ಮೆಟ್ರೋ ಎಲಿವೇಟೆಡ್ ಕಾರಿಡಾರ್ ಗೆ ಒಪ್ಪಿಗೆ: 37 KM ಉದ್ದದ ಡಬಲ್ ಡೆಕ್ಕರ್, ಏನಿದು ಪ್ಲಾನ್? ಎಲ್ಲಿಂದ ಎಲ್ಲಿಗೆ?
ಬೆಂಗಳೂರು ಮಹಾನಗರವನ್ನು ತೀವ್ರವಾಗಿ ಕಾಡುತ್ತಿರುವ ವಾಹನ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದು, ಎಲಿವೇಟೆಡ್ ಕಾರಿಡಾರ್‌ಗಳ (ಮೇಲ್ಸೇತುವೆ) ನಿರ್ಮಾಣ ಮಾಡುವುದೇ ಸಂಚಾರ ದಟ್ಟಣೆ ನಿವಾರಣೆ ಮಾಡಬಹುದಾಗಿದೆ. ಹೀಗಾಗಿ 37.121 ಕಿಲೋ ಮೀಟರ್ ಉದ್ದದ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಇಂದಿನ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಹಾಗಾದ್ರೆ, ಏನಿದು ಪ್ಲ್ಯಾನ್? ಎಲ್ಲಿಂದ ಎಲ್ಲಿಗ? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು, (ಸೆಪ್ಟೆಂಬರ್ 04): ಮೆಟ್ರೋ ಎಲಿವೇಟೆಡ್ ಕಾರಿಡಾರ್ ಗೆ (Elevated metro corridor) ರಾಜ್ಯ ಸಚಿವ ಸಂಪುಟ ಅನುಮೋದನೆ (Karnataka Cabinet decision) ನೀಡಿದೆ. ಬೆಂಗಳೂರು ಮೆಟ್ರೋ ಹಂತ-3, ಜೆಪಿನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ 37.121 ಕಿಲೋ ಮೀಟರ್ ಉದ್ದದ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಇಂದಿನ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಕುರಿತು ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿ ನಡೆಸಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್ ಕೆ ಪಾಟೀಲ್, ಬೆಂಗಳೂರು ಮೆಟ್ರೋ ಎಲಿವೇಟೆಡ್ ಕಾರಿಡಾರ್ ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಮೆಟ್ರೋ ಹಂತ-3ರ ಜೆ.ಪಿ. ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ (ಓಆರ್‌ಆರ್ ಪಶ್ಚಿಮ) ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ ಎರಡು ಕಾರಿಡಾರ್‌ಗಳಲ್ಲಿ 37.121 ಕಿ.ಮೀ.ಗಳ ಉದ್ದದ ಡಬಲ್ ಡೆಕ್ಕರ್ ನಿರ್ಮಾಣದಲ್ಲಿ ಮೆಟ್ರೋ ವಯಾಡೆಕ್ಟ್ ಜೊತೆಗೆ ಎಲಿವೇಟೆಡ್ ರಸ್ತೆಯನ್ನು 9700.00 ಕೋಟಿ ರೂಪಾಯಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬಿಡದಿ ಟೌನ್‌ಶಿಪ್: ಜಮೀನು ಕೊಟ್ಟವರಿಗೆ 2 ಕೋಟಿ ಅಥವಾ 50*50 ನಿವೇಶನ: ರೈತರಿಗೆ ಡಿಕೆಶಿ ಆಫರ್
ಏನಿದು ಮೆಟ್ರೋ ಎಲಿವೇಟೆಡ್ ಕಾರಿಡಾರ್?
ಮಹಾನಗರ ಬೆಂಗಳೂರನ್ನು ತೀವ್ರವಾಗಿ ಕಾಡುತ್ತಿರುವ ಸಮಸ್ಯೆ ಅಂದರೆ ಸಂಚಾರ ದಟ್ಟಣೆ. ಅದಕ್ಕೆ ಶಾಶ್ವತವಾಗಿ ಪರಿಹಾರ ಕಂಡುಕೊಲ್ಳಲು 16 ಕ್ಕೂ ಹೆಚ್ಚು ಎಲಿವೇಟರ್ ಕಾರಿಡಾರ್‌ಗಳ (ಮೆಲ್ಸೇತುವೆ) ನಿರ್ಮಾಣಕ್ಕೆ ಗ್ರೇಟರ್ ಬೆಂಗಳೂರು ಅಥಾರಿಟಿ ಮುಂದಾಗಿದೆ. ಅದಕ್ಕಾಗಿ ಬರೋಬ್ಬರಿ 13 ಸಾವಿರ ಕೋಟಿ ಹಣ ಮೀಸಲಿಡಲು ನಿರ್ಧರಿಸಲಾಗಿದೆ.
ಮೆಟ್ರೋ ಎಲಿವೇಟೆಡ್ ಕಾರಿಡಾರ್ ಎಂದರೆ ನೆಲದ ಮಟ್ಟಕ್ಕಿಂತ ಎತ್ತರದಲ್ಲಿ ನಿರ್ಮಿಸಲಾಗುವ ರಸ್ತೆ ಅಥವಾ ರೈಲು ಮಾರ್ಗ. ಈಗಾಗಲೇ ಇರುವ ರಸ್ತೆ ಮತ್ತು ಮೆಟ್ರೋ ಜಾಲಕ್ಕೆ ಉತ್ತಮ ಸಂಪರ್ಕ ಕಲ್ಪಿಸಲು, ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಮತ್ತು ನಗರದ ಅಭಿವೃದ್ಧಿಗೆ ಸಹಾಯವಾಗಲು ಈ ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು ಮತ್ತು ಜಂಕ್ಷನ್‌ಗಳನ್ನು ಸಂಪರ್ಕಿಸುವ ಮೂಲಕ ಪ್ರಸ್ತುತ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲಿದೆ.
ಉತ್ತರ-ದಕ್ಷಿಣ ಕಾರಿಡಾರ್‌ನ ಹೆಬ್ಬಾಳದ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ 17,780.13 ಕೋಟಿ ರೂಪಾಯಿ ವೆಚ್ಚದಲ್ಲಿ 16.745 ಕಿ.ಮೀ ಉದ್ದದ ಅವಳಿ ಸುರಂಗ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ಸಿಕ್ಕಿದೆ.
ಒಂದು ಅಂದಾಜಿನ ಪ್ರಕಾರ ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ದಾಟಿದೆ. 1.20 ಕೋಟಿಗಿಂತ ಹೆಚ್ಚು ವಾಹನಗಳಿವೆ. ಜೊತೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ರಾಜ್ಯಗಳಿಂದ ನಿತ್ಯ ಲಕ್ಷಾಂತರ ವಾಹನಗಳು ಬಂದು ಹೋಗುತ್ತವೆ. ಜನಸಂಖ್ಯೆ ಹೆಚ್ಚಳ ಮತ್ತು ಆರ್ಥಿಕ ಅಭಿವೃದ್ಧಿಯಿಂದಾಗಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಪ್ರಸ್ತುತ ಇರುವ ಹಾಲಿ ರಸ್ತೆಗಳು ಹಾಗೂ ಮೂಲತ ಸೌಕರ್ಯಗಳ ಸಮಸ್ಯೆ ಎದುರಾಗಿದೆ.
ಗ್ರೇಟರ್ ಬೆಂಗಳೂರು ಅಥಾರಿಟಿ 741 ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಸುಮಾರು 12,878 ಕಿ.ಮೀ. ಉದ್ದದ ರಸ್ತೆ ಜಾಲವಿದೆ. ಅಂದಾಜಿನ ಪ್ರಕಾರ ನಗರದ ಜನಸಂಖ್ಯೆ 1.40 ಕೋಟಿ ದಾಟಿದೆ. ಇನ್ನು ಸಿಲಿಕಾನ್ ಸಿಟಿಯಲ್ಲಿ ಸುಮಾರು 1.20 ಕೋಟಿಗಿಂತ ಹೆಚ್ಚು ವಾಹನಗಳಿವೆ. ಇದಲ್ಲದೆ, ಸುತ್ತಮುತ್ತಲ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ನಿತ್ಯ ಲಕ್ಷಾಂತರ ವಾಹನಗಳು ಬಂದು ಹೋಗುತ್ತವೆ. ಹೀಗಾಗಿ, ಗಂಟೆಗೆ 10-12 ಕಿ.ಮೀ. ದೂರವಷ್ಟೇ ಕ್ರಮಿಸಲು ಸಾಧ್ಯವಾಗುತ್ತಿದೆ. ಪರಿಣಾಮ, ನಗರದ ಜನರು ದಿನದ ಬಹುಪಾಲು ಸಮಯವನ್ನು ರಸ್ತೆಯಲ್ಲೇ ಕಳೆಯುತ್ತಿದ್ದು, ಸಂಚಾರ ದಟ್ಟಣೆಯಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುರಂಗ ರಸ್ತೆ, ಎಲಿವೇಟೆಡ್ ಕಾರಿಡಾರ್‌ನಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಹೊಸಹಳ್ಳಿಯಿಂದ ಕಡಬಗೆರೆ ಕ್ರಾಸ್‌ವರೆಗೆ ಮಾಗಡಿ ರಸ್ತೆಯಲ್ಲಿ 13 ಕಿಮೀ ಉದ್ದದ ಮೆಟ್ರೊ ಮಾರ್ಗದೊಂದಿಗೆ ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್‌ನಂತಹ ದೊಡ್ಡ ಯೋಜನೆಗಳಿಗೆ 1,560 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಈ ಹಿಂದೆ ಬಿಬಿಎಂಪಿಯ ಹಿರಿಯ ಎಂಜಿನಿಯರ್ ಒಬ್ಬರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.




