ಸರ್ಕಾರಕ್ಕೆ ಒಂದು ವರ್ಷ: ಸಾವಿರಾರು ಹತ್ಯೆ, ಆತ್ನಹತ್ಯೆಗಳೇ ಸಾಧನೆಯಾ ನಿಮ್ಮದು?-ಸಿಟಿ ರವಿ ಪ್ರಶ್ನೆ
ಕಾಂಗ್ರೆಸ್(Congress) ಸರ್ಕಾರ ಒಂದು ವರ್ಷ ಪೂರೈಸಿದ ಕುರಿತು ಮಾತನಾಡಿದ ಮಾಜಿ ಸಚಿವ ಸಿಟಿ ರವಿ, ‘ಸರ್ಕಾರ ಯಾವ ಹೊಸ ಯೋಜನೆಯನ್ನೂ ಈ ಒಂದು ವರ್ಷದಲ್ಲಿ ತಂದಿಲ್ಲ. ನೀವ್ಯಾರೂ ಅನುಭವಿಗಳಲ್ಲ. ಒಂದು ವರ್ಷದಲ್ಲಿ ಯಾವ ದೂರದೃಷ್ಟಿಯ ಬುನಾದಿ ಹಾಕಿದ್ದೀರಿ ಹೇಳಿ?. ಸರ್ಕಾರದ ಖಜಾನೆ ಹಂಚಿದ್ದು ಸರ್ಕಾರದ ಸಾಧನೆ ಆಗಲ್ಲ ಎಂದು ಕಿಡಿಕಾರಿದರು.
ಬೆಂಗಳೂರು, ಮೇ.22: ಕಾಂಗ್ರೆಸ್(Congress) ಸರ್ಕಾರ ಒಂದು ವರ್ಷ ಪೂರೈಸಿದೆ. ಸಾವಿರಾರು ಹತ್ಯೆ, ಆತ್ನಹತ್ಯೆಗಳೇ ಕಾಂಗ್ರೆಸ್ ಸಾಧನೆಯಾ? ಎಂದು ಮಾಜಿ ಸಚಿವ ಸಿಟಿ ರವಿ(CT Ravi) ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಎನ್ಸಿಬಿಆರ್ ವರದಿ ಪ್ರಕಾರ ಕಳೆದ ನಾಲ್ಕು ತಿಂಗಳಲ್ಲಿ 430 ಕೊಲೆ ಹಾಗೂ 700 ಕ್ಕೂ ಅಧಿಕ ರೈತರ ಆತ್ಮಹತ್ಯೆ ನಡೆದಿವೆ. ಇಷ್ಟೆಲ್ಲ ಇದ್ದ ಮೇಲೆ ಈ ಸರ್ಕಾರ ಹತ್ಯೆ ಮತ್ತು ಆತ್ಮಹತ್ಯೆಯಲ್ಲಿ ಪ್ರತೀ ತಿಂಗಳು ಶತಕದ ಗಡಿ ದಾಟಿದೆ ಎಂದು ಕಿಡಿಕಾರಿದರು.
ಒಂದು ಸರ್ಕಾರ, ನೂರಾರು ಗೊಂದಲ ಎಂದು ವ್ಯಂಗ್ಯ
ಇದೇ ವೇಳೆ ಕೋವಿಡ್ ಅವಧಿಯ ಅಕ್ರಮಗಳ ತನಿಖೆಗೆ ನ್ಯಾಯಾಂಗ ಸಮಿತಿ ರಚಿಸಿದ್ದು ವರದಿ ಬಂತಾ?, ಜಲಜೀವನ್ ಮಿಷನ್ ಅಡಿ ನಡೆದ ಅಕ್ರಮಗಳ ತನಿಖೆಗೂ ಸಮಿತಿ ರಚಿಸಿದ್ದು, ಆ ವರದಿ ಬಂದಿದ್ಯಾ? ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ, ಬಿಬಿಎಂಪಿ ಗುತ್ತಿಗೆ ಕಮೀಷನ್, ಬಿಟ್ ಕಾಯಿನ್ ಪ್ರಕರಣಗಳ ತನಿಖೆಯ ವರದಿಗಳು ಬಂದಿವೆಯಾ?. ನಮ್ಮ ಸರ್ಕಾರದ ವಿರುದ್ಧ ಕಾಂಗ್ರೆಸ್ 40% ಆಪಾದನೆ ಮಾಡಿತ್ತು. ಆ ಮೂಲಕ ಬಿಜೆಪಿ ವಿರುದ್ಧ ಒಂದು ನರೇಷನ್ ಸೆಟ್ ಮಾಡಿದ್ದರು. ಈಗ ಕೆಲವು ಆರೋಪಗಳ ಕುರಿತು ಸಮಿತಿ ರಚಿಸಿದ್ದೀರಿ, ಒಂದು ವರ್ಷವಾದರೂ ವರದಿಗಳು ಬಂದಿಲ್ಲ. ನಿಮ್ಮದು ಒಂದು ಸರ್ಕಾರ, ನೂರಾರು ಗೊಂದಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಕಾಂಗ್ರೆಸ್, ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ನೆಲೆ ಹುಡುಕಬೇಕಷ್ಟೆ: ಸಿಟಿ ರವಿ ವ್ಯಂಗ್ಯ
ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಅಂದ್ರೆ ರಾಜ್ಯಕ್ಕೆ ಅವಮಾನ
ಕಾಂಗ್ರೆಸ್ ಸರ್ಕಾರದ ತುಘಲಕ್ ನೀತಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲು ತುಂಬಿದೆ. ಎಸ್‌ಎಸ್‌ಎಲ್‌ಸಿ ಯಲ್ಲಿ ಗ್ರೇಸ್ ಮಾರ್ಕ್ಸ್ ಕೊಟ್ಟಿರಿ, ಪಾಸೇ ಆಗದವರನ್ನು ಶಿಕ್ಷಣ ಸಚಿವರಾಗಿ ಮಾಡಿದರೆ ಹೀಗೆಯೇ ಆಗುವುದು. ಫೇಲಾದವರಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡೋಣ ಎಂದು ಅವರಿಗೆ ಅನಿಸಿರುತ್ತದೆ. ಗ್ರೇಸ್ ಮಾರ್ಕ್ಸ್ ಕೊಟ್ಟ ಕಾರಣ ಏನು?, ಸಿಇಟಿಯಲ್ಲಿ ಸಿಲಬಸ್ನಲ್ಲಿ ಇಲ್ಲದ ಪ್ರಶ್ನೆಗಳನ್ನು ಕೊಟ್ಟಿದ್ದೀರಿ. ಶಿಕ್ಷಣ ಸಚಿವರು ತಮಗೆ ಕನ್ನಡ ಓದಲು ಬರಲ್ಲ ಎಂದು ಒಪ್ಪಿಕೊಂಡಿದ್ದಾರೆ. ಕನ್ನಡ ನಮ್ಮ ಆಡಳಿತ ಭಾಷೆ, ಶಿಕ್ಷಣ ಸಚಿವರಿಗೆ ಕನ್ನಡ ಬರದಿರುವುದರ ಬಗ್ಗೆ ಕನ್ನಡಿಗರು ಆಲೋಚಿಸುವ ಅಗತ್ಯವಿದೆ. ಬಹುಶಃ ಸಚಿವರಿಗೆ ಸರ್ಕಾರ ಗ್ರೇಸ್ ಮಾರ್ಕ್ಸ್ ಕೊಟ್ಟಿರಬಹುದು. ಕನ್ನಡ ಬರಲ್ಲ ಅಂತ ಹೇಳಿ ಶಿಕ್ಷಣ ಸಚಿವರು ಯಾರಿಗೆ ಗೌರವ ಕೊಟ್ಟಿದ್ದಾರೆ?. ಮೊದಲು ನಿಮ್ಮ ಸಚಿವರಿಗೆ ಕನ್ನಡ ಕಲಿಸಿ. ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಅಂದ್ರೆ ರಾಜ್ಯಕ್ಕೆ ಅವಮಾನ ಎಂದು ಕಿಡಿಕಾರಿದರು.
ಸರ್ಕಾರದ ಖಜಾನೆ ಹಂಚಿದ್ದು ಸರ್ಕಾರದ ಸಾಧನೆ ಆಗಲ್ಲ
ಸರ್ಕಾರ ಯಾವ ಹೊಸ ಯೋಜನೆಯನ್ನೂ ಈ ಒಂದು ವರ್ಷದಲ್ಲಿ ತಂದಿಲ್ಲ. ನೀವ್ಯಾರೂ ಅನುಭವಿಗಳಲ್ಲ. ಒಂದು ವರ್ಷದಲ್ಲಿ ಯಾವ ದೂರದೃಷ್ಟಿಯ ಬುನಾದಿ ಹಾಕಿದ್ದೀರಿ ಹೇಳಿ?. ಸರ್ಕಾರದ ಖಜಾನೆ ಹಂಚಿದ್ದು ಸರ್ಕಾರದ ಸಾಧನೆ ಆಗಲ್ಲ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಂವೇದನೆ ರಹಿತವಾಗಿ ಸರ್ಕಾರ ನಡೆದುಕೊಂಡಿತ್ತು. ಬಾಂಬ್ ಬ್ಲಾಸ್ಟ್ ಬಗ್ಗೆ ತೇಲಿಸಿ ಮಾತಾಡಿದರು. ಮತಾಂಧತೆ ಬೆಂಬಲಿಸಿ ಮತಬ್ಯಾಂಕ್ ಗಟ್ಟಿ ಮಾಡಿಕೊಂಡಿದ್ದು ಇವರ ಸಾಧನೆ.
ಇದೇ ವೇಳೆ ಪೆನ್ ಡ್ರೈವ್ ವಿಚಾರದಲ್ಲಿ ದೇವರಾಜೇಗೌಡ ಆರೋಪ ವಿಚಾರ, ‘ ನಾವು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಅಂತ ಬಯಸುತ್ತೇವೆ. ಅದಕ್ಕೇ ಸಿಬಿಐಗೆ ಕೊಡಿ ಎಂದು ನಾವು ಕೇಳುತ್ತಿರೋದು. ಹಾಲಿ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ ಮಹಿಳಾ ನ್ಯಾಯಮೂರ್ತಿ ನೇತೃತ್ವದ ಎಸ್ಐಟಿ ಮಾಡಲಿ. ಇದರಲ್ಲಿ ಯಾರು ಯಾರು ಪಾಪ ಮಾಡಿದ್ದಾರೋ ಗೊತ್ತಿಲ್ಲ. ಇದರಲ್ಲಿ ಡಿಸಿಎಂ ಪಾತ್ರ ಇದ್ದರೆ ಎಸ್ಐಟಿ ತನಿಖೆ ಮಾಡುತ್ತಾ?. ಇದರಲ್ಲಿ ಹಲವು ಅನುಮಾನಗಳಿವೆ, ಸರ್ಕಾರದ ನಡೆ ಅನುಮಾನಾಸ್ಪದವಾಗಿದೆ. ತಪ್ಪು ಮಾಡಿದವರಿಗೂ ಶಿಕ್ಷೆ ಆಗಬೇಕು. ಸರ್ಕಾರ ಈ ಪ್ರಕರಣದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ ಅನ್ನಿಸುತ್ತಿದೆ. ದೇವರಾಜೇಗೌಡ ಅಮಿತ್ ಷಾಗೆ ಪ್ರಜ್ವಲ್ ಬಗ್ಗೆ ಪತ್ರದ ಮೂಲಕ ಮಾಹಿತಿ ಕೊಟ್ಟಿದ್ದರೋ ಇಲ್ವೋ ಎಂದು ತನಿಖೆ ಮಾಡಲಿ. ಪ್ರಜ್ವಲ್ ಮೇಲಿನ ಆರೋಪಗಳು ಏಳೆಂಟು ತಿಂಗಳ ಹಿಂದಿನವು ಎನ್ನುತ್ತಾರೆ. ಪ್ರಜ್ವಲ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮೂಲಕ ಗೆದ್ದಂತಹವರು. ಈಗ ನಾವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇವೆ, ಅವರು, ಅವರ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ