮಾಹಿತಿ ನೀಡಿದ್ದಾರೆ.

‌ಕೇಂದ್ರ ಸರ್ಕಾರ ಈಗಾಗಲೇ ಫೇಸ್ – 3 ನ ಕಾರಿಡಾರ್- 1 ಜೆಪಿನಗರ ನಾಲ್ಕನೇ ಹಂತದಿಂದ ಕೆಂಪಾಪುರ ( 32.15) ಕಿಮೀ ಮತ್ತು ಕಾರಿಡಾರ್ – 2 ಹೊಸಹಳ್ಳಿ ಟು ಕಡಬಗೆರೆ (12.5 ) ಅರೆಂಜ್ ಮಾರ್ಗಕ್ಕೆ ಅನುಮೋದನೆ ನೀಡಿದೆ. ಈ ಎರಡು ಕಾರಿಡಾರ್ ಬರೋಬ್ಬರಿ 15,611 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆ. ಆರ್​ವಿ ರೋಡ್ ಟು ಬೊಮ್ಮಸಂದ್ರ ಯೆಲ್ಲೋ ಮಾರ್ಗದಲ್ಲಿ ನಿರ್ಮಾಣವಾಗಿರುವ ಡಬಲ್ ಡೆಕ್ಕರ್ ಫ್ಲೈ ಓವರ್ ಸಿಲ್ಕ್ ಬೋರ್ಡ್ ಟ್ರಾಫಿಕ್​ಗೆ ಪರಿಹಾರ ನೀಡಿದರೆ, ಹೊಸದಾಗಿ ನಿರ್ಮಾಣವಾಗಲಿರುವ ಎರಡು ಡಬಲ್ ಡೆಕ್ಕರ್ ಫ್ಲೈ ಓವರ್​ಗಳು ಕನಕಪುರ ರೋಡ್ ಜಂಕ್ಷನ್ ಮತ್ತು ಕಾಮಾಕ್ಯ ಜಂಕ್ಷನ್ ಟ್ರಾಫಿಕ್​ಗೆ ಮುಕ್ತಿ ಹಾಡಲಿವೆ. ಈ ಎರಡು ಜಂಕ್ಷನ್ ನಲ್ಲೂ ಪ್ರತಿದಿನ ಸಾವಿರಾರು ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದು,ಈ ಎರಡು ಡಬಲ್ ಡೆಕ್ಕರ್ ಫ್ಲೈ ಓವರ್​ಗಳಿಂದ ವಾಹನ ಸವಾರರು ನಿಟ್ಟುಸಿರು ಬಿಡಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಸಮಸ್ಯೆ ಪರಿಹಾರಕ್ಕೆ ಬೆಸ್ಟ್ ಐಡಿಯಾ ನೀಡಿದ ಐವರಿಗೆ ಸಿಕ್ತು 10 ಲಕ್ಷ ರೂ.

ಒಟ್ಟಿನಲ್ಲಿ ರಾಗಿಗುಡ್ಡ ಟು ಸೆಂಟ್ರಲ್ ಸಿಲ್ಕ್ ಬೋರ್ಡ್ ಡಬಲ್ ಡೆಕ್ಕರ್ ಫ್ಲೈ ಓವರ್​ನಿಂದ ಆ ಭಾಗದಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೊರೆತಿದ್ದು, ಅದರಿಂದಾಗಿ ಇದೀಗ ನಮ್ಮ ಮೆಟ್ರೋ ಮತ್ತೆರಡು ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ಮುಂದಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ