
ಬೆಂಗಳೂರು, ಡಿಸೆಂಬರ್ 16: ನಡುರಸ್ತೆಯಲ್ಲಿ ಅಪಘಾತಗಳು ಸಂಭವಿಸದಾಗ ತುರ್ತು ಸಹಾಯ ನೀಡುವುದು ಮಾನವೀಯತೆ. ಆದರೆ ಬಹುತೇಕ ಅಕ್ಷರಸ್ತರೇ ತುಂಬಿರುವ ಬೆಂಗಳೂರಿನಲ್ಲಿ (Bengaluru) ರಸ್ತೆಯ ಮಧ್ಯೆ ಹೃದಯಾಘಾತದಿಂತ ವ್ಯಕ್ತಿಯೋರ್ವ ಅಸ್ವಸ್ಥನಾಗಿದ್ದರೂ, ಆತನ ಹೆಂಡತಿ ಅಂಗಲಾಚಿ ಬೇಡಿದರೂ ಜನರ ಕಲ್ಲು ಮನಸ್ಸು ಕರಗಲಿಲ್ಲ. ಪರಿಣಾಮ, ವ್ಯಕ್ತಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ಇತ್ತೀಚೆಗೆ ಇಳಿವಯಸ್ಸಿನವರು ಮಾತ್ರವಲ್ಲದೇ ಹದಿಹರೆಯದವರೂ ಸಹ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಕಿರಿ ವಯಸ್ಸಿನ ಹಲವರು ಇದೇ ಕಾರಣಕ್ಕೆ ಸಾವನ್ನಪ್ಪಿದ ಉದಾಹರಣಗಳಿವೆ. ಅಂತೆಯೇ ಇಟ್ಟುಮಡುವಿನ ಬಾಲಾಜಿನಗರ ನಿವಾಸಿ 34 ವರ್ಷದ ವೆಂಕಟರಮಣನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಪತ್ನಿಯೊಂದಿಗೆ ಬೈಕ್‌ನಲ್ಲಿಯೇ ಜಯದೇವ ಹೃದಯ ಆಸ್ಪತ್ರೆ ಕಡೆಗೆ ಹೊರಟಿದ್ದರು.ಮನೆಯಿಂದ ಕೇವಲ 100 ಮೀಟರ್ ದೂರ ಬಂದಾಗಲೇ ವೆಂಕಟರಮಣನ್‌ಗೆ ಲಘು ಹೃದಯಾಘಾತ ಸಂಭವಿಸಿದೆ.
ಚಲಿಸುತ್ತಿದ್ದ ಬೈಕ್‌ನಲ್ಲೇ ತೀವ್ರ ಹೃದಯಾಘಾತವಾದ ಕಾರಣ, ವೆಂಕಟರಮಣನ್ ರಸ್ತೆ ಮಧ್ಯೆ ಕುಸಿದುಬಿದ್ದದ್ದರು. ನೋವಿನಿಂದ ಒದ್ದಾಡುತ್ತಿದ್ದರೂ, ಸುತ್ತಮುತ್ತಲಿದ್ದ ಜನರು ನೆರವಿಗೆ ಬರಲಿಲ್ಲ. ಪತಿಯನ್ನು ಉಳಿಸಿಕೊಳ್ಳಲು ಪತ್ನಿ ಕೈಮುಗಿದು ಅಂಗಲಾಚಿದರೂ ಸಹಾಯಕ್ಕೆ ಯಾರೂ ಮುಂದಾಗಲಿಲ್ಲ. ಆಂಬ್ಯುಲೆನ್ಸ್ ಸಿಗದ ಹಿನ್ನೆಲೆ, ದಂಪತಿ ಬೈಕ್‌ನಲ್ಲೇ ಆಸ್ಪತ್ರೆಗೆ ತೆರಳಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗಮಧ್ಯೆ ಕದೇರನಹಳ್ಳಿ ಸಮೀಪ ವೆಂಕಟರಮಣನ್ ಕೊನೆಯುಸಿರೆಳೆದಿದ್ದಾರೆ. ಈ ದುರ್ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ವೆಂಕಟರಮಣನ್ ಕುಟುಂಬಸ್ಥರು, ಅವರ ಎರಡೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೃತ ವೆಂಕಟರಮಣ ಪತ್ನಿ ರೂಪ ಪತಿಯನ್ನು ಕಳೆದುಕೊಂಡು ಕಣ್ಣೀರು ಹಾಕಿದ್ದು, ಅವರಿಗೆ ಮನೆಯಲ್ಲೆ ಎದು ನೋವು ಕಾಣಿಸಿಕೊಂಡಿತ್ತು.ತಕ್ಷಣ ಸ್ಥಳಿಯ ಆಸ್ಪತ್ರೆಗೆ ಬೈಕಿನಲ್ಲೆ ಹೋದ್ವಿ. ಮೇಜರ್ ಇದೆ ಜಯದೇವಾಗೆ ಹೋಗಿ ಅಂತ ವೈದ್ಯರು ಹೇಳಿದರು. ಒಂದು ಅಂಬುಲೆನ್ಸ್ ವ್ಯವಸ್ಥೆ ಕೂಡ ಆಸ್ಪತ್ರೆಯವರು ಮಾಡಿಲ್ಲ. ಜಯದೇವ ಆಸ್ಪತ್ರೆಗೆ ನಾವು ಬೈಕಿನಲ್ಲೆ ಹೊರಟ್ವಿ. ಅದ್ರೆ ಕದೇರನಹಳ್ಳಿ ಬಳಿ ಹೋಗ್ತಾ ಅವ್ರಿಗೆ ಎದೆನೋವು ಜಾಸ್ತಿಯಾಯ್ತು. ಮತ್ತೊಂದು ಬೈಕ್ ಗೆ ಅಪಘಾತವಾಗಿ ರಸ್ತೆಯಲ್ಲೆ ಇಬ್ಬರೂ ಬಿದ್ವಿ. ನನಗೆ ಗಾಯವಾಗಿ ರಕ್ತ ಬರ್ತಿದ್ರೂ ಎಲ್ಲರಲ್ಲೂ ಕೈ ಮುಗಿದು ಕೇಳಿಕೊಂಡೆ. ರಸ್ತೆಯಲ್ಲಿ ಹೋಗುವವರು ಯಾರು ನಮ್ಮ ಕಡೆ ನೋಡಲೆ ಇಲ್ಲ. ಯಜಮಾನ್ರು ಕಣ್ಣು ಬಿಟ್ಟು ತಲೆ ಎತ್ತಿ ನನ್ನನ್ನ ಬೋಡ್ತಾ ಇದ್ರೂ. ಅವ್ರಿಗೆ ಮಕ್ಕಳನ್ನ ನೋಡ್ಬೇಕು ಅನ್ನೋ ಆಸೆಯಾಗಿತ್ತು.15 ನಿಮಿಷ ಆದ್ಮೆಲೆ ಒಬ್ಬರು ಕ್ಯಾಬ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದ್ರು. ಅಷ್ಟರಲ್ಲಿ ಅವರ ಪ್ರಾಣ ಹೋಗಿತ್ತು ಎಂದು ಗೋಳಿಟ್ಟಿದ್ದಾರೆ.
ಒಬ್ಬರು ಯಾರಾದ್ರೂ ಸಹಾಯ ಮಾಡಿದ್ರೆ ಅವ್ರು ಬದುಕ್ತಿದ್ರು. ಇಬ್ಬರೂ ಸಣ್ಣ ಮಕ್ಕಳಿದ್ದಾರೆ,ಅವ್ರನ್ನ ಈಗ ನಾನೆ ನೋಡ್ಕೋಬೇಕು.ಅವ್ರ ಎರಡೂ ಕಣ್ಣನ್ನ ನಾನು ದಾನ ಮಾಡಿದ್ದೇವೆ. ಅದ್ರಿಂದ ಯಾರಿಗಾದ್ರೂ ದೃಷ್ಟಿ ಬಂದ್ರೆ ಅವ್ರಿಗಾದ್ರೂ ಉಪಯೋಗ ಆಗ್ಲಿ.ಜನ ಸ್ವಲ್ಪನಾದ್ರೂ ಮಾನವೀಯತೆ ಹೊಂದಿರಬೇಕು. ಜನ ಮಾನವೀಯತೆಯನ್ನೆ ಮರೆತಿದ್ದಾರೆ ಎಂದು ದುಃಖ ತೋಡಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:47 pm, Tue, 16 December 25