ಕಾಮಗಾರಿ ನಡೆಯೋ ಜಾಗದಲ್ಲಿ ತಾತ್ಕಾಲಿಕ ಮೇಲ್ಸೇತುವೆ! ಕೋಲ್ಕತ್ತಾ ಕಂಪನಿ ಜೊತೆ ಹೊಸ ಪ್ರಯೋಗಕ್ಕೆ ಮುಂದಾದ ಜಿಬಿಎ
ಬೆಂಗಳೂರಿನ ವಿವಿಧೆಡೆಗಳಲ್ಲಿ ಕಾಮಗಾರಿಗಳಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಕಂಡುಹಿಡಿಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಯಾರಿ ನಡೆಸಿದೆ. ರಾಜಧಾನಿಯ ರಸ್ತೆಗಳನ್ನು ಅಗೆದು ಕಾಮಗಾರಿ ನಡೆಸುವ ವೇಳೆ ವಾಹನ ಸಂಚಾರಕ್ಕೆ ಆಗುತ್ತಿರುವ ಅಡಚಣೆಗೆ ಹೊಸ ಪ್ರಯೋಗದ ಮೂಲಕ ತಾತ್ಕಾಲಿಕ ಪರಿಹಾರ ಕಂಡುಹಿಡಿಯಲು ಜಿಬಿಎ ಪ್ಲಾನ್ ಮಾಡಿದೆ.

ಬೆಂಗಳೂರು, ಸೆಪ್ಟೆಂಬರ್ 5: ಬೆಂಗಳೂರಿನ (Bengaluru) ಬಹುತೇಕ ಕಡೆಗಳಲ್ಲಿ ಒಂದಿಲ್ಲೊಂದು ಕಾಮಗಾರಿಯ ನೆಪದಲ್ಲಿ ರಸ್ತೆಗಳನ್ನು ಅಗೆಯುವುದು ಜನರಿಗೆ ಸಂಕಷ್ಟ ತಂದಿಟ್ಟಿದೆ. ಜಲಮಂಡಳಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಪದೇ ಪದೇ ಕಾಮಗಾರಿಗೆ ರಸ್ತೆ ಅಗೆಯುವುದರಿಂದ ಜನರಿಗೆ ಆಗುವ ಸಂಚಾರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಹಿಡಿಯಲು ಜಿಬಿಎ ಇದೀಗ ಹೊಸ ಪ್ರಯೋಗ ಜಾರಿಗೆ ಚಿಂತನೆ ನಡೆಸಿದೆ. ಕಾಮಗಾರಿ ನಡೆಯುವ ಜಾಗಗಳಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಫ್ಲೈ ಓವರ್ ನಿರ್ಮಿಸಿ ವಾಹನ ಸಂಚಾರ ಸುಗಮ ಮಾಡಿಕೊಡಲು ಉದ್ದೇಶಿಸಿದ್ದು, ಸದ್ಯ ಕೊಲ್ಕತ್ತಾ ಮೂಲದ ಖಾಸಗಿ ಕಂಪನಿ ಜೊತೆ ಸೇರಿ ಈ ಯೋಜನೆ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಿದೆ.
ರಸ್ತೆ ಅಗೆದು ಕಾಮಗಾರಿ ನಡೆಸುವ ಕಡೆ ತಾತ್ಕಾಲಿಕವಾಗಿ 20 ರಿಂದ 30 ಮೀಟರ್ ಉದ್ದದ ತಾತ್ಕಾಲಿಕ ಫ್ಲೈ ಓವರ್ ನಿರ್ಮಿಸಿ ಆ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಲು ಈ ಯೋಜನೆ ಸಹಕಾರಿಯಾಗಲಿದೆ.
ಒಂದೇ ವಾರದಲ್ಲಿ ನಿರ್ಮಾಣವಾಗುತ್ತೆ ತಾತ್ಕಾಲಿಕ ಫ್ಲೈಓವರ್
ತಾತ್ಕಾಲಿಕ ಫ್ಲೈಓವರ್ ಅನ್ನು ಒಂದು ವಾರದ ಅವಧಿಯಲ್ಲಿ ನಿರ್ಮಿಸಬಹುದು ಎನ್ನಲಾಗುತ್ತಿದೆ. ಆದರೆ, ಈ ತಾತ್ಕಾಲಿಕ ಮೇಲ್ಸೇತುವೆಗೆ ಬರೋಬ್ಬರಿ 4ರಿಂದ 5 ಕೋಟಿ ರೂ. ವೆಚ್ಚ ಆಗುತ್ತದೆ ಎಂದು ಜಿಬಿಎ ಕಮಿಷನರ್ ಮಹೇಶ್ವರ್ ರಾವ್ ತಿಳಿಸಿದ್ದಾರೆ. ಈ ಯೋಜನೆ ಜಾರಿಗೊಳಿಸುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಆಗುತ್ತದೆ. ಇಲ್ಲಿನ ಸ್ಥಳೀಯ ಸಂಸ್ಥೆಗಳು ಇಂತಹ ಯೋಜನೆಗಳಿದ್ದರೆ ಸಲಹೆ ಕೊಡಬಹುದು ಎಂದಿದ್ದಾರೆ.
ಸದ್ಯ ಒಂದೆಡೆ ರಾಜಧಾನಿಯ ರಸ್ತೆಗಳಲ್ಲಿ ನಿತ್ಯ ಒಂದಿಲ್ಲೊಂದು ಕಾಮಗಾರಿಯ ನೆಪ ಹೇಳಿ ಅಗೆಯುವ ಕೆಲಸ ಆಗುತ್ತಿದ್ದರೆ, ಇತ್ತ ಕಾಮಗಾರಿಗಳು ಬೇಗ ಮುಗಿಯದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳು, ಎಲ್ಲೆಂದರಲ್ಲಿ ರಸ್ತೆ ಅಗೆದಿರುವುದನ್ನು ಮೊದಲು ಸರಿಪಡಿಸಿ ಎಂದು ಆಗ್ರಹಿಸಿರುವ ಸಾರ್ವಜನಿಕರು, ಮೊದಲು ಕಾಮಗಾರಿಗಳನ್ನು ಬೇಗ ಮುಗಿಸಿ ಸಮಸ್ಯೆಗಳಿಂದ ಮುಕ್ತಿ ಕೊಡಿ ಎಂದಿದ್ದಾರೆ.
ಇದನ್ನೂ ಓದಿ: ಮೆಟ್ರೋ ಎಲಿವೇಟೆಡ್ ಕಾರಿಡಾರ್ ಗೆ ಒಪ್ಪಿಗೆ: 37 KM ಉದ್ದದ ಡಬಲ್ ಡೆಕ್ಕರ್, ಏನಿದು ಪ್ಲಾನ್? ಎಲ್ಲಿಂದ ಎಲ್ಲಿಗೆ?
ಒಟ್ಟಿನಲ್ಲಿ, ಒಂದೆಡೆ ಗುಂಡಿಬಿದ್ದ ರಸ್ತೆಗಳು ಜನರ ಜೀವ ಹಿಂಡುತ್ತಿದ್ದರೆ, ಇತ್ತ ಅರೆಬರೆ ಕಾಮಗಾರಿಗಳು, ಆಮೆಗತಿಯ ಕೆಲಸಗಳು ನಗರವಾಸಿಗಳಿಗೆ ಸಂಕಷ್ಟ ತಂದಿಟ್ಟಿದೆ. ಇತ್ತ ಕೋಟ್ಯಂತರ ರೂ. ವೆಚ್ಚದಲ್ಲಿ ಜಿಬಿಎ ಪ್ರಯೋಗ ಮಾಡಲು ಹೊರಟಿರುವ ತಾತ್ಕಾಲಿಕ ಮೇಲ್ಸೇತುವೆ ಯೋಜನೆ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.



