
ಬೆಂಗಳೂರು, ಡಿಸೆಂಬರ್ 30: 10 ಮಿನಿಟ್ ಡೆಲಿವರಿಯನ್ನು ನಿಷೇಧಿಸುವುದರ ಜೊತೆಗೆ ಇನ್ನೂ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗಿಗ್ ನೌಕರರು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಡಿ.25 ರಂದು ಭಾರತೀಯ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟ (IFAT), ಗಿಗ್ ಮತ್ತು ಪ್ಲಾಟ್‌ಫಾರ್ಮ್ ಸೇವಾ ಕಾರ್ಮಿಕರ ಒಕ್ಕೂಟಳು ಸೇರಿದಂತೆ ಹಲವಾರು ಒಕ್ಕೂಟಗಳು ಇದೇ ರೀತಿಯ ಮುಷ್ಕರಕ್ಕೆ ಕರೆ ನೀಡಿದ್ದವು, ಇದರಿಂದಾಗಿ ದೆಹಲಿ ಮತ್ತು ಗುರುಗ್ರಾಮದ ಕೆಲ ಪ್ರದೇಶಗಳಲ್ಲಿ ಅಡಚಣೆಗಳು ಉಂಟಾಗಿದ್ದರೂ ಬೆಂಗಳೂರಿನಲ್ಲಿ (Bengaluru) ಹೇಳುವಷ್ಟೇನೂ ತೊಂದರೆಯಾಗಿರಲಿಲ್ಲ. ಆದರೀಗ ಡಿ.31ರಂದು ನಡೆಯಲಿರುವ ಮುಷ್ಕರವು ಬೃಹತ್ ರೂಪದಲ್ಲಿ ಪರಿಣಮಿಸಬಹುದೆಂದು ಹೇಳಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ IFAT ನ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಪ್ರಶಾಂತ್ ಸವರ್ದೇಕರ್, ನಮ್ಮ ಒಕ್ಕೂಟ ಇಡೀ ದೇಶದಲ್ಲಿ ಸುಮಾರು 7 ಲಕ್ಷ ಯೂನಿಯನ್ ಸದಸ್ಯರನ್ನು ಹೊಂದಿದ್ದು, ಅದರಲ್ಲಿ 35,000 ಜನ ಬೆಂಗಳೂರಿನಲ್ಲಿದ್ದಾರೆ. ನಾವು ಯಾರಿಗೂ ಮುಷ್ಕರದಲ್ಲಿ ಭಾಗಿಯಾಗಿ ಎಂದು ಒತ್ತಾಯಿಸುತ್ತಿಲ್ಲ. ಅವರು ಸ್ವ ಇಚ್ಛೆಯಿಂದ ಭಾಗವಹಿಸಬಹುದು. ಹಲವು ಸದಸ್ಯರಿಗೆ ಪ್ರತಿಭಟನೆಯಲ್ಲಿ ಭಾಗಿಯಾಗುವ ಮನಸ್ಸಿದ್ದರೂ ತಮ್ಮ ಕಂಪನಿಗಳಿಗೆ ಹೆದರುತ್ತಿದ್ದಾರೆ ಎಂದಿದ್ದಾರೆ.
ಕರ್ನಾಟಕ ಅಪ್ಲಿಕೇಶನ್ ಆಧಾರಿತ ಕಾರ್ಮಿಕರ ಸಂಘವು ಇತರ ಒಕ್ಕೂಟಗಳೊಂದಿಗೆ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಈ ನಿಟ್ಟಿನಲ್ಲಿ ಪತ್ರ ಬರೆದಿದ್ದು, ಗಿಗ್ ಕೆಲಸಗಾರು ಎದುರಿಸುತ್ತಿರುವ ಸಮಸ್ಯೆಯೆಂದರೆ ಅಗ್ರಿಗೇಟರ್ ಪ್ಲಾಟ್ ಫಾರ್ಮ್‌ಗಳಿಂದ ವಿಧಿಸಲಾಗುವ ದಂಡಗಳ ಸಂಖ್ಯೆ ಹೆಚ್ಚುತ್ತಿರುವುದು. ಈ ಕುರಿತು ಮಾತನಾಡಿರುವ ಡೆಲಿವರಿ ಡ್ರೈವರ್ ಸಲಾವುದ್ದೀನ್ , ರೆಸ್ಟೋರೆಂಟ್ ಆರ್ಡರ್ ತಯಾರಿಕೆಯನ್ನು ವಿಳಂಬ ಮಾಡಿದರೆ, ಗ್ರಾಹಕರು ನಮ್ಮ ವಿರುದ್ಧ ದೂರು ನೀಡುತ್ತಾರೆ ಮತ್ತು ಗ್ರಾಹಕರು ಆರ್ಡರ್ ತೆಗೆದುಕೊಳ್ಳಲು ವಿಳಂಬ ಮಾಡಿ ಪ್ರತಿಕ್ರಿಯಿಸದಿದ್ದರೆ, ನಮ್ಮ ಸಮಯ ವ್ಯರ್ಥವಾಗುತ್ತದೆ. ಆದರೆ ಗ್ರಾಹಕರನ್ನು ಆ ಹೊಣೆ ಹೊರುವುದಿಲ್ಲ. ಇದರಿಂದಾಗಿ ನಮಗೆ ದಂಡ ವಿಧಿಸಲಾಗುತ್ತದೆ. ಇದು ರೆಸ್ಟೋರೆಂಟ್ ಅಥವಾ ಗ್ರಾಹಕರ ತಪ್ಪಾಗಿರಬಹುದು, ಆದರೆ ಅದರ ಹೊರೆಯನ್ನು ನಾವು ಹೊರುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ವರ್ಷದಿಂದ ಪ್ರತಿ ವಿತರಣೆಗೆ ಕನಿಷ್ಠ 20 ರೂ. ಮೂಲ ವೇತನ ನಿಗದಿಪಡಿಸಲಾಗುತ್ತದೆ ಎಂಬ ನಿರೀಕ್ಷೆಯನ್ನು ವಿತರಣಾ ಕಾರ್ಯನಿರ್ವಾಹಕರು ವ್ಯಕ್ತಪಡಿಸಿದ್ದಾರೆ. ಜೊತೆಗೆ, ಹೊಸ ವರ್ಷದ ಹಿಂದಿನ ದಿನ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಗೃಹ ಸೇವಾ ಕಾರ್ಮಿಕರು ಮತ್ತು ಕ್ಯಾಬ್ ಚಾಲಕರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಒಕ್ಕೂಟಗಳು ಕರೆ ನೀಡಿದ್ದು, ಇದರಿಂದಾಗಿ ಬುಧವಾರ ಕ್ಯಾಬ್ ಮತ್ತು ಆಟೋ ಸೇವೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಒಕ್ಕೂಟ ತಿಳಿಸಿದೆ.
ಡಿಸೆಂಬರ್ 31ರಂದು ಮುಷ್ಕರಕ್ಕೆ ವ್ಯಾಪಕ ಬೆಂಬಲ ದೊರೆತಲ್ಲಿ, ಆಹಾರ ವಿತರಣೆಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ನಗರದಾದ್ಯಂತ ರೆಸ್ಟೋರೆಂಟ್‌ಗಳು ಚಿಂತೆಯಲ್ಲಿವೆ. ಕೆಲವು ಸಣ್ಣ ಹೋಟೆಲ್‌ಗಳು ಕರೆಗಳ ಮೂಲಕ ಆರ್ಡರ್ ಸ್ವೀಕರಿಸಿ, ತಮ್ಮದೇ ಉದ್ಯೋಗಿಗಳ ಮೂಲಕ ವಿತರಣೆಗೆ ಮುಂದಾಗಲು ಯೋಜನೆ ರೂಪಿಸುತ್ತಿವೆ. ಆದರೆ ದೊಡ್ಡ ಪ್ರಮಾಣದ ರೆಸ್ಟೋರೆಂಟ್‌ಗಳು ಇನ್ನೂ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ.
ನಗರದಲ್ಲಿ ಸುಮಾರು 35 ಔಟ್‌ಲೆಟ್‌ಗಳನ್ನು ಹೊಂದಿರುವ ‘ದಿ ಪಿಜ್ಜಾ ಬೇಕರಿ’, ‘ಪ್ಯಾರಿಸ್ ಪಾನಿನಿ’ ಮತ್ತು ‘ಸ್ಮಾಶ್ ಗೈಸ್’ ಸಂಸ್ಥೆಗಳ ಮಾಲೀಕ ನಿಖಿಲ್ ಗುಪ್ತಾ ಮಾತನಾಡಿ, ನಾವು ಇನ್ನೂ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳಿಂದ ಯಾವುದೇ ಪಾವತಿಯನ್ನು ಸ್ವೀಕರಿಸಿಲ್ಲ. ಅವರು ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ಆಶೆಯಿದೆ. ಕೊನೆಯ ಕ್ಷಣದಲ್ಲಿ ಸ್ವಂತ ವಿತರಣಾ ವ್ಯವಸ್ಥೆ ಸ್ಥಾಪಿಸುವುದು ಅಸಾಧ್ಯ. ಇದರಿಂದ ನಮ್ಮ ಕಾರ್ಯಾಚರಣೆಗೆ ದೊಡ್ಡ ಹೊಡೆತ ಬೀಳಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.