AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಗೆ ಸೇರಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟ: ಜಾಲ ಭೇದಿಸಿದ DRI

ರೈತರಿಗೆ ಸೇರಬೇಕಿದ್ದ ಸಬ್ಸಿಡಿ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದಂಧೆಯನ್ನು DRI ನೆಲಮಂಗಲದಲ್ಲಿ ಭೇದಿಸಿದೆ. 266 ರೂ.ಗೆ ರೈತರಿಗೆ ಲಭ್ಯವಾಗಬೇಕಾದ ಯೂರಿಯಾವನ್ನು 2000-2500 ರೂ.ಗಳಿಗೆ ಅಕ್ರಮವಾಗಿ ಮಾರಲಾಗುತ್ತಿರೋದು ಬಯಲಾಗಿದೆ. ಆರ್​. ಅಶೋಕ್​​ ಇದೊಂದು 'ಯೂರಿಯಾ ಹಗರಣ' ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಸೇರಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟ: ಜಾಲ ಭೇದಿಸಿದ DRI
ಯೂರಿಯಾ ದಾಸ್ತಾನು
ಮಂಜುನಾಥ ಕೆಬಿ
| Edited By: |

Updated on: Dec 16, 2025 | 3:47 PM

Share

ನೆಲಮಂಗಲ, ಡಿಸೆಂಬರ್​​ 16: ರಾಜ್ಯಕ್ಕೆ ವಿನಾಯಿತಿ ಮೇಲೆ ಕೇಂದ್ರ ಸರ್ಕಾರ ಕೊಡ್ತಿರುವ ಯೂರಿಯಾದ ಅಭಾವದಿಂದಾಗಿ ರೈತರು ಪರದಾಟ ನಡೆಸಿದ ಸಾಕಷ್ಟು ಘಟನೆಗಳು ನಡೆದಿವೆ. ಕಿಲೋ ಮೀಟರ್​​ಗಟ್ಟಲೆ ಉದ್ದದ ಸರತಿ ಸಾಲಲ್ಲಿ ನಿಂತರೂ ಯೂರಿಯಾ ಸಿಗದೆ ಅದೆಷ್ಟೋ ಮಂದಿ ಹಿಂದಿರುಗಿದ್ದಾರೆ. ಈ ನಡುವೆ ರೈತರಿಗೆ ಹಂಚಿಕೆಯಾಗಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟವಾಗ್ತಿರೋ ಆತಂಕಕಾರಿ ವಿಷಯ ಬಹಿರಂಗವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೆಜ್ಜಗದಹಳ್ಳಿ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾವನ್ನು DRI ಜಪ್ತಿ ಮಾಡಿದೆ.

ದಾಳಿಯ ವೇಳೆ ಗೆಜ್ಜಗದಹಳ್ಳಿಯಲ್ಲಿ 2 ಸಾವಿರ ಕೆಜಿ ಯೂರಿಯಾವನ್ನು DRI ವಶಕ್ಕೆ ಪಡೆದಿದೆ. 6 ತಿಂಗಳ ಹಿಂದೆ ತಜೀರ್ ಖಾನ್ ಯೂಸುಫ್ ಎಂಬವರು ತಿಂಗಳಿಗೆ 40 ಸಾವಿರಕ್ಕೆ ಶೆಡ್​​ ಬಾಡಿಗೆಗೆ ಪಡೆದಿದ್ದರು.ಇಲ್ಲಿಂದ ಯೂರಿಯಾ ಪ್ಯಾಕ್ ಮಾಡಿ ತಮಿಳುನಾಡಿಗೆ ಕಳುಹಿಸಲಾಗ್ತಿತ್ತು. ತಮಿಳುನಾಡಿನಲ್ಲಿ ದಾಳಿ ವೇಳೆ DRI ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡ್ತಿದ್ದ 45 ಕೆಜಿ ತೂಕದ ಯೂರಿಯಾವನ್ನು ಶೆಡ್​ಗಳಿಗೆ ತಂದು ದಾಸ್ತಾನು ಮಾಡಲಾಗ್ತಿತ್ತು. ಬಳಿಕ ಅದನ್ನು ಬೇರೆ ಚೀಲಗಳಿಗೆ ತುಂಬಿ 50 ಕೆಜಿ ಚೀಲವನ್ನಾಗಿ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಕೇವಲ 266 ರೂ.ಗೆ ರೈತರಿಗೆ ನೀಡಬೇಕಿದ್ದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ 2000 ರೂ.ಗೆ ದಂಧೆಕೋರರು ಮಾರಾಟ ಮಾಡ್ತಿದ್ದರು.

ಇದನ್ನೂ ಓದಿ: ರಾಯಚೂರಿನಲ್ಲಿ 79 ಟನ್​ ಯೂರಿಯಾ ಕಾಳಸಂತೆಯಲ್ಲಿ ಮಾರಾಟ

ಕೇಂದ್ರವು 45 ಕೆಜಿ ತೂಕದ 2321 ರೂ. ಬೆಲೆಯ ಯೂರಿಯಾಗೆ 2054 ರೂ. ಸಬ್ಸಿಡಿ ನೀಡಿ 266 ರೂಪಾಯಿಗೆ ರಾಜ್ಯಕ್ಕೆ ನೀಡುತ್ತದೆ. ಅದನ್ನೇ ಇವರು ಕಾಳಸಂತೆಯಲ್ಲಿ 2500 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವುದೀಗ ಬಯಲಾಗಿದೆ. ಕೇಂದ್ರ ಸರ್ಕಾರದಿಂದ ಯೂರಿಯಾ ರಾಜ್ಯದ ಕೃಷಿ ಇಲಾಖೆಗೆ ವರ್ಗಾವಣೆ ಆಗುತ್ತದೆ. ಆ ಬಳಿಕ ಇಲಾಖೆಯೇ ರೈತರಿಗೆ ಇವನ್ನು ವಿತರಣೆ ಮಾಡಬೇಕು. ಹೀಗಿರುವಾಗ ಅವು ದಂಧೆಕೋರರ ಕೈಸೇರುತ್ತಿರೋದಾದ್ರೂ ಹೇಗೆ ಎಂಬ ಪ್ರಶ್ನೆಯೂ ಈಗ ಉದ್ಭವಿಸಿದೆ.

ವಿಪಕ್ಷ ನಾಯಕ ಆರ್​​. ಅಶೋಕ್​​ ಕಿಡಿ

ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರೋ ವಿಪಕ್ಷ ನಾಯಕ ಆರ್​​. ಅಶೋಕ್​​, ರಾಜ್ಯದಲ್ಲಿ ದೊಡ್ಡ ಯೂರಿಯಾ ಹಗರಣವೇ ನಡೆದಿದೆ. DRI ಕಾಳಸಂಂತೆಯಲ್ಲಿ ಗೊಬ್ಬರ ವಶಪಡಿಸಿಕೊಂಡಿದ್ದು, ಕೇಂದ್ರ ಸರಕಾರ ಯೂರಿಯಾ ಕೊಡ್ತಿಲ್ಲ ಎಂದಿದ್ದ ರಾಜ್ಯದ ಸಚಿವರು ಈಗ ಏನು ಹೇಳುತ್ತಾರೆ? ಕಾಳಸಂತೆಗೆ ಯೂರಿಯಾ ಹೋಗಿದ್ದೇಗೆ? ನಿದ್ದೆ ಮಾಡುತ್ತಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ. ಈ ಬಗ್ಗೆ ವಿಧಾನ ಸಭೆಯಲ್ಲೂ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.