ಬೆಂಗಳೂರು: ಕೆ.ಆರ್.ಪುರಂನಲ್ಲಿ ಹಿಟ್ ಆಂಡ್ ರನ್‌ಗೆ (Hit and Run) ಇಬ್ಬರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ಕಾರಣನಾಗಿದ್ದ ಆಲ್ಟೋ ಕಾರು ಚಾಲಕ ಟೆಕ್ಕಿ ವೆಂಕಟ್ ಸಂತೋಷ್ ಅಭಿರಾಮ್ನನ್ನು ಕೆ ಆರ್ ಪುರಂ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ (ಜ.6) ರಂದು ಆಟೋದಲ್ಲಿ ಕೆ.ಆರ್ ಪುರಂ ಮಾರ್ಗವಾಗಿ ಆಟೋ ಚಾಲಕ ಖಾಲೀದ್, ಆತನ ಪತ್ನಿ ತಾಸೀನಾ, ಫಾಝಿಲಾ ಹಾಗೂ ಇಬ್ಬರು ಮಕ್ಕಳು ತೆರಳುತ್ತಿದ್ದರು. ಹಳೇ ಮದ್ರಾಸ್ ರಸ್ತೆಯ ಮೇಡಹಳ್ಳಿ ಸ್ಕೈವಾಕ್ ಬಳಿ ಆಟೋ ಬಂದ ವೇಳೆ, ಅತಿವೇಗದಲ್ಲಿ ಬಂದ ಆಂಧ್ರ ನೋಂದಣಿಯ (AP 39- LX 8153) ಆಲ್ಟೋ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋದಲ್ಲಿದ್ದ ಫಾಝಿಲಾ ಹಾಗೂ ತಸೀನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಎರಡು ವರ್ಷದ ಒಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೂ ವೈಟ್‌ಫೀಲ್ಡ್‌ನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟ್ ಸಂತೋಷ್ ಆಲ್ಟೋ ಕಾರು ಚಾಲನೆ ಮಾಡುತ್ತಿದ್ದನು. ವೆಂಕಟ್ ಆಂಧ್ರಪ್ರದೇಶದ ಗುಂಟೂರು ಮೂಲದವನಾಗಿದ್ದು, ಅಪಘಾತದ ಬಳಿಕ ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಕೆ.ಆರ್.ಪುರಂ ಸಂಚಾರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಅಪಘಾತದ ದೃಶ್ಯಗಳು ಹೊಸಕೋಟೆ ಟೋಲ್‌ನಲ್ಲಿದ್ದ ಸಿಸಿಟಿವಿ ದೃಶ್ಯ ಸೆರೆಯಾಗಿದೆ.
ನಂತರ ಪೊಲೀಸರು ಟೋಲ್ ಅಮೌಂಟ್ ಕಟ್ಟಾಗಿದ್ದ ಫೋನ್ ನಂಬರ್ ಪಡೆದು ಪೊಲೀಸರು ಕ್ರಾಸ್ ಚೆಕ್ ಮಾಡಿದ್ದರು. ಪೊಲೀಸರು ಫೋನ್ ಮಾಡಿದಾಗ ಅಮಾಯಕನಂತೆ ಸಣ್ಣ ಆಕ್ಸಿಡೆಂಟ್ ಆಗೋಯ್ತು ಸರ್ ಅಂದಿದ್ದಾನೆ. ನಂತರ ಪೊಲೀಸರು ಹೊಸಕೋಟೆ ಮನೆಯಲ್ಲಿ ಟೆಕ್ಕಿಯನ್ನು ಬಂಧಿಸಿ, ಕಾರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ನನ್ನ ತಪ್ಪಿಲ್ಲ ಅಂದಿದ್ದಾನೆ. ಸರ್ವೀಸ್ ರಸ್ತೆಯಿಂದ ಆಟೋ ಏಕಾಏಕಿ ಮೇನ್ ರೋಡ್ಗೆ ಬಂತು. ಆಗ ಕಾರು, ಆಟೋಗೆ ಡಿಕ್ಕಿ ಹೊಡೆದಿದೆ ಎಂದಿದ್ದಾನೆ.
ಬಳ್ಳಾರಿ: ಬೈಕ್ಗೆ ಲಾರಿ ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಬಳಿ ನಡೆದಿದೆ. ಹರ್ಷ(27) ಮೃತ ದುರ್ದೈವಿ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:24 pm, Sat, 7 January 23