ಬೆಂಗಳೂರು, ಆಗಸ್ಟ್ 20: ಬೆಂಗಳೂರಿನಲ್ಲಿ ಬೀದಿನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಕಂಗಾಲಾಗಿಬಿಟ್ಟಿದ್ದಾರೆ. ಸದ್ಯ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಒಂದಷ್ಟು ಕಡೆ ಬೀದಿನಾಯಿಗಳ ದಾಳಿಯಿಂದ ಗಾಯಗೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಬೀದಿ ಬೀದಿಗಳಲ್ಲಿ ರಾತ್ರಿ ವೇಳೆ, ಬೆಳಗ್ಗೆ ವೇಳೆ ನಾಯಿಗಳು dಆಳಿ ಮಾಡುತ್ತಿವೆ.
ಬೀದಿನಾಯಿಗಳ ಕಡಿತದಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕಳೆದ 3 ತಿಂಗಳುಗಳಲ್ಲಿ 600 ರಿಂದ 700 ರಷ್ಟು ಮಂದಿ ನಾಯಿ ಕಡಿತಕ್ಕೊಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇತ್ತ ಬೀದಿನಾಯಿಗಳ ಜೊತೆಗೆ ಸಾಕು ನಾಯಿಗಳು, ಬೆಕ್ಕುಗಳ ಕಡಿತ ಕೂಡ ಕೊಂಚ ಏರಿಕೆಯಾಗುತ್ತಿದೆ. ಬೀದಿ ನಾಯಿಗಳ ಕಾಟಕ್ಕೆ ಬ್ರೇಕ್ ಹಾಕಬೇಕಿದ್ದ ಪಾಲಿಕೆ ನಿದ್ದೆಗೆ ಜಾರಿದೆಯಾ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಸದ್ಯ ನಾಯಿ ಕಚ್ಚಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಸದ್ಯ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳ ಅಂಕಿ-ಅಂಶ ನಗರದಲ್ಲಿ ನಾಯಿಗಳ ಕಾಟ ಎಷ್ಟಿದೆ ಎಂಬುದನ್ನು ಅನಾವರಣ ಮಾಡಿದೆ
ಇತ್ತ ಬೀದಿನಾಯಿಗಳ ಕಾಟ ಹೆಚ್ಚಾಗಿರುವ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ, ಈಗಾಗಲೇ ಹಲವೆಡೆ ಬೀದಿನಾಯಿಗಳನ್ನ ಹಿಡಿದು ಹೊರಬಿಡುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
ಬೀದಿನಾಯಿಗಳ ಜೊತೆ ಸಾಕುನಾಯಿಗಳು ಕಚ್ಚುವ ಪ್ರಕರಣ ಕೂಡ ಹೆಚ್ಚಿತ್ತು. ಈಗ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪಾಲಿಕೆಯ ಪಶುಪಾಲನ ಅಧಿಕಾರಿ ಚಂದ್ರಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಿಂದ ಬೆಳಗಾವಿ, ವಿಜಯಪುರಕ್ಕೆ ವಿಶೇಷ ರೈಲುಗಳು: ಇಲ್ಲಿದೆ ವೇಳಾಪಟ್ಟಿ
ಒಟ್ಟಿನಲ್ಲಿ ರಾತ್ರಿ ವೇಳೆ ವಾಹನ ಸವಾರರು, ರಸ್ತೆಯಲ್ಲಿ ಓಡಾಡುವ ಜನರಿಗೆ ಬೀದಿನಾಯಿಗಳ ಕಾಟ ಸಂಕಷ್ಟ ತಂದಿಟ್ಟಿದೆ. ಬೀದಿನಾಯಿಗಳನ್ನು ನಿಯಂತ್ರಣ ಮಾಡುತ್ತಿದ್ದೇವೆ ಎಂದು ಪಾಲಿಕೆ ಹಾಗೂ ಪಶುಪಾಲನಾ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಬೀದಿನಾಯಿಗಳ ಕಾಟ ಹೆಚ್ಚಿರುವ ಕಡೆ ನಿಗಾ ಇಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ