ಬೆಂಗಳೂರು: ವರ್ತೂರು ಸಮೀಪದ ಕ್ರಿಸಲಿಸ್ ಹೈ ಶಾಲೆಗೆ ಬಾಂಬ್ ಬೆದರಿಕೆ

ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳ ಕಾಟ ತಪ್ಪುವಂತೆ ಕಾಣಿಸುತ್ತಿಲ್ಲ. ನಾಲ್ಕು ದಿನಗಳ ಹಿಂದಷ್ಟೇ ನಗರದ 40 ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದು ಆತಂಕಕ್ಕೆ ಕಾರಣವಾಗಿತ್ತು. ಬೆಂಗಳೂರಷ್ಟೇ ಅಲ್ಲದೆ, ದೆಹಲಿ ಸೇರಿ ದೇಶದ ಅನೇಕ ಕಡೆಗಳಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಇದೀಗ ಮತ್ತೆ ವರ್ತೂರಿನ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಮೇಲ್ ಬಂದಿದೆ.

ಬೆಂಗಳೂರು: ವರ್ತೂರು ಸಮೀಪದ ಕ್ರಿಸಲಿಸ್ ಹೈ ಶಾಲೆಗೆ ಬಾಂಬ್ ಬೆದರಿಕೆ
ವರ್ತೂರು ಸಮೀಪದ ಕ್ರಿಸಲಿಸ್ ಹೈ ಶಾಲೆಗೆ ಬಾಂಬ್ ಬೆದರಿಕೆ (ಸಾಂದರ್ಭಿಕ ಚಿತ್ರ)

Updated on: Jul 22, 2025 | 12:50 PM

ಬೆಂಗಳೂರು, ಜುಲೈ 22: ಬೆಂಗಳೂರಿನ (Bengaluru) ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶವುಳ್ಳ ಇ-ಮೇಲ್ ಬರುವುದು ಮುಂದುವರಿದಿದೆ. ಇದೀಗ ಕ್ರಿಸಲಿಸ್ ಹೈ ಶಾಲೆಗೆ (Chrysalis high School) ಬಾಂಬ್ ಬೆದರಿಕೆ (Bomb Threat) ಸಂದೇಶವುಳ್ಳ ಇ-ಮೇಲ್ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ಶಾಲಾ ಆಡಳಿತ ತಿಳಿಸಿದೆ. ಶಾಲೆಗೆ ವರ್ತೂರು ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ.

ಜುಲೈ 18 ರಂದು ಆರ್​​.ಆರ್​ ನಗರ, ಕೆಂಗೇರಿಯ ಶಾಲೆಗಳೂ ಸೇರಿದಂತೆ ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಆಯಾ ಶಾಲೆಗಳಿಗೆ ಭೇಟಿ ನೀಡಿದ್ದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ಮಾಡಿದ್ದರು. ಬಳಿಕ ಅವುಗಳೆಲ್ಲ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಎಂಬುದು ಬೆಳಕಿಗೆ ಬಂದಿತ್ತು.

ತಿಂಗಳ ಹಿಂದಷ್ಟೇ ಹಾಸನದ ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದವು. ನಂತರ ಅವು ಹುಸಿ ಬೆದರಿಕೆ ಸಂದೇಶಗಳೆಂಬುದು ದೃಢಪಟ್ಟಿತ್ತು.

ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

ಗುಜರಾತ್​ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಕೂಡ ಮಂಗಳವಾರ ಬಾಂಬ್ ಬೆದರಿಕೆ ಕರೆ ಬಂದಿದೆ. ಇದರಿಂದಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ. ಜತೆಗೆ, ಸೂರತ್ ಶಾಲೆಗಳಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ಇದನ್ನೂ ಓದಿ: ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ: ಮಕ್ಕಳನ್ನ ಹೊರ ಕಳುಹಿಸಿ ತಪಾಸಣೆ

ಬಾಂಬ್ ಬೆದರಿಕೆ ಸಂದೇಶ ಬಂದ ನಂತರ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಅಪರಾಧ ವಿಭಾಗ ಸೇರಿದಂತೆ ತಂಡಗಳು ತಕ್ಷಣ ತಪಾಸಣೆ ನಡೆಸಿದವು. ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Tue, 22 July 25