
ಬೆಂಗಳೂರು, ನವೆಂಬರ್ 27: ಬೆಂಗಳೂರಿನಲ್ಲಿಂದು (Bengaluru) ಬೆಳ್ಳಂಬೆಳಗ್ಗೆ ವಿಪರೀತ ಚಳಿ ಕಾಣಿಸಿಕೊಂಡಿದ್ದು, ವಾತಾವರಣ ಮಂಜಿನಿಂದ ಕೂಡಿತ್ತು. ಇದೇ ಕಾರಣಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 81 ವಿಮಾನಗಳ ಹಾರಾಟ ವಿಳಂಬವಾಗಿದ್ದು (Bengaluru Flight Delays), ಮಂಗಳೂರು ಮತ್ತು ದೆಹಲಿಯಿಂದ ಬರುತ್ತಿದ್ದ ವಿಮಾನದ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ವಿಮಾನ ಹಾರಾಟ ಪ್ರಸ್ತುತ ಸಹಜ ಸ್ಥಿತಿಗೆ ಮರಳಿದೆ.
ಇಂದು (ನ.27) ಬೆಳಗ್ಗೆ 4.44 ರಿಂದ 8 ಗಂಟೆಯವರೆಗೆ ಮಂಜು ಕವಿದ ವಾತಾವರಣದಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 81 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿತ್ತು. ಕೆಲ ವಿಮಾನಗಳು ಕಡಿಮೆ ಅವಧಿಯ ಮಟ್ಟಿಗೆ ವಿಳಂಬವಾದರೆ ಇನ್ನೂ ಕೆಲ ವಿಮಾನಗಳು ಗರಿಷ್ಠ 69 ನಿಮಿಷಗಳ ಕಾಲ ವಿಳಂಬವಾಯಿತು. ನಾಗರಿಕ ವಿಮಾನಯಾನ ನಿರ್ದೇಶನಾಲಯದ(DGCA) ಮಾನದಂಡದ ಪ್ರಕಾರ ವಿಮಾನ ವಿಳಂಬಕ್ಕೆ 15 ನಿಮಿಷಗಳ ಮಿತಿಯಿದ್ದು, 81ರಲ್ಲಿ 33 ವಿಮಾನಗಳು ಈ ಮಿತಿಯನ್ನು ದಾಟಿವೆ ಎನ್ನಲಾಗಿದೆ.
ಇದನ್ನೂ ಓದಿ ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ 14 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ; 8 ಬಗೆಯ ಅಪರೂಪದ ಪ್ರಾಣಿಗಳೂ ವಶಕ್ಕೆ
ಈ ವೇಳೆ ಎರಡು ವಿಮಾನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದ್ದು, ಬೆಳಗ್ಗೆ 7.21 ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು (IX 2923) ಚೆನ್ನೈಗೆ ಕಡೆ ಕಳುಹಿಸಲಾಗಿದೆ. ಬೆಳಗ್ಗೆ 7.47 ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವನ್ನು (AI 2653) ಕೊಚ್ಚಿ ಕಡೆಗೆ ಕಳುಹಿಸಲಾಗಿದೆ. ಪ್ರಸ್ತುತ ವಿಮಾನಗಳ ಹಾರಾಟ ಸಹಜ ಸ್ಥಿತಿಗೆ ಮರಳಿದ್ದರೂ, ಬೆಳಗಿನ ಜಾವದ ವಿಳಂಬದ ಪರಿಣಾಮ ಉಳಿದ ಯಾತ್ರೆಗಳ ಮೇಲೆಯೂ ಪರಿಣಾಮ ಬೀರಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:06 pm, Thu, 27 November 25