ದುಬೈ ಮಾದರಿಯಲ್ಲಿ ಕೆಆರ್​ ಮಾರ್ಕೆಟ್ ಪಾರ್ಕಿಂಗ್ ನವೀಕರಣಕ್ಕೆ ಮುಂದಾದ ಜಿಬಿಎ: ಮೊದಲು ಕಸ ಕ್ಲೀನ್ ಮಾಡಿ ಎಂದ ಜನ

ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ನಲ್ಲಿರುವ ಹಳೆಯ ಪಾರ್ಕಿಂಗ್ ಅನ್ನು ದುಬೈ ಮಾದರಿಯಲ್ಲಿ ನವೀಕರಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ ಸಜ್ಜಾಗಿದೆ. 4 ಕೋಟಿ 37 ಲಕ್ಷ ರೂ ವೆಚ್ಚದ ಈ ಯೋಜನೆಗೆ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಅವರು ಪಾರ್ಕಿಂಗ್ ನಿರ್ವಹಣೆ ಸುಧಾರಣೆ ಮತ್ತು ಕಸದ ಸಮಸ್ಯೆ ಪರಿಹಾರವನ್ನು ಮೊದಲು ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ದುಬೈ ಮಾದರಿಯಲ್ಲಿ ಕೆಆರ್​ ಮಾರ್ಕೆಟ್ ಪಾರ್ಕಿಂಗ್ ನವೀಕರಣಕ್ಕೆ ಮುಂದಾದ ಜಿಬಿಎ: ಮೊದಲು ಕಸ ಕ್ಲೀನ್ ಮಾಡಿ ಎಂದ ಜನ
ಕೆ.ಆರ್.ಮಾರ್ಕೆಟ್
Updated By: ಗಂಗಾಧರ​ ಬ. ಸಾಬೋಜಿ

Updated on: Sep 07, 2025 | 7:54 AM

ಬೆಂಗಳೂರು, ಸೆಪ್ಟೆಂಬರ್​​ 07: ಅದು ನಿತ್ಯ ಸಾವಿರಾರು ಜನರು ಓಡಾಡುವ ಮಾರ್ಕೆಟ್ ಜಾಗ. ಆ ಜಾಗದಲ್ಲಿ ಪಾಳುಬಿದ್ದ ಕಟ್ಟಡದಂತಿದ್ದ ಪಾರ್ಕಿಂಗ್​ಗೆ (parking) ಮರುಜೀವ ಕೊಡುವುದಕ್ಕೆ ಗ್ರೇಟರ್ ಬೆಂಗಳೂರು ಅಥಾರಿಟಿ (Greater Bangalore Authority) ಸಜ್ಜಾಗಿದೆ. ದುಬೈ ಮಾದರಿಯಲ್ಲಿ ಹೈಫೈ ಪಾರ್ಕಿಂಗ್ ಮಾಡುತ್ತೇವೆ ಅಂತಾ ಜಿಬಿಎ ರೆಡಿಯಾಗಿದೆ. ಇತ್ತ ಪಾರ್ಕಿಂಗ್ ಕಾಮಗಾರಿ ಆರಂಭಿಸಿದ್ದರೆ ಟ್ರಾಫಿಕ್ ಸಮಸ್ಯೆ ಎದುರಾಗಲಿದ್ದು, ಹೀಗಾಗಿ ಜಿಬಿಎ ಮಾಡುವುದಕ್ಕೆ ಹೊರಟಿರುವ ಕಾಮಗಾರಿಗೆ ಆರಂಭದಲ್ಲಿ ಅಪಸ್ವರ ಕೇಳಿಬರುತ್ತಿದೆ.

ದುಬೈ ಮಾಡಲ್ ಬದಲು ಕಸ ಕ್ಲೀನ್ ಮಾಡಿ ಎಂದ ಜನ

ಸಿಲಿಕಾನ್ ಸಿಟಿ ಬೆಂಗಳೂರಿನ ಆಡಳಿತ ವಹಿಸಿಕೊಂಡಿರುವ ಗ್ರೇಟರ್ ಬೆಂಗಳೂರು ಅಥಾರಿಟಿ. ಇದೀಗ ಜಿಬಿಎ ಜಾರಿ ಬಳಿಕ ಬೃಹತ್ ಕಾಮಗಾರಿ ನಡೆಸುವುದಕ್ಕೆ ಸಜ್ಜಾಗಿದೆ. ರಾಜಧಾನಿಯ ಹೃದಯಭಾಗ ಕೆ.ಆರ್.ಮಾರ್ಕೆಟ್ ನ ಪಾರ್ಕಿಂಗ್​ಗೆ ಹೊಸ ರೂಪ ನೀಡಲು ಹೊರಟಿರುವ ಜಿಬಿಎ, ಮಾರ್ಕೆಟ್ ಪಾರ್ಕಿಂಗ್ ಅನ್ನ ದುಬೈ ಮಾದರಿಯಲ್ಲಿ ಮರುವಿನ್ಯಾಸ ಮಾಡುವುದಕ್ಕೆ ಸಜ್ಜಾಗಿದೆ.

ಇದನ್ನೂ ಓದಿ: ಇದು ಬೆಂಗಳೂರು ನೋಡಿ! ನಂಜಪ್ಪ ಸರ್ಕಲ್ ಬಳಿ ನಡು ರಸ್ತೆಯಲ್ಲೇ ಹೊಂಡದಲ್ಲಿ ಹೂತ ಪಿಕಪ್ ವಾಹನ

ಇತ್ತ ಇದುವರೆಗೆ ಪಾಳುಬಿದ್ದ ಕಟ್ಟಡದಂತಿದ್ದ ಪಾರ್ಕಿಂಗ್​ನಲ್ಲಿ ಶುಲ್ಕ ವಸೂಲಿಗೆ ಬ್ರೇಕ್ ಹಾಕಿರುವ ಜಿಬಿಎ, ಬರೋಬ್ಬರಿ 4 ಕೋಟಿ 37 ಲಕ್ಷ ರೂ. ವೆಚ್ಚದಲ್ಲಿ ದುಬೈ ಮಾದರಿಯ ಪಾರ್ಕಿಂಗ್ ನಿರ್ಮಾಣಕ್ಕೆ ತಯಾರಿ ನಡೆಸಿದೆ.

ಸದ್ಯ ನಿತ್ಯ ಸಾವಿರಾರು ಜನರು ಓಡಾಡುವ ಕೆ.ಆರ್.ಮಾರ್ಕೆಟ್​ನಲ್ಲಿರುವ ಪಾರ್ಕಿಂಗ್ ಲಾಟ್ ನಿರ್ವಹಣೆ ಇಲ್ಲದೇ ಗಬ್ಬೆದ್ದುನಾರ್ತಿದೆ. ಎಲ್ಲೆಂದರಲ್ಲಿ ಕಸದ ರಾಶಿ, ಅಶುಚಿತ್ವ ತಾಂಡವವಾಡುತ್ತಿದ್ದು, ಇದೀಗ ಇದೇ ಪಾರ್ಕಿಂಗ್ ಜಾಗವನ್ನ ದುಬೈ ಮಾದರಿಯಲ್ಲಿ ಮಾರ್ಪಾಡು ಮಾಡಲು ಪ್ಲ್ಯಾನ್​ ನಡೆಯುತ್ತಿದ್ದರೆ, ಇತ್ತ ಜಿಬಿಎನ ಈ ಪ್ಲ್ಯಾನ್​ಗೆ ಆರಂಭದಲ್ಲೇ ಅಪಸ್ವರ ಕೇಳಿಬರ್ತಿದೆ.

ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಹೇಳಿದ್ದಿಷ್ಟು

ಸದ್ಯ ಇದೇ ಜಾಗವನ್ನ ಮರುವಿನ್ಯಾಸ ಮಾಡುವುದಕ್ಕೆ ಅಂತಾ ಸ್ಮಾರ್ಟ್ ಸಿಟಿ ಕೂಡ ಕೈ ಹಾಕಿತ್ತು ಅಂತಿರೋ ವ್ಯಾಪಾರಿಗಳ ಸಂಘ, ಈಗ ಮಾರ್ಕೆಟ್ ಪಾರ್ಕಿಂಗ್​ನ ದುಬೈ ಮಾಡುತ್ತೇವೆ ಅಂತಾ ಬಂದಿರೋದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಅಂತಿದ್ದಾರೆ. ದುಬೈ ಮಾಡುವುದು ಬೇಡ ಇರುವ ಪಾರ್ಕಿಂಗ್ ಸರಿಯಾಗಿ ನಿರ್ವಹಣೆ ಮಾಡಿ ಎಂದು ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ರಫಿಕ್ ಹೇಳಿದ್ದಾರೆ.

ಇನ್ನು ಈಗಾಗಲೇ ಫ್ರೀಡಂ ಪಾರ್ಕ್​ನಲ್ಲಿ ಹೈಫೈ ಪಾರ್ಕಿಂಗ್ ಮಾಡಿಡುವ ರೈಟ್ ಪಾರ್ಕಿಂಗ್ ಕಂಪನಿಗೆ ಈ ಪ್ರಾಜೆಕ್ಟ್​ನ ಕೂಡ ವಹಿಸೋಕೆ ಜಿಬಿಎ ಪ್ಲ್ಯಾನ್ ಮಾಡಿದ್ದು, ಇತ್ತ ಕೋಟಿ ಕೋಟಿ ಹಣ ಸುರಿದು ಮಾಡಲು ಹೊರಟ ಕಾಮಗಾರಿಗೆ ಸಾರ್ವಜನಿಕರಿಂದಲೂ ಅಸಮಾಧಾನ ವ್ಯಕ್ತವಾಗ್ತಿದೆ. ಪಾರ್ಕಿಂಗ್ ಮಾಡುವುದಕ್ಕೆ ಶುರುಮಾಡಿದರೆ ಕಾಮಗಾರಿ ಮುಗಿಯುವ ತನಕ ಪಾರ್ಕಿಂಗ್ ಸಮಸ್ಯೆಯಾಗುತ್ತೆ ಅಂತಿರೋ ಜನರು, ದುಬೈ ಮಾದರಿನೂ ಬೇಡ, ಯಾವ ಮಾದರಿನೂ ಬೇಡ. ಸದ್ಯ ಇಲ್ಲಿ ಇರುವ ಕಸ ತ್ಯಾಜ್ಯವನ್ನ ಕ್ಲೀನ್ ಮಾಡಿ, ಕಾಮಗಾರಿ ಮುಗಿಯುವ ತನಕ ಬೇರೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿ ಅಂತಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್: 4500 ಹೊಸ ಬಸ್ಸು ಒದಗಿಸಲು ಗ್ರೀನ್ ಸಿಗ್ನಲ್, ಗುಜರಿ ಸೇರಲಿವೆ ಡಕೋಟಾ ಬಸ್​ಗಳು

ಸದ್ಯ ಕೆ.ಆರ್.ಮಾರ್ಕೆಟ್​ನಲ್ಲಿ ಈಗ ಇದ್ದ ಪಾರ್ಕಿಂಗ್ ಶುಲ್ಕ ವಸೂಲಿ ನಿಲ್ಲಿಸಿರುವ ಜಿಬಿಎ, ದುಬೈ ಮಾದರಿಯ ಪಾರ್ಕಿಂಗ್ ರೆಡಿಯಾದ ಬಳಿಕ 10 ವರ್ಷಗಳ ಕಾಲ ಗುತ್ತಿಗೆ ನೀಡಲು ತಯಾರಿ ನಡೆಸಿದೆ. ಸದ್ಯ ಹೊಸ ಪಾರ್ಕಿಂಗ್ ಲಾಟ್​ನಲ್ಲಿ 200 ಕಾರು, 400 ಬೈಕ್​​ಗಳನ್ನ ನಿಲ್ಲಿಸಲು ಅವಕಾಶ ಸಿಗಲಿದ್ದು, ಸದ್ಯ ಪಾರ್ಕಿಂಗ್ ಸಮಸ್ಯೆ, ಶುಚಿತ್ವದ ಅಭಾವದಿಂದ ಪಾಳುಬಿದ್ದ ಕಟ್ಟಡದಂತಿರುವ ಪಾರ್ಕಿಂಗ್​ಗೆ ಹೈಟೆಕ್ ಟಚ್ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.