
ಬೆಂಗಳೂರು, (ಮಾರ್ಚ್ 30): ಸ್ಮಾರ್ಟ್ ಟ್ರಾಫಿಕ್ ನಿರ್ವಹಣಾ ವ್ಯವಸ್ಥೆ ಜಾರಿಗೆ ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆ ದೃಷ್ಟಿಯಿಂದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಬಾಡಿ ಕ್ಯಾಮೆರಾ (body worn camera) ಬಳಸುವುದು ಕಡ್ಡಾಯವಾಗಿದೆ. ಆದ್ರೆ, ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಪೊಲಿಸ್ ಠಾಣೆಯ (Bengaluru High Grounds Traffic Police Station) ಮೂವರು ಸಿಬ್ಬಂದಿ ಬಾಡಿ ಕ್ಯಾಮೆರಾ ಆಫ್ ಮಾಡಿಕೊಂಡು ವಿನಾ ಕಾರಣ ಬೈಕ್ ನಿಲ್ಲಿಸಿ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿದ್ದು, ಸಂಬಂಧ ಇದೀಗ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಹೈ ಗ್ರೌಂಡ್ ಸಂಚಾರಿ ಪೊಲೀಸ್ ಠಾಣೆಯ ಎಎಸ್ ಐ ಸುರೇಶ್ ,ಕಾನ್ಸ್ ಟೇಬಲ್ ಗಳಾದ ಪ್ರಶಾಂತ್ ಹಾಗೂ ಸಾದಿಕ್ ಅವರನ್ನ ಸಸ್ಪೆಂಡ್ ಮಾಡಿ ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಅನೂಪ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ.
ಹೈ ಗ್ರೌಂಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಲಂಚ ಪಡೆದ ಆರೋಪ, ಕರ್ತವ್ಯ ಲೋಪ , ಬಾಡಿ ವಾರ್ನ್ ಕ್ಯಾಮೆರಾ ಆಪ್ ಮಾಡಿ ಕೆಲಸ ನಿರ್ವಹಣೆ ಹಾಗೂ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ ಮಾಡಿದ್ದ ಆರೋಪ. ಹೀಗೆ ಹಲವು ಆರೋಪಗಳು ಕೇಳಿಬಂದಿದ್ದವು.
ವಾಹನಗಳನ್ನು ತಡೆದು ಹಣ ವಸೂಲಿ ಮಾಡುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆಯು ಆಂತರಿಕ ತನಿಖೆ ನಡೆಸಿತ್ತು. ತನಿಖೆಯ ವೇಳೆ ಈ ಮೂವರು ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರುವುದು ಮತ್ತು ಲಂಚ ಪಡೆದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಶಿಸ್ತು ಕ್ರಮವಾಗಿ ಮೂವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಅನೂಪ್ ಶೆಟ್ಟಿ ಇಂದು (ಮಾರ್ಚ್ 30) ಆದೇಶಿಸಿದ್ದಾರೆ.
ಬಾಡಿ ಕ್ಯಾಮರಾ ಅಳವಡಿಸಿಕೊಳ್ಳುವುದರಿಂದ ಪೊಲೀಸ್ ಸಿಬ್ಬಂದಿ ಎಸಗುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಸಿಬ್ಬಂದಿ ಕಾರ್ಯವೈಖರಿಯನ್ನು ಸಂಬಂಧಪಟ್ಟ ಠಾಣೆಗಳಿಂದಲೇ ಗಮನಿಸಿ ಮೇಲ್ವಿಚಾರಣೆ ನಡೆಸಬಹುದು. ಇದಲ್ಲದೆ, ಬಾಡಿ ಕ್ಯಾಮರಾ ಧರಿಸುವುದರಿಂದ ಪೊಲೀಸರ ಮೇಲೆ ಹಲ್ಲೆ ನಡೆಸುವವರಿಗೂ ಭಯ ಹುಟ್ಟುವುದರ ಜತೆಗೆ, ಪೊಲೀಸರಿಗೂ ರಕ್ಷಣೆ ಸಿಕ್ಕಂತಾಗುತ್ತದೆ. ಆದ್ದರಿಂದ ಸರ್ಕಾರ ಬಾಡಿ ಕ್ಯಾಮೆರಾ ಖರೀದಿಸಿ ಪೊಲೀಸರಿಗೆ ನೀಡಿ ಕಡ್ಡಾಯವಾಗಿ ಧರಿಸುವಂತೆ ಆದೇಶಿಸಿದೆ.ಆದ್ರೆ, ಕೆಲವರು ಬಾಡಿ ಕ್ಯಾಮೆರಾವನ್ನು ಆಫ್ ಮಾಡಿಕೊಂಡು ಕಳ್ಳಾಟದಲ್ಲಿ ತೊಡಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಕರ್ತವ್ಯ ಲೋಪ, ನಿರ್ಲಕ್ಷ್ಯ, ದುರ್ನಡತೆ, ಸಂತ್ರಸ್ತರಿಂದ ಹಣ ಪಡೆದಿರುವುದು ಸೇರಿದಂತೆ ವಿವಿಧ ಅಪರಾಧವೆಸಗಿದ ಆರೋಪದಡಿ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 666 ಮಂದಿ ಪೊಲೀಸರು ಅಮಾನತುಗೊಂಡಿದ್ದಾರೆ. 2023ರಲ್ಲಿ 188, 2024ರಲ್ಲಿ 242 ಹಾಗೂ 2025ರಲ್ಲಿ 236 ಮಂದಿ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಬೆದರಿಕೆ, ಹಲ್ಲೆ, ಲಂಚ, ಆರೋಪಗಳು ಸೇರಿದಂತೆ ವಿವಿಧ ಅಪರಾಧಗಳಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯ ವಿರುದ್ಧ 88 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ನೀಡಿದ ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ.