ಚಾಮರಾಜನಗರದಲ್ಲಿ 5 ಹುಲಿಗಳು ಪ್ರತ್ಯಕ್ಷ: ನಿಷೇಧಾಜ್ಞೆ ಜಾರಿ, ಹೊರಬರದಂತೆ ಸೂಚನೆ
ಚಾಮರಾಜನಗರ ತಾಲೂಕಿನ ನಂಜೆದೇವಪುರ ಬಳಿ 5 ಹುಲಿಗಳು ಪತ್ತೆಯಾಗಿವೆ. ಸೆರೆಹಿಡಿಯುವ ಕಾರ್ಯಾಚರಣೆ ಹಿನ್ನೆಲೆ ನಂಜೆದೇವಪುರ ಸೇರಿ ಮೂರು ಗ್ರಾಮಗಳಿಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಹಿತಕರ ಘಟನೆಗಳನ್ನು ತಪ್ಪಿಸಲು ನಾಗರಿಕರು ಮನೆಯಲ್ಲೇ ಇರುವಂತೆ ತಹಶೀಲ್ದಾರ್ ಆದೇಶಿಸಿದ್ದಾರೆ. ಇನ್ನು ಶಾಸಕ ಪುಟ್ಟರಂಗಶೆಟ್ಟಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಚಾಮರಾಜನಗರ, ಡಿಸೆಂಬರ್ 22: ಕಾಡಿನಲ್ಲಿರಬೇಕಿದ್ದ ಹುಲಿಗಳು (Tiger) ನಾಡಿಗೆ ನುಗ್ಗಿವೆ. ಚಾಮರಾಜನಗರ (Chamarajanagar) ತಾಲೂಕಿನ ನಂಜೆದೇವಪುರ ಗ್ರಾಮದ ಬಳಿ ಬರೋಬ್ಬರಿ ಐದು ಹುಲಿಗಳು ಒಟ್ಟಿಗೆ ಪ್ರತ್ಯಕ್ಷವಾಗಿದ್ದು, ಸದ್ಯ ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಂಜೆದೇವಪುರ ಸೇರಿ ಮೂರು ಗ್ರಾಮಗಳಲ್ಲಿ ಇಂದಿನಿಂದ ನಾಳೆ ಸಂಜೆ 6ರವರೆಗೂ 144 ಸೆಕ್ಷನ್ ಜಾರಿ ಮಾಡಿ ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಜಾರಿ
ಈಗಾಗಲೇ 5 ಹುಲಿಗಳಿರುವ ಜಾಗದ ಲೊಕೇಷನ್ ಅನ್ನು ಅರಣ್ಯ ಸಿಬ್ಬಂದಿ ಟ್ರ್ಯಾಕ್ ಮಾಡಿದ್ದಾರೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ಇರುವುದು ಕೇವಲ ಇಬ್ಬರೇ ಪಶು ವೈದ್ಯರು ಮಾತ್ರ. ಹೀಗಾಗಿ ಹುಲಿಗಳನ್ನು ಸೆರೆ ಹಿಡಿಯಲು ಕಷ್ಟಸಾಧ್ಯ ಎನ್ನುತ್ತಿದ್ದಾರೆ ಅರಣ್ಯ ಸಿಬ್ಬಂದಿ. ಸದ್ಯ ಹುಲಿಗಳ ಸೆರೆ ಕಾರ್ಯಾಚರಣೆ ಹಿನ್ನೆಲೆ ನಂಜೆದೇವನಪುರ, ವೀರನಪುರ, ಉಡಿಗಾಲ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆ ಮೂಲಕ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಯಾರೂ ಗುಂಪು ಸೇರಬಾರದು, ಮನೆಯಿಂದ ಹೊರಬರದಂತೆ ತಿಳಿಸಲಾಗಿದ್ದು, ಮೂರು ಗ್ರಾಮಗಳ ಜನರು ಸಹಕರಿಸುವಂತೆ ತಹಶೀಲ್ದಾರ್ ಗಿರಿಜಾ ಮನವಿ ಮಾಡಿದ್ದಾರೆ.
ಸ್ಥಳದಲ್ಲೇ ಬೀಡುಬಿಟ್ಟ ಶಾಸಕ ಪುಟ್ಟರಂಗಶೆಟ್ಟಿ
ಇನ್ನು ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಶಾಸಕ ಪುಟ್ಟರಂಗಶೆಟ್ಟಿಗೆ ಅಭಯ ನೀಡಿದ್ದು, ಹೆಚ್ಚಿನ ಆನೆ ಹಾಗೂ ನುರಿತ ಪಶು ವೈದ್ಯರನ್ನ ಕಳಿಸುವ ಆಶ್ವಾಸನೆ ನೀಡಿದ್ದಾರೆ. ನುರಿತ ಪಶು ವೈದ್ಯರ ಕೊರತೆ ಇರುವುದನ್ನು ಶಾಸಕ ಪುಟ್ಟರಂಗಶೆಟ್ಟಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಹುಲಿ ಕಾಟದಿಂದ ಸದ್ಯಕ್ಕಿಲ್ಲ ಮುಕ್ತಿ; ವ್ಯಾಘ್ರಗಳನ್ನು ಹಿಡಿಯಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತ ಅರಣ್ಯ ಇಲಾಖೆ
ಸದ್ಯ ಶಾಸಕ ಪುಟ್ಟರಂಗಶೆಟ್ಟಿ ಖುದ್ದು ಅರಣ್ಯ ಸಿಬ್ಬಂದಿಯ ಜೊತೆ ಪರಿಶೀಲನೆ ಕಾರ್ಯ ನಡೆಸಿದ್ದಾರೆ. ಅರಣ್ಯ ಸಿಬ್ಬಂದಿಯ ಜೊತೆ ಪರಿಶೀಲನೆ ವೇಳೆ ಡ್ರೋನ್ ಕ್ಯಾಮೆರಾದಲ್ಲಿ ಕಲ್ಲು ಕ್ವಾರಿಯ ಜಾಗದಲ್ಲಿ ತಾಯಿ ಹುಲಿ ಹಾಗೂ ಮರಿಹುಲಿಗಳ ಪಗ್ ಮಾರ್ಕ್ ಪತ್ತೆ ಆಗಿದೆ. ಇದೇ ಕಲ್ಲು ಕ್ವಾರಿಯಲ್ಲಿ 5 ಹುಲಿಗಳು ಬೀಡು ಬಿಟ್ಟಿವೆ.
ಕೂಂಬಿಂಗ್ಗೆ ಚಾಲನೆ
ಇನ್ನು ದುಬಾರೆ ಆನೆ ಶಿಬಿರದಿಂದ ಈಗಾಗಲೇ ಈಶ್ವರ ಹಾಗೂ ಲಕ್ಷ್ಮಣ ಆನೆಗಳು ಸ್ಥಳಕ್ಕೆ ಆಗಮಿಸಿದ್ದು, ಕೂಂಬಿಂಗ್ ಕಾರ್ಯಚರಣೆಗೆ ಚಾಲನೆ ನೀಡಲಾಗಿದೆ. ನಂಜೆದೇವಪುರ ಗ್ರಾಮಸ್ಥರು ಗಜಪಡೆಗೆ ಪೂಜೆ ಮಾಡಿ ಸ್ವಾಗತಿಸಿದರು. ಈಶ್ವರನ ಮಾವುತರಾಗಿ ವಿಶ್ವನಾಥ್ ಹಾಗೂ ಮಂಜುನಾಥ್, ಲಕ್ಷ್ಮಣನ ಮಾವುತರಾಗಿ ಸಂಜು ಹಾಗೂ ಸುರೇಶ ಆಗಮಿಸಿದ್ದಾರೆ. ಲಕ್ಷ್ಮಣನಿಗೆ 45 ವರ್ಷಗಳಾಗಿದ್ದು, 50ಕ್ಕೂ ಹೆಚ್ಚು ಕೂಂಬಿಂಗ್ನಲ್ಲಿ ಭಾಗಿಯಾಗಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:15 pm, Mon, 22 December 25



