ಬೆಂಗಳೂರು, ಮೇ.22: ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಅವರು ಇಂದು(ಮೇ.22) ಬೆಳಿಗ್ಗೆ ಬೆಂಗಳೂರು ನಗರ ಪ್ರದಕ್ಷಿಣೆ(Bengaluru city rounds) ನಡೆಸಿದ್ದಾರೆ. ಈ ವೇಳೆ ಒಣಗಿದ ಮರ ಏಕೆ ಬಿಟ್ಕೊಂಡಿದ್ದೀರಿ, ಅನಾಹುತ ಆಗಲಿ ಅಂತನಾ? ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದು, ನಗರದಲ್ಲಿರುವ ಒಣಮರ ಮತ್ತು ಅಪಾಯಕಾರಿ ಮರವನ್ನು ತೆರವುಗೊಳಿಸಬೇಕು. ಬೆಂಗಳೂರು ನಗರ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಜೊತೆಗೆ ಪದ್ಮನಾಭನಗರದ ಫ್ಲೈಓವರ್ ಬಳಿ ಇರುವ ಫುಟ್ಪಾತ್ ಸರಿಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ, ಮಳೆ ಬಂದಾಗ ಕೆರೆಯಂತಾಗುತ್ತಿದ್ದ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ವೀಕ್ಷಿಸಿದರು. ಈ ವೇಳೆ ಸ್ಥಳೀಯರು ಸೇರಿ, ‘ಮಳೆ ಬಂದಾಗ ನೀರು ತುಂಬಿ ರಸ್ತೆ ಎಲ್ಲಾ ಜಲಾವೃತ ಆಗುತ್ತದೆ. ಹೀಗಾಗಿ ಸಮಸ್ಯೆಯನ್ನ ಬಗ್ಗೆಹರಿಸಿ ಎಂದು ಸಿಎಂ ಹಾಗೂ ಡಿಸಿಎಂಗೆ ಮನವಿ ಸಲ್ಲಿಸಿದರು. ಇದೇ ವೇಳೆ ಬೆಂಗಳೂರಿನ ಏಕೈಕ ಮತ್ತು ಪ್ರಥಮ ಡಬಲ್ ಡೆಕರ್ 2 tier ವ್ಯವಸ್ಥೆಯನ್ನು ಪರಿಶೀಲಿಸಿ, ಆದಷ್ಟು ಬೇಗ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಸೂಚಿಸಿದರು.
ಇದನ್ನೂ ಓದಿ:ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್: ಬಿಲ್ಡರ್, ಒತ್ತುವರಿ ಮಾಡಿದವರಿಗೆ ಶಾಕ್ ಕೊಟ್ಟ ಡಿಸಿಎಂ
ಅಲ್ಲಿಂದ ಹೊಸೂರು ಮುಖ್ಯರಸ್ತೆ ಕಡೆಗೆ ತೆರಳಿ, ‘ಮಟ್ರೋ ಕಾಮಗಾರಿಯಿಂದಾಗಿ ಮಳೆನೀರು ಚರಂಡಿ ವಿಸ್ತೀರ್ಣ ಕಡಿಮೆಯಾಗಿ, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿರುವ ಬಗ್ಗೆ ಗಮನಹರಿಸಿದರು. ಈ ವೇಳೆ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು 4.5 ಕೋಟಿ ಕಾಮಗಾರಿ ಅಗತ್ಯವಿದೆ ಹಾಗೂ ಸರ್ಕಾರದ ಉನ್ನತಾಧಿಕಾರ ಸಮಿತಿಯ ಅನುಮತಿ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿವರಿಸಿದರು. ಪರ್ಯಾಯ ವ್ಯವಸ್ಥೆಯ ಕಾಮಗಾರಿ ಕೈಗೊಳ್ಳಲು ಸಮ್ಮತಿಸಿದ ಮುಖ್ಯಮಂತ್ರಿಗಳು, ಮುಂದಿನ ಉನ್ನತಾಧಿಕಾರ ಸಮಿತಿ ಸಭೆಯ ಮುಂದೆ ಮಂಡಿಸಲು ಸೂಚಿಸಿದರು. ಜೊತೆಗೆ ಈ ಯೋಜನೆಯನ್ನು ಮುಂದಿನ 10-15 ವರ್ಷಗಳ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಕ್ರಿಯಾ ಯೋಜನೆ ರೂಪಿಸಲು ಸೂಚನೆ ನೀಡಿದರು. ನಂತರ ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಕೋಡಿಚಿಕ್ಕನಹಳ್ಳಿಯ ಅನುಗ್ರಹ ಲೇಔಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜಕಾಲುವೆ ವೀಕ್ಷಣೆ ಮಾಡಿದರು. ಜೊತೆಗೆ ರಾಜಕಾಲುವೆಯಿಂದ ಮನೆಗಳಿಗೆ ನೀರು ನುಗ್ಗುವ ಸಮಸ್ಯೆಯಿದ್ದು, ಇಲ್ಲಿನ ಪ್ರವಾಹ ನಿಯಂತ್ರಣಕ್ಕೆ ಜಾಕ್‌ವೆಲ್ ಮೂಲಕ
ರಾಜಕಾಲುವೆಯಿಂದ ಹೊರ ಬರುವ ನೀರನ್ನು ಪಂಪ್ ಮಾಡಿ ಮಡಿವಾಳ ಕೆರೆಗೆ ಹರಿಸಲು ಸಿಎಂ ಸೂಚನೆ ನೀಡಿದರು. ಇದಕ್ಕೆ 4.3 ಕೋಟಿ ರೂ. ವೆಚ್ಚದ ಕಾಮಗಾರಿ ಶೀಘ್ರ ಪ್ರಾರಂಭಿಸಲು ಸೂಚಿಸಿದರು.
ಬಳಿಕ ಈಜಿಪುರಕ್ಕೆ ಭೇಟಿ ನೀಡಿದ ಸಿಎಂ, 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದೆ. ಆದರೆ, ಕಳೆದ 6 ವರ್ಷಗಳಿಂದ ನೆನೆಗುದಿಗೆ ಬಿದ್ದು ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಆಗುತ್ತಿದೆ.
ಅಧಿಕಾರಿಗಳಿಗೆ ಸಿಎಂ ನೀಡಿದ ಸೂಚನೆಗಳೇನು?
ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಸಕ್ತ ಸರ್ಕಾರ ಅಧಿಕಾರಕ್ಕೆ ಬಂದನಂತರ ದಿನಾಂಕ 2023 ನವೆಂಬರ್ 20 ರಂದು BSCPL ಎಂಬ ಕಂಪೆನಿಗೆ ಕಾರ್ಯಾದೇಶ ನೀಡಲಾಗಿತ್ತು. ಟೆಂಡರ್ ಷರತ್ತಿನ ಪ್ರಕಾರ 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ, ಕಳೆದ ಆರು ತಿಂಗಳಲ್ಲಿ ಕೇವಲ ಶೇ. 4 ರಿಂದ 6 ರಷ್ಟು ಪ್ರಗತಿಯಾಗಿದೆ. ಈ ಮಾಹಿತಿ ತಿಳಿದ ಮುಖ್ಯಮಂತ್ರಿಗಳು ಸ್ಥಳದಲ್ಲಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರಿಗೆ ನಿಯಮಾನುಸಾರ ನೋಟಿಸ್ ನೀಡಿ, ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಟೆಂಡರ್ ರದ್ದುಪಡಿಸಿ. ಬೇರೆಯವರಿಗೆ ಗುತ್ತಿಗೆ ನೀಡುವಂತೆ ಸೂಚಿಸಿದರು. ಅಗತ್ಯ ಹಣ ಕೊಟ್ಟಿದ್ದರೂ ಆರು ತಿಂಗಳಲ್ಲಿ ಕೇವಲ 4% ಕಾಮಗಾರಿ ಮಾಡಿದ್ದೀಯಲ್ಲ. ಸಾರ್ವಜನಿಕರಿಗೆ ಆಗುವ ತೊಂದರೆ ಬಗ್ಗೆ ಪ್ರಜ್ಞೆ ಬೇಡ್ವಾ, ನಿನ್ನ ಕೈಲಿ ಆಗದಿದ್ದರೆ ಜಾಗ ಖಾಲಿ ಮಾಡಿ ಎಂದು ಕಂಪನಿ ಪ್ರತಿನಿಧಿಗಳಿಗೆ ಸಿಎಂ ಸ್ಪಷ್ಟ ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Wed, 22 May 24