ಮೃತದೇಹ ಸಿಗದಿದ್ದರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ: ಮಂತ್ರಾಲಯ ಮೂಲದ ಮಹಿಳೆ ಕೊಲೆ ಪ್ರಕರಣದಲ್ಲಿ ಇಬ್ಬರಿಗೆ ಶಿಕ್ಷೆ

ಬೆಂಗಳೂರಿನ 60ನೇ ಸಿಸಿಎಚ್ ನ್ಯಾಯಾಲಯವು ಮೃತದೇಹವಿಲ್ಲದ ಕೊಲೆ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಸಿಡಿಆರ್ ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಭೂ ವಿವಾದದ ಕಾರಣ ಸೀತಾರನ್ನು ಹತ್ಯೆ ಮಾಡಲಾಗಿತ್ತು. ಸುಬ್ರಹ್ಮಣ್ಯನಗರ ಪೊಲೀಸರ ದಕ್ಷ ತನಿಖೆಯಿಂದ ಆರೋಪಿಗಳಾದ ನೂರ್ ಅಹ್ಮದ್ ಹಾಗೂ ಸತ್ಯನಾರಾಯಣ್ ಜೈಲುಪಾಲಾಗಿದ್ದಾರೆ. ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪರೂಪದ ಘಟನೆಯಾಗಿದೆ.

ಮೃತದೇಹ ಸಿಗದಿದ್ದರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ: ಮಂತ್ರಾಲಯ ಮೂಲದ ಮಹಿಳೆ ಕೊಲೆ ಪ್ರಕರಣದಲ್ಲಿ ಇಬ್ಬರಿಗೆ ಶಿಕ್ಷೆ
ಮಂತ್ರಾಲಯ ಮೂಲದ ಮಹಿಳೆ ಕೊಲೆ ಪ್ರಕರಣ
Image Credit source: Tv9 kannada
Edited By:

Updated on: Sep 29, 2026 | 6:04 PM

ಬೆಂಗಳೂರು, ಸೆ.29: ಮಂತ್ರಾಲಯ ಮೂಲದ ಮಹಿಳೆ 2021ರಲ್ಲಿ ಕೊಲೆಯಾಗಿರುವ ಪ್ರಕರಣಕ್ಕೆ ಇದೀಗ ತೀರ್ಪು ನೀಡಲಾಗಿದೆ. ಕೊಲೆಯಾದ ಮಹಿಳೆಯ ಮೃತದೇಹವೇ ಸಿಗದಿದ್ದರೂ ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಸಿಡಿಆರ್ (CDR) ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಇಬ್ಬರು ಹಂತಕರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 30,000 ರೂ. ದಂಡ ವಿಧಿಸಿ ಬೆಂಗಳೂರಿನ 60ನೇ ಸಿಸಿಎಚ್ (CCH) ನ್ಯಾಯಾಲಯ ಅಪರೂಪದ ಹಾಗೂ ಮಹತ್ವದ ತೀರ್ಪು ನೀಡಿದೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಅಧಿಕಾರಿಗಳ ದಕ್ಷ ತನಿಖೆಯಿಂದಾಗಿ ಆರೋಪಿಗಳಾದ ನೂರ್ ಅಹ್ಮದ್ ಹಾಗೂ ಸತ್ಯನಾರಾಯಣ್ ಜೈಲುಪಾಲಾಗಿದ್ದಾರೆ. ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ‘ಮೆಂಟಲ್ ರಘು’ ಹಾಗೂ ಬೆಸ್ತನಾಕುಮಾರ್ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.

ಮಂತ್ರಾಲಯ ಮೂಲದ ಸೀತಾ (47) ಎಂಬವರು ಗಂಡ ಮತ್ತು ತಾಯಿಯನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿದ್ದರು. ಹೀಗಾಗಿ ಬೆಂಗಳೂರಿನಲ್ಲಿದ್ದ ಅಕ್ಕನ ಮನೆಗೆ ಬಂದಿದ್ದರು. ಸೀತಾ ಅವರ ತಮ್ಮನ ಬಳಿ ನೂರ್ ಅಹ್ಮದ್ ಎಂಬಾತ ಮಂತ್ರಾಲಯ ಬಳಿಯಿದ್ದ 2 ಎಕರೆ ಜಮೀನಿಗೆ ಅಗ್ರಿಮೆಂಟ್ ಮಾಡಿಕೊಂಡಿದ್ದ. ಆದರೆ ಈ ಜಮೀನಿನ ರಿಜಿಸ್ಟ್ರೇಶನ್‌ಗೆ ಸೀತಾ ಸಹಿ ಹಾಕಲು ಒಪ್ಪಿರಲಿಲ್ಲ. ಇದರಿಂದ ಆಕ್ರೋಶಗೊಂಡ ನೂರ್ ಅಹ್ಮದ್, ಸೀತಾಳನ್ನು ಮುಗಿಸಲು ರಘು, ಸತ್ಯನಾರಾಯಣ್ ಹಾಗೂ ಬೆಸ್ತನಾಕುಮಾರ್‌ಗೆ 2.5 ಲಕ್ಷ ರೂ. ಸುಪಾರಿ ನೀಡಿದ್ದ.

2021ರ ಮಾರ್ಚ್ 25ರಂದು ಆರೋಪಿಗಳು ಸೀತಾಳಿಗೆ ಕರೆ ಮಾಡಿ ‘ಬಂಗಾರದ ಡೀಲ್ ಒಂದಿದೆ’ ಎಂದು ನಂಬಿಸಿ ಮೆಜೆಸ್ಟಿಕ್‌ನಿಂದ ಇಂಡಿಕಾ ಕಾರಿನಲ್ಲಿ ಹಾಸನದ ಮಾರ್ಗವಾಗಿ ಕರೆದುಕೊಂಡು ಹೋಗಿದ್ದರು. ಹಾಸನ ಟೋಲ್ ಬಳಿಯ ಎಂಪೈರ್ ಹೋಟೆಲ್‌ನಲ್ಲಿ ಜ್ಯೂಸ್‌ಗೆ ಸೈನೆಡ್ ಬೆರೆಸಿದ್ದರು. ಆದರೆ ಜ್ಯೂಸ್ ಹಸಿರು ಬಣ್ಣಕ್ಕೆ ತಿರುಗಿದ್ದನ್ನು ಕಂಡು ಅನುಮಾನಗೊಂಡ ಸೀತಾ ಕುಡಿಯಲು ಒಪ್ಪಲಿಲ್ಲ.

ಕುಂದೂರು ಮಠದ ರಸ್ತೆಯಲ್ಲಿ ಕಾರ್ ಪಾರ್ಕ್ ಮಾಡಿ, ಸೀತಾ ಮಲಗಿದ್ದಾಗ ಕಲ್ಲಿನಿಂದ ತಲೆಗೆ ಹೊಡೆದಿದ್ದರು. ಏಟು ಸರಿಯಾಗಿ ಬೀಳದಿದ್ದಾಗ “ಯಾರೋ ಕಲ್ಲು ಹೊಡೆದು ಓಡಿಹೋದರು” ಎಂದು ಕಥೆ ಕಟ್ಟಿ, ಬೇಲೂರು ಬಳಿಯ ಕ್ಲಿನಿಕ್‌ನಲ್ಲಿ ಬ್ಯಾಂಡೇಜ್ ಹಾಕಿಸಿದ್ದರು. ಚಿಕ್ಕಮಗಳೂರಿನ ಮಯೂರ ಹೋಟೆಲ್ ಬಳಿ ಕಾರ್ ನಿಲ್ಲಿಸಿ, ಟಾಯ್ಲೆಟ್‌ ರೂಮ್‌ನಲ್ಲಿ ನೋವಿನ ಮಾತ್ರೆಯೊಳಗೆ ಸೈನೆಡ್ ತುಂಬಿ ಸಿದ್ಧಪಡಿಸಿಕೊಂಡಿದ್ದರು. ದಾರಿ ಮಧ್ಯೆ “ನೋವಿನ ಮಾತ್ರೆ ತಿನ್ನು” ಎಂದು ನೀಡಿದ ಕೇವಲ 1 ನಿಮಿಷದಲ್ಲೇ ಸೀತಾ ಕಾರ್‌ನಲ್ಲೇ ಪ್ರಾಣ ಬಿಟ್ಟಿದ್ದರು.

ಕೊಲೆ ಬಳಿಕ ಹೊಸಪೇಟೆಯ ಹುಲಿಗೆಮ್ಮ ರಸ್ತೆಯ ಬಳಿ ಕಾರ್ ನಿಲ್ಲಿಸಿ, ಸೀತಾ ಅವರ ಕೈಯಲ್ಲಿದ್ದ 30 ಗ್ರಾಂ ಚಿನ್ನದ ಬಳೆಗಳನ್ನು ಎಗರಿಸಿ, ನಂತರ ಮೃತದೇಹಕ್ಕೆ ಕಲ್ಲು ಕಟ್ಟಿ, ಬೆಡ್‌ಶೀಟ್‌ನಲ್ಲಿ ಸುತ್ತಿ ತುಂಗಭದ್ರಾ ಕ್ಯಾನಲ್‌ಗೆ ಎಸೆದು ಮಂತ್ರಾಲಯಕ್ಕೆ ಪರಾರಿಯಾಗಿದ್ದರು. ಚಿನ್ನದ ಬಳೆ ಮಾರಿ ಬಂದ ಹಣವನ್ನು ಆರೋಪಿಗಳು ಹಂಚಿಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಪ್ರತ್ಯೇಕ ಪ್ರಕರಣಗಳಲ್ಲಿ 5.48 ಕೆಜಿ ಎಂಡಿಎಂಎ ವಶ; 6 ಮಂದಿ ಬಂಧನ

2021ರ ಮಾರ್ಚ್ 26ರಂದು ಸೀತಾ ನಾಪತ್ತೆಯಾಗಿರುವ ಬಗ್ಗೆ ಅವರ ಸಹೋದರ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಆಗಿನ ಇನ್ಸ್‌ಪೆಕ್ಟರ್ ಸಂಜೀವ್ ಗೌಡ ಹಾಗೂ ಪಿಎಸ್‌ಐ ಲತಾ ಅವರು ಸೀತಾ ಅವರ ಮೊಬೈಲ್ ಸಿಡಿಆರ್ (CDR) ಪರಿಶೀಲಿಸಿದಾಗ, ಕೊನೆಯದಾಗಿ ಮೆಂಟಲ್ ರಘು ಜೊತೆ ಮಾತನಾಡಿದ್ದು ಬೆಳಕಿಗೆ ಬಂದಿತ್ತು. ತಕ್ಷಣ ರಘು ಹಾಗೂ ಇತರರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇಡೀ ಕೊಲೆ ಕೃತ್ಯ ಬಾಯ್ಬಿಟ್ಟಿದ್ದರು. ಪೊಲೀಸರು ತುಂಗಭದ್ರಾ ಕ್ಯಾನಲ್‌ನಲ್ಲಿ ಸತತ ಹುಡುಕಾಟ ನಡೆಸಿದರೂ ಶವ ಸಿಗಲಿಲ್ಲ. ಸಿಸಿಟಿವಿ ದಾಖಲೆಗಳು, ಸಿಡಿಆರ್, ಚಿನ್ನ ಮಾರಾಟ ಮಾಡಿದ ಸಾಕ್ಷ್ಯಗಳು ಮತ್ತು ಆರೋಪಿಗಳ ಹೇಳಿಕೆಯನ್ನು ಆಧರಿಸಿ ಚಾರ್ಜ್‌ಶೀಟ್ ಸಲ್ಲಿಸಿ ಕೋರ್ಟ್‌ನಲ್ಲಿ ಶಿಕ್ಷೆ ಕೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us