400 ಮಹಿಳೆಯರ ಮೇಲೆ ಪ್ರಜ್ವಲ್ ಮಾಸ್ ರೇಪ್ ಆರೋಪ: ರಾಹುಲ್ ಗಾಂಧಿ ವಿರುದ್ಧ ಜೆಡಿಎಸ್ ದೂರು
ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆ ಪ್ರಚಾರದ ಭಾಷಣಗಳಲ್ಲಿ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದು, ಇದೀಗ ಅದು ಜೆಡಿಎಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಈ ಬಗ್ಗೆ ರಾಹುಲ್ ಗಾಂಧಿ ವಿರುದ್ಧ ಕ್ರಮಕೈಮಕೈಗೊಳ್ಳುವಂತೆ ಜೆಡಿಎಸ್ ನಿಯೋಗ ದೂರು ನೀಡಿದೆ,
ಬೆಂಗಳೂರು, (ಮೇ 22): ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ (Prajwal Revanna Case) ಮಾಸ್ ರೇಪ್ ಮಾಡಿದ್ದಾರೆ ಎಂದು ಬಹಿರಂಗ ಸಭೆಗಳ ಭಾಷಣದಲ್ಲಿ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಜೆಡಿಎಸ್ (JDS) ನಿಯೋಗ ದೂರು ನೀಡಿದೆ. ಇಂದು(ಮೇ 22) ಬೆಂಗಳೂರಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಜೆಡಿಎಸ್ ದೂರು ನೀಡಿದ್ದು, ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದೆ.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಮಂಜೇಗೌಡ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್, ಬೆಂಗಳೂರು ನಗರದ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್ ಅವರಿದ್ದ ನಿಯೋಗ ಬುಧವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರು ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಗಳಲ್ಲಿ ಮಾಸ್ ರೇಪ್ ಬಗ್ಗೆ ಹೇಳಿದ್ದರು. ಇದೇ ಮಾಹಿತಿಯನ್ನು ಮಾಧ್ಯಮಗಳ ಮುಂದೆಯೂ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಾಹುಲ್ ಗಾಂಧಿಗೆ ಎಸ್‌ಐಟಿ ಸಮನ್ಸ್ ಜಾರಿ ಮಾಡಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.
ದೂರಿನಲ್ಲಿ ಇನ್ನೇನು ಇದೆ?
ಎಚ್.ಎಂ. ರಮೇಶ್ ಗೌಡ ಸಹಿ ಹಾಕಿರುವ ದೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದೆ. ಕಾಂಗ್ರೆಸ್ ನಾಯಕ, ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರು, ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಮಾಡಿ ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಇದೊಂದು ಸಾಮೂಹಿಕ ಅತ್ಯಾಚಾರ. ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಇದೇ ಮೇ 2ರಂದು ಹೇಳಿಕೆ ನೀಡಿದ್ದರು.
ರಾಹುಲ್ ಗಾಂಧಿ ಅವರ ಹೇಳಿಕೆ, ಭಾಷಣ ಎಲ್ಲವೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮುದ್ರಣ ಮಾಧ್ಯಮದಲ್ಲಿಯೂ ವರದಿಯಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡಿದ್ದು, ಅವರ ವಿರುದ್ಧ ಕಾನೂನ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ