
ಬೆಂಗಳೂರು, (ಜನವರಿ 13): ಕಳೆದ ನವೆಂಬರ್ ನಲ್ಲಿ ಬೆಂಗಳೂರು ಪೊಲೀಸರಿಗೆ (Bengaluru Police) ದೊಡ್ಡ ಅಘಾತ ಎದುರಾಗಿತ್ತು.. ಮೂರು ದಿನ ಅಕ್ರಮವಾಗಿ ಪೊಲೀಸರ ಕಸ್ಟಡಿಯಲ್ಲಿದ್ದ ದರ್ಶನ್ ಎಂಬ 22 ವರ್ಷದ ಯುವಕ ನಂತರ ರಿಹ್ಯಾಬ್ ಸೆಂಟರ್ ಸೇರಿದ ಮೂರೇ ದಿನಕ್ಕೆ ಪ್ರಾಣ ಬಿಟ್ಟಿದ್ದ. ಮಗನ ಈ ಸಾವಿಗೆ ಪೊಲೀಸರ ಹೊಡೆತಗಳೇ ಕಾರಣ ಎಂದು ಪೋಷಕರು ಆರೋಪಿಸಿದ್ದರು. ಇದರಿಂದ ವಿವೇಕ ನಗರ ಪೊಲೀಸರ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು. ಲಾಕ್ ಅಪ್ ಡೆತ್ ಸ್ವರೂಪದ ಈ ಕೇಸ್ ನಂತರ ಸಿಐಡಿಗೆ ವರ್ಗಾವಣೆ ಆಗಿತ್ತು. ಸದ್ಯ ಸಿಐಡಿ ತನಿಖೆಯಲ್ಲಿ ಇಡೀ ಪ್ರರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದರ್ಶನ್ ಕೊಲೆಗೆ ಪೊಲೀಸರು ಕಾರಣರಲ್ಲ ಎಂದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ.
ಹೌದು… ವಿವೇಕನಗರ ಪೊಲೀಸರಿಂದ ದರ್ಶನ್ ಕಸ್ಟೋಡಿಯಲ್ ಡೆತ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಲಾಕಪ್ ಡೆತ್ ಆರೋಪ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ಇದೀಗ ಸಿಐಡಿ ತನಿಖೆ ಮಾಡಿ ದರ್ಶನ್ ಸಾವಿಗೆ ಕಾರಣ ಯಾರು ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಸಿಐಡಿ ತನಿಖೆಯಲ್ಲಿ ದರ್ಶನ್ ಸಾವಿಗೆ ಕಾರಣ ಪೊಲೀಸರಲ್ಲ. ಬದಲಾಗಿ ಆತ ದಾಖಲಾಗಿದ್ದ ರಿಹ್ಯಾಬ್ ಸೆಂಟರ್ ಕೆಲಸಗಾರರು ಎನ್ನುವುದು ಬಯಲಿಗೆ ಬಂದಿದ್ದು, ಈ ಸಂಬಂಧ ಸಿಐಡಿ ಅಧಿಕಾರಿಗಳು 8 ಜನರನ್ನು ಬಂಧಿಸಿದ್ದಾರೆ. ನವೀನ್, ಅಖಿಲ್, ನಾರಾಯಣ @ನಾಣಿ, ಹಿತೇಶ್ ಕುಮಾರ್, ಮಂಜು, ಸಾಹಿಲ್ ಅಹಮದ್, ನವೀನ್ ಕುಮಾರ್, ರವಿ ಎನ್ನುವರನ್ನು ಬಂಧಿಸಲಾಗಿದೆ.
ಮೊದಲೇ ಕುಡಿತದ ದಾಸನಾಗಿದ್ದ ದರ್ಶನ್ ನನ್ನು ವಿವೇಕನಗರ ಪೊಲೀಸರು ಯಾವುದೇ ಕೇಸ್ ದಾಖಲಿಸಿದೆ ಮೂರು ದಿನ ಅಕ್ರಮವಾಗಿ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದರು. ಬಳಿಕ ಅಡಕಮಾರನಹಳ್ಳಿಯ ಯುನಿಟಿ ಫೌಂಡೇಶನ್ ಎಂಬ ರಿಹ್ಯಾಬ್ ಸೆಂಟರ್ ಗೆ ಸೇರಿಸಲಾಗಿತ್ತು.ಆದರೆ ದರ್ಶನ್ ಕಂಟ್ರೋಲ್ ಮಾಡೋದಕ್ಕೆ ರಿಹ್ಯಾಬ್ ಹುಡುಗರು ಆತನ ಮೇಲೆ ಎರಡ್ಮೂರು ದಿನ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ರಿಹ್ಯಾಬ್ ಸೆಂಟರ್ ನಲ್ಲಿ ಲೋ ಬಿಪಿಯಾಗಿ ದರ್ಶನ್ ಸಾವನ್ನಪ್ಪಿದ್ದ. ಸದ್ಯ ಸಿಐಡಿ ತನಿಖೆಯಲ್ಲಿ ರಿಹ್ಯಾಬ್ ಸೆಂಟರ್ ನ ಇನ್ಚಾರ್ಜ್ ಅಖಿಲ್ ಸೇರಿದಂತೆ 8 ಜನರನ್ನ ಬಂಧಿಸಿ ಜೈಲಿಗಟ್ಟಲಾಗಿದೆ.
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದರ್ಶನ್ ಎಂಬ ಯುವಕನನ್ನು ಪೊಲೀಸರು 2025ರ ನವೆಂಬರ್ 15ರಂದು ಸ್ಟೇಷನ್‌ಗೆ ಕರೆತಂದಿದ್ದರು. ಈ ವೇಳೆ ಯಾವುದೇ ಕೇಸ್ ಮಾಡದೆ, ಎರಡು ದಿನ ಕಸ್ಟಡಿಯಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಇದಾದ ಬಳಿಕ ಆತನನ್ನು ಬಿಟ್ಟು ಕಳಿಸಿದ್ದು, ಮಾದನಾಯಕನಹಳ್ಳಿ ಬಳಿ ಯುನಿಟಿ ರಿಹ್ಯಾಬಿಲೇಷನ್ ಸೆಂಟರ್‌ನಲ್ಲಿ (ಪುನರ್ವಸತಿ ಕೇಂದ್ರದಲ್ಲಿ) ಸೇರಿಸಲಾಗಿತ್ತು. ಆ ವೇಳೆ ದರ್ಶನ್ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆ ವೇಳೆ ಹಲ್ಲೆ ನಡೆಸಿರೋದು ಬೆಳಕಿಗೆ ಬಂದಿತ್ತು. ಈ ನಿಟ್ಟಿನಲ್ಲಿ ದರ್ಶನ್ ಪೋಷಕರು ಪೊಲೀಸರ ವಿರುದ್ಧವೇ ಲಾಕಪ್ ಡೆತ್ ಆರೋಪ ಮಾಡಿದ್ದರು. ಸಂಬಂಧ ವಿವೇಕನಗರ ಇನ್ಸ್ಪೆಕ್ಟರ್ ಶಿವಕುಮಾರ್ ಸೇರಿ ನಾಲ್ವರ ಮೇಲೆ FIR ದಾಖಲಾಗಿತ್ತು. ಇದೀಗ ಸಿಐಡಿ ತನಿಖೆಯಿಂದ ಅಸಲಿ ಸತ್ಯ ಬಯಲಿಗೆ ಬಂದಿದ್ದು, ವಿವೇಕನಗರ ಪೊಲೀಸರು ನಿಟ್ಟುಸಿರುಬಿಟ್ಟಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, Tv9, ಬೆಂಗಳೂರು