Bengaluru Covid Cases: ಕೊವಿಡ್ ಕೇಸುಗಳ ಹೆಚ್ಚಳ; ಬೆಂಗಳೂರಿನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

| Updated By: ಸುಷ್ಮಾ ಚಕ್ರೆ

Updated on: Jun 07, 2022 | 2:10 PM

Mask Mandatory in Bangalore: ಐಟಿ ರಾಜಧಾನಿ ಬೆಂಗಳೂರಿನಲ್ಲಿ ಕೊವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ಕೊವಿಡ್-19ನ 4ನೇ ಅಲೆ ಉಂಟಾಗುವ ಭೀತಿ ಇರುವುದರಿಂದ ಬಿಬಿಎಂಪಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯಗೊಳಿಸಿದೆ.

Bengaluru Covid Cases: ಕೊವಿಡ್ ಕೇಸುಗಳ ಹೆಚ್ಚಳ; ಬೆಂಗಳೂರಿನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ
ಮಾಸ್ಕ್
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಕೊವಿಡ್ ಕೇಸುಗಳು (Bengaluru Covid Cases) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ಕಟ್ಟೆಚ್ಚರಗಳನ್ನು ಕೈಗೊಳ್ಳಲಾಗಿದೆ. ಬಿಬಿಎಂಪಿ (BBMP) ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯಗೊಳಿಸಿದೆ ಮತ್ತು ಕೊವಿಡ್ ವೈರಸ್ (Covid Virus) ಪರೀಕ್ಷೆಗಳನ್ನು ದಿನಕ್ಕೆ 16,000ರಿಂದ 20,000ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ದಿನನಿತ್ಯದ ಪ್ರಕರಣಗಳ ಹೆಚ್ಚಳವನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಒಂದೆರಡು ದಿನಗಳಲ್ಲಿ ಕೆಲವು ಕೊವಿಡ್ ನಿಯಂತ್ರಣ ಕ್ರಮಗಳನ್ನು ವಿಧಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸುಳಿವು ನೀಡಿದ್ದಾರೆ. ಆದರೆ, ಸರ್ಕಾರ ಈಗಾಗಲೇ ಕೆಲವು ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿರುವುದರಿಂದ ಅನಗತ್ಯ ಗಾಬರಿ ಅಥವಾ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಐಟಿ ರಾಜಧಾನಿ ಬೆಂಗಳೂರಿನಲ್ಲಿ ಕೊವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ಕೊವಿಡ್-19ನ 4ನೇ ಅಲೆ ಉಂಟಾಗುವ ಭೀತಿ ಇರುವುದರಿಂದ ಬಿಬಿಎಂಪಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯಗೊಳಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್, ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಕಡ್ಡಾಯ ನಿಯಮಗಳನ್ನು ವಿಧಿಸಲಾಗಿದೆ.

“ಶಾಪಿಂಗ್ ಮಾಲ್‌ಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು ಮತ್ತು ಜನರು ಸೇರುವ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಬಿಬಿಎಂಪಿ ಮಾರ್ಷಲ್‌ಗಳಿಗೆ ನಿಯಮವನ್ನು ಜಾರಿಗೆ ತರಲು ಕೆಲಸ ಮಾಡಲಾಗುವುದು” ಎಂದಿದ್ದಾರೆ. ಆದರೆ ಪ್ರಸ್ತುತ ಬಿಬಿಎಂಪಿ ಸರ್ಕಾರದ ಆದೇಶಕ್ಕೆ ಬದ್ಧವಾಗಿದೆ ಮತ್ತು ಯಾವುದೇ ದಂಡವನ್ನು ವಿಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Maharashtra Covid Guidelines: ಕೊವಿಡ್ ಪ್ರಕರಣಗಳ ಏರಿಕೆ; ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ತಮ್ಮ ಸರ್ಕಾರವು ದೈನಂದಿನ ಪ್ರಕರಣಗಳ ಏರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಕೆಲವು ಕೋವಿಡ್ ನಿಯಂತ್ರಣ ಕ್ರಮಗಳನ್ನು ವಿಧಿಸುವ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಸೂಚಿಸಿದ್ದಾರೆ. ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್ಲಾ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳುತ್ತಾರೆ ಮತ್ತು ತೆಗೆದುಕೊಳ್ಳುತ್ತಿರುವ ಕೊವಿಡ್ ನಿರ್ವಹಣೆ ಕ್ರಮಗಳನ್ನು ಪರಿಶೀಲಿಸುತ್ತಾರೆ ಮತ್ತು ನನಗೆ ವರದಿಯನ್ನು ಸಲ್ಲಿಸುತ್ತಾರೆ” ಎಂದು ಬೊಮ್ಮಾಯಿ ಹೇಳಿದ್ದಾರೆ.

ಕೊವಿಡ್-19 ಪ್ರಕರಣಗಳ ಉಲ್ಬಣದ ಮಧ್ಯೆ ಬೆಂಗಳೂರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರದಂತಹ ಕೊವಿಡ್- ಸೂಕ್ತ ನಡವಳಿಕೆಯನ್ನು ಜಾರಿಗೊಳಿಸಲು ಮಾರ್ಷಲ್‌ಗಳಿಗೆ ನಿರ್ದೇಶಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಕೊವಿಡ್ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಕರ್ನಾಟಕವು ಈ ಹಿಂದೆ ರಾಜ್ಯದಲ್ಲಿ ಕೋವಿಡ್ -19 ನಿರ್ಬಂಧಗಳನ್ನು ತೆಗೆದುಹಾಕಿತ್ತು. ಅಸ್ತಿತ್ವದಲ್ಲಿರುವ ಕೊವಿಡ್ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಯಾವುದೇ ದಂಡಗಳನ್ನು ವಿಧಿಸುವುದಿಲ್ಲ. ಇದೀಗ ಬೆಂಗಳೂರಿನಲ್ಲಿ ಕೊವಿಡ್ ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆ ಕಂಡುಬರುತ್ತಿದ್ದು, ಅಧಿಕಾರಿಗಳು ಮಾಸ್ಕ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಯೋಜಿಸಿದ್ದಾರೆ.

ಇದನ್ನೂ ಓದಿ: ಮಾಸ್ಕ್ ಹಾಕದೆ ಇರುವವರಿಗೆ ಮೇ 2ರಿಂದ ದಂಡ ಪ್ರಯೋಗ; ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ನೀಡಿದ ಸ್ಪಷ್ಟನೆ ಏನು ಗೊತ್ತಾ?

ಬಿಬಿಎಂಪಿ ಬೆಂಗಳೂರಿನಲ್ಲಿ ದೈನಂದಿನ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ದಿನಕ್ಕೆ 16,000ರಿಂದ 20,000ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ಮುಖ್ಯ ಆಯುಕ್ತರು ಎಲ್ಲಾ ಮಾರ್ಷಲ್‌ಗಳಿಗೆ ಮಾಸ್ಕ್ ಧರಿಸುವ ಬಗ್ಗೆ ಜನರಿಗೆ ಶಿಕ್ಷಣ ನೀಡುವಂತೆ ಸೂಚಿಸಿದ್ದಾರೆ. ಪ್ರಸ್ತುತ ಕೆ.ಆರ್. ಮಾರುಕಟ್ಟೆ, ಕಲಾಸಿಪಾಳ್ಯ, ಮಡಿವಾಳ, ಯಶವಂತಪುರ ಮತ್ತು ರಸೆಲ್ ಮಾರ್ಕೆಟ್‌ನಲ್ಲಿ 40 ಮಾರ್ಷಲ್‌ಗಳು ಮಾಸ್ಕ್ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ