ಪ್ರಯಾಣಿಕರಿಗೆ ನಿರಾಸೆ ಮಾಡುತ್ತಾ ಬೆಂಗಳೂರು – ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್? ಪ್ರಯಾಣದ ಸಮಯದ ಬಗ್ಗೆ ಚರ್ಚೆ

ನೈಋತ್ಯ ರೈಲ್ವೆಯ ಬೆಂಗಳೂರು-ಗೋವಾ ವಂದೇ ಭಾರತ್ ರೈಲು 13 ಗಂಟೆ ಪ್ರಯಾಣಿಸುವ ಅಂದಾಜು ಸಮಯದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಇದು ಪ್ರೀಮಿಯಂ ರೈಲಿಗೆ ದೀರ್ಘ ಸಮಯ. ಪ್ರಯಾಣಿಕರಿಗೆ ಅನುಕೂಲವಾಗಲು ಪ್ರಯಾಣದ ಸಮಯವನ್ನು 11 ಗಂಟೆಯೊಳಗೆ ಇಳಿಸಲು, ಸ್ಲೀಪರ್ ಕೋಚ್‌ಗಳನ್ನು ಸೇರಿಸಲು ಮತ್ತು ರಾತ್ರಿ ವೇಳಾಪಟ್ಟಿಗೆ ಬದಲಾಯಿಸಲು ರೈಲ್ವೆ ತಜ್ಞರು ಹಾಗೂ ಹೋರಾಟಗಾರರು ಒತ್ತಾಯಿಸಿದ್ದಾರೆ.

ಪ್ರಯಾಣಿಕರಿಗೆ ನಿರಾಸೆ ಮಾಡುತ್ತಾ ಬೆಂಗಳೂರು - ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್? ಪ್ರಯಾಣದ ಸಮಯದ ಬಗ್ಗೆ ಚರ್ಚೆ
ವಂದೇ ಭಾರತ್ ಬೆಂಗಳೂರು ಗೋವಾ

Updated on: Feb 23, 2026 | 1:05 PM

ಬೆಂಗಳೂರು, ಫೆ.23: ನೈಋತ್ಯ ರೈಲ್ವೆಯು ಬೆಂಗಳೂರು ಮತ್ತು ಗೋವಾದ ಮಡ್ಗಾಂವ್ (Vande Bharat Bengaluru Goa) ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಆದರೆ, ಈ ರೈಲಿನ ಅಂದಾಜು ಪ್ರಯಾಣದ ಸಮಯ ಮತ್ತು ವೇಳಾಪಟ್ಟಿಯ ಬಗ್ಗೆ ಈಗ ಭಾರಿ ಚರ್ಚೆ ಶುರುವಾಗಿದೆ. ವಂದೇ ಭಾರತ್ ರೈಲು ಬೆಂಗಳೂರಿನಿಂದ ಗೋವಾ ತಲುಪಲು ಸುಮಾರು 13 ಗಂಟೆಗಳ ಸಮಯ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದು ಪ್ರೀಮಿಯಂ ರೈಲಿಗೆ ಬಹಳ ದೀರ್ಘ ಸಮಯ ಎಂಬುದು ತಜ್ಞರ ಅಭಿಪ್ರಾಯ. ಜತೆಗೆ ಇದು ಪ್ರಯಾಣಿಕರಿಗೂ ತೊಂದರೆ ಆಗಲಿದೆ.

ಇನ್ನು ರೈಲ್ವೆ ತಜ್ಞ ಸಂಜೀವ್ ದ್ಯಾಮನವರ್ ಅವರ ಪ್ರಕಾರ, ಈ ರೈಲು ಹಗಲು ಹೊತ್ತಿನಲ್ಲಿ ಸಂಚರಿಸಿದರೆ ಪ್ರವಾಸಿಗರು ಇಡೀ ದಿನವನ್ನು ಪ್ರಯಾಣದಲ್ಲೇ ಕಳೆಯಬೇಕಾಗುತ್ತದೆ. ಬೆಳಿಗ್ಗೆ 4 ಗಂಟೆಗೆ ರೈಲು ಬಿಟ್ಟರೆ ಪ್ರವಾಸಿಗರಿಗೆ ತೊಂದರೆಯಾಗಲಿದೆ. ಅದರ ಬದಲು ಸಂಜೆ 6 ಅಥವಾ 7 ಗಂಟೆಗೆ ಹೊರಟು ಬೆಳಿಗ್ಗೆ 7 ಗಂಟೆಗೆ ಗೋವಾ ತಲುಪುವಂತಿದ್ದರೆ ಹೆಚ್ಚು ಅನುಕೂಲಕರ.

ವಂದೇ ಭಾರತ್ ಒಂದು ಪ್ರೀಮಿಯಂ ರೈಲಾದ್ದರಿಂದ ಇದರ ಟಿಕೆಟ್ ದರ ಎಲ್ಲರಿಗೂ ಕೈಗೆಟುಕುವಂತಿರಲಿಕ್ಕಿಲ್ಲ. ಅಲ್ಲದೆ, 12-13 ಗಂಟೆಗಳ ಕಾಲ ಕುಳಿತು ಪ್ರಯಾಣಿಸುವುದು ಕಷ್ಟಕರ. ಹೀಗಾಗಿ ಈ ಮಾರ್ಗಕ್ಕೆ ಸ್ಲೀಪರ್ ಕೋಚ್‌ಗಳಿರುವ (Sleeper Configuration) ರೈಲು ಹೆಚ್ಚು ಪ್ರಾಯೋಗಿಕ ಎಂದು ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: “ಬೆಂಗಳೂರನ್ನು ಮತ್ತೆ ಶ್ರೇಷ್ಠ ನಗರವನ್ನಾಗಿಸೋಣ”: ಈ ಬದಲಾವಣೆಯಾದರೆ ಸಿಲಿಕಾನ್ ಸಿಟಿ ವಿಶ್ವ ದರ್ಜೆಯ ನಗರ ಆಗುವುದು ಖಂಡಿತ

ಪ್ರಯಾಣದ ಸಮಯವನ್ನು ಕನಿಷ್ಠ 11 ಗಂಟೆಯೊಳಗೆ ತರಬೇಕು ಎಂದು ರೈಲ್ವೆ ತಜ್ಞರು ಒತ್ತಾಯಿಸಿದ್ದಾರೆ. ಪ್ರಸ್ತುತ ಬೆಂಗಳೂರು-ಬೆಳಗಾವಿ ವಂದೇ ಭಾರತ್ 9 ರಿಂದ 10 ಗಂಟೆ ತೆಗೆದುಕೊಳ್ಳುತ್ತಿದ್ದು, ಅದನ್ನು ಲೊಂಡಾ ಮಾರ್ಗವಾಗಿ ಗೋವಾಕ್ಕೆ ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆದಿದೆ. ನೈಋತ್ಯ ರೈಲ್ವೆಯ ಈ ಪ್ರಸ್ತಾವನೆಯು ಈಗ ರೈಲ್ವೆ ಮಂಡಳಿಯ (Railway Board) ಅನುಮೋದನೆಗಾಗಿ ಕಾಯುತ್ತಿದೆ. ಸಾರ್ವಜನಿಕರ ಈ ಆಕ್ಷೇಪಣೆಗಳನ್ನು ಮಂಡಳಿಯು ಪರಿಗಣಿಸುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us