ಉಚಿತ 5G ಅಪ್‌ಗ್ರೇಡ್ ಆಸೆಗೆ ಬಿದ್ದ ಬೆಂಗಳೂರು ವ್ಯಕ್ತಿಗೆ ಶಾಕ್: ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!

ಬೆಂಗಳೂರಿನಲ್ಲಿ ಆಘಾತಕಾರಿ ಸೈಬರ್ ವಂಚನೆ ನಡೆದಿದ್ದು, ಉಚಿತವಾಗಿ 4G ಯಿಂದ 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು 15 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವಂಚಕರು ಇ-ಸಿಮ್ (e-SIM) ತಂತ್ರ ಬಳಸಿ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಿದ್ದಾರೆ ಮತ್ತು ಅವರ ಬ್ಯಾಂಕ್ ಖಾತೆಯಿಂದ ಇನ್‌ಸ್ಟಂಟ್ ಲೋನ್ ಪಡೆದು ವಂಚಿಸಿದ್ದಾರೆ. ಸದ್ಯ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಉಚಿತ 5G ಅಪ್‌ಗ್ರೇಡ್ ಆಸೆಗೆ ಬಿದ್ದ ಬೆಂಗಳೂರು ವ್ಯಕ್ತಿಗೆ ಶಾಕ್: ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!
ಸಾಂದರ್ಭಿಕ ಚಿತ್ರ
Image Credit source: gettyimages.com

Updated on: Jun 17, 2026 | 11:54 AM

ಬೆಂಗಳೂರು, ಜೂನ್ 17: ಸ್ಮಾರ್ಟ್‌ಫೋನ್‌ನಲ್ಲಿ ಉಚಿತವಾಗಿ 4G ಯಿಂದ 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಿಕೊಡುವುದಾಗಿ ನಂಬಿಸಿದ ಸೈಬರ್ ವಂಚಕನೊಬ್ಬ, ಬೆಂಗಳೂರಿನ (Bengaluru) ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 15 ಲಕ್ಷ ರೂಪಾಯಿ ಇನ್‌ಸ್ಟಂಟ್ ಲೋನ್ ಮಾಡಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ವಿಕ್ಟೋರಿಯಾ ಲೇಔಟ್ ನಿವಾಸಿ, 50 ವರ್ಷದ ವ್ಯಕ್ತಿ ಈ ಜಾಲಕ್ಕೆ ಬಲಿಯಾದವರಾಗಿದ್ದಾರೆ. ಕೇವಲ 30 ನಿಮಿಷಗಳ ಅವಧಿಯಲ್ಲಿ ವಂಚಕರು ಇವರ ಬ್ಯಾಂಕ್ ಖಾತೆಯನ್ನು ಸಂಪೂರ್ಣ ಹ್ಯಾಕ್ ಮಾಡಿ ಈ ಕೃತ್ಯ ಎಸಗಿದ್ದಾರೆ.

ಮುಖ್ಯಾಂಶಗಳು

  • ಉಚಿತ 5G ಅಪ್‌ಗ್ರೇಡ್ ಆಸೆಗೆ ಬಿದ್ದು ಬೆಂಗಳೂರು ಉದ್ಯೋಗಿ ಭಾರಿ ವಂಚನೆಗೊಳಗಾಗಿದ್ದಾರೆ.
  • ಸಿಮ್ ಕಾರ್ಡ್ ಹ್ಯಾಕ್ ಮಾಡಿ 15 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ.
  • ಸಾರ್ವಜನಿಕರು ಒಟಿಪಿ ಅಥವಾ ಗೌಪ್ಯ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ.

4G ಯಿಂದ ಇ-ಸಿಮ್ (e-SIM) ವಂಚನೆಯ ಜಾಲ

ಜೂನ್ 13 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಈ ವ್ಯಕ್ತಿಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ತಾನು ಪ್ರಮುಖ ಟೆಲಿಕಾಂ ಕಂಪನಿಯೊಂದರ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡ ವಂಚಕ, ನಿಮ್ಮ ಮೊಬೈಲ್ ಸಿಮ್ ಅನ್ನು ಉಚಿತವಾಗಿ 5G ಗೆ ಅಪ್‌ಗ್ರೇಡ್ ಮಾಡಿಕೊಡುವುದಾಗಿ ಆಮಿಷ ಒಡ್ಡಿದ್ದ.

ಅವನ ಮಾತು ನಂಬಿದ್ದ ವ್ಯಕ್ತಿ ಆತ ಕೇಳಿದ ಇಐಡಿ (Embedded Identity Document) ಸಂಖ್ಯೆಯನ್ನು ನೀಡಿದ್ದಾರೆ. ಈ ಸಂಖ್ಯೆಯನ್ನು ಬಳಸಿಕೊಂಡು ವಂಚಕರು ವ್ಯಕ್ತಿಯ ಭೌತಿಕ ಸಿಮ್ ಅನ್ನು ತಕ್ಷಣವೇ ತಮ್ಮದೇ ಆದ ಬೇರೆ ಡಿವೈಸ್‌ನಲ್ಲಿ ‘ಇ-ಸಿಮ್’ (e-SIM) ಆಗಿ ಬದಲಾಯಿಸಿಕೊಂಡಿದ್ದಾರೆ. ಸಿಮ್ ಕಾರ್ಡ್ ವಂಚಕರ ಕೈ ಸೇರಿದ ಬೆನ್ನಲ್ಲೇ ವ್ಯಕ್ತಿಯ ಮೊಬೈಲ್ ನೆಟ್‌ವರ್ಕ್ ಕಡಿತಗೊಂಡಿದೆ.

ಕೇವಲ ಅರ್ಧ ಗಂಟೆಯಲ್ಲಿ 15 ಲಕ್ಷ ಸಾಲ!

ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯ ಸಂಪೂರ್ಣ ನಿಯಂತ್ರಣ ಸಾಧಿಸಿದ ಸೈಬರ್ ಅಪರಾಧಿಗಳು, ಅವರ ಬ್ಯಾಂಕಿಂಗ್ ವಿವರಗಳನ್ನು ಹ್ಯಾಕ್ ಮಾಡಿದ್ದಾರೆ. ಬಳಿಕ ವ್ಯಕ್ತಿಗೆ ತಿಳಿಯದಂತೆ ಅವರದೇ ಬ್ಯಾಂಕ್ ಖಾತೆಯ ಮೂಲಕ 15 ಲಕ್ಷ ರೂಪಾಯಿಗಳ ಇನ್‌ಸ್ಟಂಟ್ ಲೋನ್‌ಗೆ ಅರ್ಜಿ ಸಲ್ಲಿಸಿ, ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ.

ಮಂಜೂರಾದ 15 ಲಕ್ಷ ರೂ. ಸಾಲದ ಮೊತ್ತದಲ್ಲಿ ಸುಮಾರು 14.6 ಲಕ್ಷ ರೂ. ಖಾತೆಗೆ ಜಮೆಯಾಗಿದೆ. ವಂಚಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಧ್ಯಾಹ್ನ 3:30 ರ ವೇಳೆಗೆ ಆ ಖಾತೆಯಿಂದ 2.2 ಲಕ್ಷ ರೂಪಾಯಿಗಳನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಅದೃಷ್ಟವಶಾತ್, ತನ್ನ ಬ್ಯಾಂಕ್ ಖಾತೆಯಲ್ಲಿ ಏನೋ ಅಕ್ರಮ ನಡೆಯುತ್ತಿದೆ ಎಂಬುದನ್ನು ತಕ್ಷಣವೇ ಅರಿತ ವ್ಯಕ್ತಿ, ತಡಮಾಡದೆ ಬ್ಯಾಂಕ್ ಮತ್ತು ಸೈಬರ್ ಕ್ರೈಮ್ ಹೆಲ್ಪ್‌ಲೈನ್‌ಗೆ ದೂರು ನೀಡಿ ಖಾತೆಯನ್ನು ಫ್ರೀಜ್ ಮಾಡಿಸಿದ್ದಾರೆ. ಹೀಗಾಗಿ ಉಳಿದ ಹಣ ವಂಚಕರ ಪಾಲಾಗುವುದು ತಪ್ಪಿದೆ.

ಜೂನ್ 15 ರಂದು ಕೇಂದ್ರ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಭೌತಿಕ ಸಿಮ್ ಅನ್ನು ಇ-ಸಿಮ್ ಆಗಿ ಬದಲಾಯಿಸುವಾಗ ಸಾರ್ವಜನಿಕರು ಒಟಿಪಿ ಅಥವಾ ಯಾವುದೇ ಗೌಪ್ಯ ಸಂಖ್ಯೆಗಳನ್ನು ಹಂಚಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us