ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ (Pradeep Suicide) ಮಾಡಿಕೊಂಡ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Aravind Limbavali) ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ವಿರುದ್ಧ ಕೂಡ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306ರಡಿ (ಆತ್ಮಹತ್ಯೆಗೆ ಪ್ರಚೋದನೆ) ಎಫ್ಐಆರ್ ದಾಖಲಾಗಿದೆ. ಉದ್ಯಮಿ ಪ್ರದೀಪ್ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಡೆತ್‌ನೋಟ್‌ನಲ್ಲಿ ಅರವಿಂದ ಲಿಂಬಾವಳಿ, ಜಿ.ರಮೇಶ್ ರೆಡ್ಡಿ, ಕೆ.ಗೋಪಿ, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಹೆಸರು ಉಲ್ಲೇಖವಾಗಿದ್ದು, ಎಲ್ಲರೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಹಣಕಾಸಿನ ವಿಚಾರದಲ್ಲಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಪ್ರದೀಪ್ ಅವರ ಬ್ಯಾಂಕ್ ಸ್ಟೇಟ್ ಮೆಂಟ್ ಪರಿಶೀಲನೆ ನಡೆಸುತ್ತಿದ್ದಾರೆ. ರೆಸಾರ್ಟ್ನಲ್ಲಿ ಹೂಡಿಕೆ ಮಾಡಲು ಹಣ ಕೊಟ್ಟಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮೊದಲಿಗೆ ಇಂದು ಐವರು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ಮಾಡುವ ಸಧ್ಯತೆ ಇದೆ. ಮಧ್ಯಾಹ್ನದ ವೇಳೆಗೆ ನೋಟಿಸ್ ಕೊಟ್ಟು ಕರೆಯಲು ಕಗ್ಗಲಿಪುರ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಆ ಬಳಿಕ ಅರವಿಂದ್ ಲಿಂಬಾವಳಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲು ತಯಾರಿ ನಡೆಸುತ್ತಿದ್ದಾರೆ.
ಕಗ್ಗಲೀಪುರ ಪ್ರದೀಪ್ ಆತ್ಮಹತ್ಯೆ ಪ್ರಕರಣದ ನಂತರ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರು ಮನೆಯಿಂದ ತೆರಳಿದ್ದಾರೆ. ಇಂದಿರಾನಗರದ ತಿಪ್ಪಸಂದ್ರದಲ್ಲಿರುವ ತಮ್ಮ ಮನೆಯಿಂದ ನಿನ್ನೆ ಸಂಜೆ ವೇಳೆ ಹೊರ ತೆರಳಿದ್ದಾರೆ. ಸದ್ಯ ಇವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇಂದು ಅಥವಾ ನಾಳೆ ಪೊಲೀಸರು ಇವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು ಸೂಚಿಸುವ ಸಾಧ್ಯತದೆ ಇದೆ.
ಏನಿದು ಪ್ರಕರಣ?
ಬಿಜೆಪಿ ಶಾಸಕ ಅರವಿಂದ ಲಿಂಬಾಳಿ ಹೆಸರು ಬರೆದಿಟ್ಟು ಕಾರಿನಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಹೆಚ್‌ಎಸ್‌ಆರ್ ಲೇಔಟ್ ನಿವಾಸಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ದಕ್ಷಿಣ ತಾಲೂಕಿನ ನೆಟ್ಟಿಗೆರೆ ಗ್ರಾಮದ ಬಳಿ ನಿನ್ನೆ (ಜನವರಿ 1) ನಡೆದಿತ್ತು. ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಮನಗರ ಎಸ್‌ಪಿ ಸಂತೋಷ್ ಬಾಬು ಕೂಡ ಆಗಮಿಸಿದ್ದರು.
ಇದನ್ನೂ ಓದಿ: ತಲೆಗೆ ಗುಂಡು ಹಾರಿಸಿ ಪತ್ನಿ ಹತ್ಯೆಗೈದ ಪತಿ.. ಮತ್ತೊಂದೆಡೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ.. ಎಲ್ಲಿ?
ಡೆತ್‌ನೋಟ್‌ನಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ಜಿ.ರಮೇಶ್ ರೆಡ್ಡಿ, ಕೆ.ಗೋಪಿ, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಹೆಸರು ಉಲ್ಲೇಖಿಸಿ 6 ಜನರ ಮೇಲೆ ಕ್ರಮ ಜರುಗಿಸಿ ನನ್ನ ಸಾವಿಗೆ ನ್ಯಾಯ ಒದಗಿಸಿ ಎಂದು ಬರೆದಿಡಲಾಗಿದೆ. ಹೆಸರಿನ ಮುಂದೆ ಮೊಬೈಲ್ ನಂಬರ್ ಬರೆದು ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಣಕಾಸಿನ ವ್ಯವಹಾರದಲ್ಲಿ ವಂಚನೆ ಸಂಬಂಧ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆ.ಗೋಪಿ ಮತ್ತು ಸೋಮಯ್ಯ ಅವರಿಗೆ ಅರವಿಂದ ಲಿಂಬಾವಳಿ ಅವರು ಬೆಂಬಲ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 am, Mon, 2 January 23