ಬೆಂಗಳೂರು: ಅರ್ಧಕ್ಕೆ ಕಾಲೇಜು ಬಿಟ್ಟು ತಾಯಿ ಜತೆ ಆನ್‌ಲೈನ್ ವಂಚನೆಗಿಳಿದ ಮೊಹಮ್ಮದ್ ಉಜೈಫ್
ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳು ಏರುತ್ತಿದ್ದು, ಯುವಕರ ಆನ್‌ಲೈನ್ ವಂಚನೆ ಜಾಲಗಳು ಸಕ್ರಿಯವಾಗಿವೆ. ಕಾಲೇಜು ಬಿಟ್ಟ ಮೊಹಮ್ಮದ್ ಉಜೈಫ್, ತನ್ನ ತಾಯಿ ಜೊತೆ ಸೇರಿ 4200 ಬ್ಯಾಂಕ್ ಖಾತೆಗಳನ್ನು ನಿರ್ವಹಿಸಿ 24 ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಪ್ರೇಮ್ ತನೇಜಾ ಜೊತೆಗೂ ಸಂಬಂಧವಿದೆ. ಜನರಿಂದ ಆಧಾರ್, ಪ್ಯಾನ್ ಪಡೆದು ಬ್ಯಾಂಕ್ ಖಾತೆ ತೆರೆದು ಹಣ ದೋಚುತ್ತಿದ್ದರು. ಐಷಾರಾಮಿ ಜೀವನ ನಡೆಸುತ್ತಿದ್ದ ಉಜೈಫ್, ಪೊಲೀಸರ ಬೃಹತ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರು, ಜ.15: ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ. ಜನರನ್ನು ತಮ್ಮ ಮೋಸದ ಬಲೆಗೆ ಬೀಳಿಸಿಕೊಂಡು ಕೋಟಿ ಕೋಟಿ ಹಣವನ್ನು ದೋಚುತ್ತಿದ್ದಾರೆ. ಇದೀಗ ಒಂದು ವರದಿ ಪ್ರಕಾರ, ಇಂತಹ ಕೃತ್ಯದಲ್ಲಿ ಯುವಕರೇ ಹೆಚ್ಚು ಭಾಗಿಯಾಗುತ್ತಿದ್ದಾರೆ. ಅದರಲ್ಲೂ ಕಾಲೇಜು ಅರ್ಧದಲ್ಲಿ ಬಿಟ್ಟು, ಇಂತಹ ಕೃತ್ಯದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದೀಗ ವೇಗವಾಗಿ ಹಣ ಸಂಪಾದಿಸುವ ಭರದಲ್ಲಿ 22 ವರ್ಷದ ಯುವಕ ಪೊಲೀಸರ ( Uzaif cyber scam) ಅತಿಥಿಯಾಗಿದ್ದಾನೆ. ಪೊಲೀಸರು ನಡೆಸಿದ ಬೃಹತ್ ಸೈಬರ್ ಅಪರಾಧ ಕಾರ್ಯಾಚರಣೆ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಆನ್‌ಲೈನ್ ವಂಚನೆಗಳ ಮೂಲಕ ಕದ್ದ ಹಣವನ್ನು ಸ್ಥಳಾಂತರಿಸಲು ಬಳಸುತ್ತಿದ್ದ ಸಾವಿರಾರು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಮೊಹಮ್ಮದ್ ಉಜೈಫ್ ಮತ್ತು ಅವನ ತಾಯಿ ಸಬಾನಾ ಅಬ್ದುಲ್ ಬಾರಿಯನ್ನು ಬಂಧಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಬಿಕಾಂ ಕೋರ್ಸ್ ಅರ್ಧಕ್ಕೆ ಬಿಟ್ಟ ಉಜೈಫ್, ಹಣ ಸಾಗಿಸುವ ದಲ್ಲಾಳಿಯಾಗಿ ಈ ವಂಚನೆ ಜಾಲದಲ್ಲಿ ಸೇರಿಕೊಳ್ಳುತ್ತಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ತನ್ನ ತಾಯಿಯ ಸಹಾಯದಿಂದ, ಅವನು ಸುಮಾರು 4,200 ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ಇನ್ನು ಇವನ ಜತೆಗಿದ್ದ ಗುಂಪುಗಳು 9,000 ಅಂತಹದೇ ಖಾತೆಗಳನ್ನು ನಿರ್ವಹಿಸುತ್ತಿತ್ತು. ಈ ಖಾತೆಗಳ ಮೂಲಕ ಸುಮಾರು 24 ಕೋಟಿ ರೂ. ನಿರ್ವಾಹಣೆ ಮಾಡಲಾಗುತ್ತಿತ್ತು. ಉಜೈಫ್ ಒಬ್ಬನೇ ಪ್ರತಿ ವರ್ಷ 25 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ದುಬೈ ಮೂಲದ ಭಾರತೀಯ ವ್ಯಕ್ತಿ ಪ್ರೇಮ್ ತನೇಜಾ ಜತೆಗೆ ಈ ಹಣ ಸಾಗಣೆಯನ್ನು ವಹಿವಾಟುಗಳನ್ನು ಹೊಂದಿದ್ದ ಎಂದು ವರದಿ ಹೇಳಿದೆ. ಪ್ರೇಮ್ ತನೇಜಾ ಅನ್ನು ಈ ಹಿಂದೆ 2013 ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ವ್ಯವಹಾರವನ್ನು ಮಾಡಲು ಪ್ರೇಮ್ ತನೇಜಾ, ಉಜೈಫ್ನ ತಾಯಿ ಜತೆಗೆ ಪ್ರಯಾಣ ಬೆಳೆಸಿದ್ದ ಎಂದು ಅಧಿಕಾರಿಗಳು ಹೇಳುತ್ತಾರೆ. ಇವರು ಈ ಜಾಲದ ಮುಂದುವರಿದ ಭಾಗವಾಗಿ ಇಬ್ಬರೂ, ಸರ್ಕಾರಿ ಆಸ್ಪತ್ರೆಗಳು ಮತ್ತು ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಹಾಗೂ ವಿದ್ಯಾರ್ಥಿಗಳನ್ನು 2 ಸಾವಿರ ರೂ. ಹಾಗೂ 5 ಸಾವಿರ ರೂ.ಗಳ ಖಾತೆಯನ್ನು ತೆರೆಯುವಂತೆ ಅವರನ್ನು ಒತ್ತಾಯಿಸುತ್ತಿದ್ದರು. ಕೆಲವೊಂದು ವಿದ್ಯಾರ್ಥಿಗಳು ಹಾಗೂ ಜನರು ಇವರ ಮೋಸದ ಜಾಲಕ್ಕೆ ಬಿದ್ದು, ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಇತರ ದಾಖಲೆಯನ್ನು ಈ ಮೋಸಗಾರರಿಗೆ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು: ಮಹಾಬಲೇಶ್ವರ ದೇವಸ್ಥಾನದ ಹುಂಡಿ ಹಣ, ಬೆಳ್ಳಿ ವಿಗ್ರಹಗಳು, ಕಂಚಿನ ಆಭರಣ ದೋಚಿದ ಕಳ್ಳರು
ನಂತರ ಈ ದಾಖಲೆಗಳನ್ನು ದೆಹಲಿಯಲ್ಲಿರುವ ಸಹವರ್ತಿಗಳಿಗೆ ಕಳುಹಿಸುತ್ತಿದ್ದರು. ನಂತರ ಅಲ್ಲಿಂದ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣವನ್ನು ಕಬಳಿಸುತ್ತಿದ್ದರು. ಈ ಕೆಲಸ ಮಾಡಿದಕ್ಕೆ ಉಜೈಫ್ನ ಮತ್ತು ಆತನ ತಾಯಿಗೆ ಹಣವನ್ನು ಸಂಬಳದ ರೂಪದಲ್ಲಿ ನೀಡುತ್ತಿದ್ದರು. ಈ ಇಬ್ಬರಿಗೆ ಸಹಾಯ ಮಾಡಿದ್ದಕ್ಕಾಗಿ ದೆಹಲಿಯ ಒಂಬತ್ತು ಯುವಕರನ್ನು ಪೊಲೀಸರು ಇಲ್ಲಿಯವರೆಗೆ ಬಂಧಿಸಿದ್ದಾರೆ. ದೇಶಾದ್ಯಂತ 864 ಸೈಬರ್ ಅಪರಾಧ ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿದೆ ಎಂದು ಹೇಳಲಾಗಿದೆ. ದಾಳಿಯ ಸಮಯದಲ್ಲಿ ಪೊಲೀಸರಿಗೆ ನೂರಾರು ಡೆಬಿಟ್ ಕಾರ್ಡ್‌ಗಳು, ಡಜನ್‌ಗಟ್ಟಲೆ ಮೊಬೈಲ್ ಫೋನ್‌ಗಳು, ಚಿನ್ನಾಭರಣಗಳು, ನಗದು, ಐಷಾರಾಮಿ ಕೈಗಡಿಯಾರಗಳು ಮತ್ತು ಡಿಜಿಟಲ್ ಪಾವತಿ ಮತ್ತು ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖಾಧಿಕಾರಿಗಳು ಹೇಳುವಂತೆ ಉಜೈಫ್ ಐಷಾರಾಮಿ ಜೀವನಶೈಲಿಗಾಗಿ ಬಹಳಷ್ಟು ಖರ್ಚು ಮಾಡುತ್ತಿದ್ದರು, ದುಬಾರಿ ಶೂಗಳು ಮತ್ತು ಐಷಾರಾಮಿ ಕೈಗಡಿಯಾರಗಳನ್ನು ಖರೀದಿಸುತ್ತಿದ್ದರು ಮತ್ತು ಜೆಪಿ ನಗರದಲ್ಲಿ ಹೆಚ್ಚಿನ ಬಾಡಿಗೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಎಂದು ಹೇಳಲಾಗಿದೆ.
ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Thu, 15 January 26
