ಬಂಡೆ ಬ್ಲಾಸ್ಟ್​​ನಿಂದ 4 ಚಿರತೆಗಳು ಸಾವು: ಹೋರಾಟದ ಎಚ್ಚರಿಕೆ ಕೊಟ್ಟ ST ಸೋಮಶೇಖರ್, ಖಂಡ್ರೆ ಹೇಳಿದ್ದಿಷ್ಟು

ಬೆಂಗಳೂರಿನ ಯಶವಂತಪುರ ಸಮೀಪ ಅಕ್ರಮ ಕಲ್ಲು ಗಣಿಗಾರಿಕೆ ವೇಳೆ ನಡೆದ ಬ್ಲಾಸ್ಟ್‌ಗೆ ಗರ್ಭಿಣಿ ಚಿರತೆ ಮತ್ತು ಅದರ ಹೊಟ್ಟೆಯಲ್ಲಿದ್ದ ಮೂರು ಮರಿಗಳು ಮೃತಪಟ್ಟಿವೆ. ಶಾಸಕ ಎಸ್.ಟಿ. ಸೋಮಶೇಖರ್ ಘಟನೆಯನ್ನು ಖಂಡಿಸಿದ್ದಾರೆ. ಇನ್ನು ಸಚಿವ ಈಶ್ವರ್ ಖಂಡ್ರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಬಂಡೆ ಬ್ಲಾಸ್ಟ್​​ನಿಂದ 4 ಚಿರತೆಗಳು ಸಾವು: ಹೋರಾಟದ ಎಚ್ಚರಿಕೆ ಕೊಟ್ಟ ST ಸೋಮಶೇಖರ್, ಖಂಡ್ರೆ ಹೇಳಿದ್ದಿಷ್ಟು
ಶಾಸಕ ಎಸ್‌.ಟಿ ಸೋಮಶೇಖರ್
Edited By:

Updated on: Jan 01, 2026 | 8:13 PM

ಬೆಂಗಳೂರು, ಜನವರಿ 01: ನಾಲ್ಕು ಚಿರತೆಗಳ (Leopard) ಮೃತದೇಹ ಛಿದ್ರ ಛಿದ್ರವಾಗಿದೆ. ಕ್ವಾರಿಯಿಂದ  ಸಿಡಿದ (Quarry Blast) ಕಲ್ಲು ನಾಲ್ಕು ಚಿರತೆಗಳ ಪ್ರಾಣ ತೆಗೆದಿದೆ. ಗರ್ಭಿಣಿ ಚಿರತೆ ಮತ್ತು ಚಿರತೆಯ ಹೊಟ್ಟೆಯಲ್ಲಿದ್ದ ಮೂರು ಮರಿಗಳು ಹುಟ್ಟುವ ಮೊದಲೇ ಸತ್ತು ಹೋಗಿವೆ. ಚಿರತೆ ಕೊಂದವರ ವಿರುದ್ಧ ಯಶವಂತಪುರ ಕ್ಷೇತ್ರದ ಶಾಸಕ ಎಸ್‌.ಟಿ ಸೋಮಶೇಖರ್ ಕಿಡಿಕಾರಿದ್ದಾರೆ.

ಏನಿದು ಪ್ರಕರಣ?

ಯಶವಂತಪುರ ಕ್ಷೇತ್ರ ವ್ಯಾಪ್ತಿಗೆ ಬರುವ ಕೆಂಗೇರಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿ ವಾಪ್ತಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಕಲ್ಲು ಬಂಡೆ ಹೊಡೆಯಲು ಸಿಡಿಮದ್ದು ಸಿಡಿಸಲಾಗಿದ್ದು, ಕ್ವಾರಿಯಿಂದ ಸಿಡಿದ ಕಲ್ಲು ಗರ್ಭಿಣಿ ಚಿರತೆಗೆ ಬಡಿದಿದೆ. ಇದ್ರಿಂದ ಚಿರತೆ ಮೃತಪಟ್ಟಿದೆ. ಎಷ್ಟೇ ಕರೆ ಮಾಡಿದರೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಫೋನ್ ತೆಗೆಯಲಿಲ್ಲ. ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಶಾಸಕ ಎಸ್​​ಟಿ ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕ್ವಾರಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿಲ್ಲ. ಈ ಬಗ್ಗೆ ತನಿಖೆ ಮಾಡುತ್ತೇವೆ. ಗಂಭೀರವಾಗಿ ಪರಿಗಣಿಸುತ್ತೇವೆ. ಎಸ್‌ಟಿ ಸೋಮಶೇಖರ್ ಅವರ ಆರೋಪದ ಬಗ್ಗೆ ಮಾಹಿತಿ ಬಂದಿದೆ. ನಾನು ಬೀದರ್​​ನಲ್ಲಿದ್ದೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದೆ. ಅವರು ಕರೆ ಮಾಡಿದ್ದರಂತೆ. ನಾನು ಫೋನ್ ಬದಲಾಯಿಸಿದ ಕಾರಣ ನಾನು ಕರೆ ಸ್ವೀಕರಿಸಲು ಆಗಿಲ್ಲ ಎಂದರು.

ಇದನ್ನೂ ಓದಿ: ಚಾಮರಾಜನಗರದಲ್ಲಿ 5 ಹುಲಿಗಳು ಪ್ರತ್ಯಕ್ಷ: ನಿಷೇಧಾಜ್ಞೆ ಜಾರಿ, ಹೊರಬರದಂತೆ ಸೂಚನೆ

ಕ್ವಾರಿಯವರು ಬ್ಲಾಸ್ಟ್ ಮಾಡಿದ್ದಾರೆ. ಕ್ವಾರಿ ಅರಣ್ಯದ ಒಳಗಡೆ ಬರುವುದಿಲ್ಲ, ಹೊರಗೆ ಬರುತ್ತೆ. ನಮ್ಮ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಬ್ಲಾಸ್ಟ್ ಮಾಡಿದ ಕಾರಣಕ್ಕಾಗಿ ಒಂದು ಚಿರತೆ ಸತ್ತಿದೆ. ಚಿರತೆ ಮರಣೋತ್ತರ ಪರೀಕ್ಷೆ ಮಾಡಿದಾಗ ಹೊಟ್ಟೆಯಲ್ಲಿ ಮರಿ ಇತ್ತು ಅಂತ ಗೊತ್ತಾಗಿದೆ. ಅದನ್ನ ಅತ್ಯಂತ ಗಂಭೀರವಾಗಿ ನಮ್ಮ ಇಲಾಖೆ ಪರಿಗಣಿಸುತ್ತೆ. ತಪ್ಪಿತಸ್ಥರ ವಿರುದ್ಧ ಈಗಾಗಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಅವರ ವಿರುದ್ಧ ಅತ್ಯಂತ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ವನ್ಯಜೀವಿ ಸಂರಕ್ಷಣೆ ನಮ್ಮ ಆದ್ಯತೆ. ವನ್ಯಜೀವಿ ಸಂರಕ್ಷಣೆ ಮಾಡಿದರೆ ಮಾತ್ರ ಪ್ರಕೃತಿಯ ಸಮತೋಲನ ಕಾಪಾಡಲು ಸಾಧ್ಯ. ನಾವು ಆ ವಿಚಾರದ ಬಗ್ಗೆ ಬಹಳ ಗಂಭೀರವಾಗಿದ್ದೇವೆ. ನಾನು ಎಸ್‌ಟಿ ಸೋಮಶೇಖರ್ ಅವರ ಜೊತೆಗೂ ಕೂಡ ಮಾತನಾಡುತ್ತೇನೆ. ಕ್ವಾರಿ ಅರಣ್ಯ ಒಳಗಡೆ ಇಲ್ಲ ಅಂತ ಮಾಹಿತಿ ಇದೆ. ಸಾಕಷ್ಟು ವರ್ಷಗಳಿಂದ ಕೆಲ ಗಣಿಗಾರಿಕೆಗಳು ನಡೆಯುತ್ತಿವೆ. ನಿಯಮಾವಳಿಯಲ್ಲಿ ಅವಕಾಶ ಇದೆ ಮಾರ್ಗಸೂಚಿಯಲ್ಲಿ ಏನಾದರೂ ಉಲ್ಲಂಘನೆ ಆಗಿದ್ದರೆ ಅತ್ಯಂತ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳುತ್ತೆ. ಯಾರೇ ಇರಲಿ ಎಷ್ಟೇ ಒತ್ತಡ ಬರಲಿ, ಹಿಂದೆನೂ ನಾವು ಬಿಟ್ಟಿಲ್ಲ ಮುಂದೇನು ಬಿಡಲ್ಲ. ಪಾರದರ್ಶಕವಾದ ತನಿಖೆ ನಡೆಯುತ್ತದೆ ಕ್ರಮ ಆಗುತ್ತೆ. ಲೀಗಲ್ ಮೈನಿಂಗ್ ಇದ್ದರೂ ಕೂಡ ಈ ರೀತಿ ಬ್ಲಾಸ್ಟ್ ಮಾಡಲು ಅವಕಾಶವಿಲ್ಲ. ಈಗಾಗಲೇ ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಎಫ್‌ಎಸ್‌ಎಲ್ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ: ಪ್ರಭಾಷ್ ಚಂದ್ರ

ಚಿರತೆ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಷ್ ಚಂದ್ರ, ಇದು ಬೆಂಗಳೂರು ಅರ್ಬನ್ ಜಿಲ್ಲೆಯ ಮಾವಿನ ತೋಟದಲ್ಲಿ ಶುಕ್ರವಾರ ಘಟನೆ ನಡೆದಿದೆ. ಚಿರತೆ ಹೊಟ್ಟೆಯಲ್ಲಿ 3 ಮರಿಗಳಿದ್ದವು. ಮಾವಿನ ತೋಟದ ಪಕ್ಕದಲ್ಲಿ ಕ್ವಾರಿ ಇದೆ, ಆದರೆ ಚಿರತೆ ಮೃತಪಟ್ಟಿದ್ದು ಮಾವಿನ ತೋಟದಲ್ಲಿ. ಸರಿಯಾದ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಪಶು ವೈದ್ಯರು ಪರಿಶೀಲನೆ ಮಾಡಿದ್ದು, ಸ್ಯಾಂಪಲ್​​ ಸಂಗ್ರಹಿಸಿದ್ದಾರೆ. ಎಫ್​​ಎಸ್​ಎಲ್​ಗೆ ಕಳುಹಿಸಲಾಗಿದ್ದು, ವರದಿ ಬಂದ ಮೇಲೆ ನಿಖರವಾದ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ, ಹೆಬ್ಬುಲಿ ಕಂಡು ಭೀತಿಯಲ್ಲಿ ಗ್ರಾಮಸ್ಥರು

ವಿವಿಧ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ಕಲ್ಲು ಬಂಡೆ ಹೊಡೆಯುವ ಕ್ರಷರ್‌ಗಳನ್ನು ನಿಷೇಧಿಸಿ ಅಂತ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ಕಲ್ಲು ಬಂಡೆಯ ಹೊಡೆತಕ್ಕೆ ಪ್ರಾಣ ಕಳೆದುಕೊಂಡ ಚಿರತೆಯ ದೃಶ್ಯಗಳು ಮನಕಲಕುವಂತಿವೆ. ಇನ್ನಷ್ಟು ದುರ್ಘಟನೆಗಳು ನಡೆಯುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.