ಬೆಂಗಳೂರು: ಮೊನ್ನೆಯಷ್ಟೇ ವಿಟಿಯು(VTU) ಫಲಿತಾಂಶದಲ್ಲಿ ದೊಡ್ಡ ಎಡವಟ್ಟನ್ನ ಮಾಡಿತ್ತು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರುವ ಫಲಿತಾಂಶ ನೀಡಿತ್ತು. ಈಗ ಬೆಂಗಳೂರು ನಗರ ವಿವಿ(Bengaluru City University) ಇದೇ ರೀತಿಯ ಎಡವಟ್ಟನ್ನ ಮಾಡಿ ಪೇಚಿಗೆ ಸಿಲುಕಿಕೊಂಡಿದೆ. ಬರೋಬ್ಬರಿ 246 ಕಾಲೇಜಿನ ವಿದ್ಯಾರ್ಥಿಗಳು ಸಾಮೂಹಿಕವಾಗಿ ಫೇಲ್ ಆಗಿದ್ದಾರೆ. ಇದಕ್ಕೆಲ್ಲಾ ಕಾರಣ ಬೆಂಗಳೂರು ನಗರ ವಿವಿಯ ಬೇಜವಾಬ್ದಾರಿತನ ಅನ್ನೋ ಆರೋಪ ಕೇಳಿಬಂದಿದೆ.
ಬಿಕಾಂ ವಿದ್ಯಾರ್ಥಿಗಳಿಗೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ 5 ನೇ ಸೆಮಿಸ್ಟರ್‌ನ ಎಕ್ಸಾಂ ನಡೆದಿದೆ. ಅಡ್ವಾನ್ಸಡ್ ಅಕೌಂಟಿಂಗ್ ಎಂಬ ವಿಷಯಕ್ಕೆ ಒಟ್ಟು 100 ಅಂಕಗಳಿದ್ದು, 30 ಅಂಕ ಇಂಟರ್ನಲ್ಸ್ , 70 ಅಂಕ ಥಿಯರಿಗೆ ನೀಡಲಾಗಿದೆ. ಆದ್ರೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನಲ್ಸ್‌ನಲ್ಲಿ ಫುಲ್ ಮಾರ್ಕ್ಸ್ ಸಿಕ್ಕಿದ್ರೂ, ಥಿಯರಿಯಲ್ಲಿ ಕಳಪೆ ಅಂಕ ನೀಡಿ ಫೇಲ್ ಮಾಡಲಾಗಿದೆಯಂತೆ. ಬೆಂಗಳೂರು ನಗರ ವಿವಿ ವ್ಯಾಪ್ತಿಗೆ ಒಳಪಡುವ 246ಕಾಲೇಜುಗಳಲ್ಲೂ ಇದೇ ರೀತಿಯ ಫಲಿತಾಂಶ ನೀಡಲಾಗಿದೆ. ಇದು ಮರು ಮೌಲ್ಯಮಾಪನದಿಂದ ದುಡ್ಡು ಮಾಡುವ ತಂತ್ರ ಅನ್ನೋದು ವಿದ್ಯಾರ್ಥಿಗಳ ಆರೋಪವಾಗಿದೆ. ಇದನ್ನೂ ಓದಿ: ಆಲಿಯಾ ಕೋಪಕ್ಕೆ ಪಾಕಿಸ್ತಾನ ನಟಿಯರ ಬೆಂಬಲ; ‘ನಮ್ಮಲ್ಲೊಂದೇ ಹೀಗೆ ಎಂದುಕೊಂಡಿದ್ದೆ’ ಎಂದ ಪಾಕ್ ನಟಿ
ಬಹುತೇಕ ವಿದ್ಯಾರ್ಥಿಗಳು ಎಲ್ಲಾ ವಿಷ್ಯಗಳಲ್ಲೂ ಡಿಸ್ಟಿಕ್ಷನ್ ತೆಗೆದುಕೊಂಡಿದ್ದಾರೆ. ಆದ್ರೆ ADVANCED ACCOUNTING ವಿಷ್ಯಕ್ಕೆ ಮಾತ್ರ ಕಡಿಮೆ ಅಂಕ ನೀಡಿರೋದು ಅನುಮಾನ ಹುಟ್ಟಿಸಿದೆ. ಇನ್ನು ರಿಸಲ್ಟ್ ಬಗ್ಗೆ ಮಾತನಾಡಿದ ಬೆಂಗಳೂರು ನಗರ ವಿವಿ ಮೌಲ್ಯಮಾಪನ ಕುಲಸಚಿವ ಲೋಕೇಶ್, ಯಾವ ವಿದ್ಯಾರ್ಥಿಯನ್ನೂ ಅನಾವಶ್ಯಕವಾಗಿ ಫೇಲ್ ಮಾಡಿಲ್ಲ. ಅವರ ಉತ್ತರಗಳನ್ನ ಪರಿಶೀಲನೆ ಮಾಡಿಯೇ ಫಲಿತಾಂಶ ನೀಡಲಾಗಿದೆ. ದೂರಿನನ್ವಯ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತೆ. ಒಂದು ವೇಳೆ ಎಲ್ಲಾದ್ರೂ ಲೋಪ ಕಂಡು ಬಂದ್ರೆ, ಮೌಲ್ಯಮಾಪನ ನಡೆಸಿದ ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಒಟ್ನಲ್ಲಿ ಉತ್ತಮ ಶಿಕ್ಷಣ ನೀಡಬೇಕಿದ್ದ ವಿವಿಗಳು, ಇತ್ತೀಚೆಗೆ ಒಂದರ ಹಿಂದೆ ಒಂದು ವಿವಾದಗಳನ್ನ ಮೈಮೇಲೆ ಎಳೆದುಕೊಳ್ತಿದೆ. ಇನ್ನಾದ್ರೂ ಪ್ರಜ್ಞೆಯಿಂದ ಮೌಲ್ಯಮಾಪನ ನಡೆಸಿ, ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಬೇಕಿದೆ.
ವರದಿ: ಅನಿಲ್ ಕಲ್ಕೆರೆ, ಟಿವಿ9, ಬೆಂಗಳೂರು
Published On - 10:36 pm, Wed, 29 June 22