
ಬೆಂಗಳೂರು, (ಜನವರಿ 02): ಬೆಂಗಳೂರಿನ (Bengaluru) ಎಂಜಿ ರಸ್ತೆ ಮತ್ತು ಕಬ್ಬನ್ ರಸ್ತೆಯನ್ನು ಸಂಪರ್ಕಿಸುವ ಕಾಮರಾಜ್ ರಸ್ತೆ (Kamaraj Road) ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಎಂಜಿ ರೋಡ್ ಮೆಟ್ರೋ ಸ್ಟೇಷನ್ ಅಂಡರ್ ಗ್ರೌಂಡ್ ಕಾಮಗಾರಿಗಾಗಿ 2019 ಜೂನ್ 15ರಿಂದ ಕಬ್ಬನ್ ರೋಡ್ ಮತ್ತು ಎಂ.ಜಿ ರೋಡ್ ನಡುವಿನ ಕಾಮರಾಜ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಇದೀಗ ಕಾಮಗಾರಿ ಮುಕ್ತಾಯದ ಹಿನ್ನೆಲೆ ಬರೋಬ್ಬರಿ ಆರು ವರ್ಷಗಳ ನಂತರ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಓಪನ್ ಮಾಡಲಾಗಿದೆ. ಇದರಿಂದ ಕಮರ್ಷಿಯಲ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆ ನಡುವೆ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳಲಿದೆ.
ಕೆಲ ದಿನಗಳಿಂದ ಏಕ ಬಂದಿ ವಾಹನ ಸಂಚಾರಕ್ಕೆ ಅವಕಾಶ ಇದ್ದರೂ, ಎರಡೂ ಬದಿ ಸಂಚಾರಕ್ಕೆ ವಾಹನ ಸವಾರರು ಎದುರು ನೋಡುತ್ತಿದ್ದರು. ಇದೀಗ ಕಾಮರಾಜ ರಸ್ತೆಯ ಕಬ್ಬನ್ ರಸ್ತೆ ಮತ್ತು ಕಾಮಧೇನು ಎಂಪೋರಿಯಂ ಜಂಕ್ಷನ್ (ಎಂಜಿ ರಸ್ತೆ) ನಡುವಿನ ಸಂಪೂರ್ಣ ಭಾಗವನ್ನು ವಾಹನ ಸಂಚಾರಕ್ಕೆ ತೆರೆಯಲಾಗಿದೆ.
ಇದನ್ನೂ ಓದಿ: ಡಂಪಿಂಗ್ ಯಾರ್ಡ್ಗಳಾಗುತ್ತಿರುವ ಬೆಂಗಳೂರು ಮೇಲ್ಸೇತುವೆಗಳು, ಈಜಿಪುರ ಫ್ಲೈಓವರ್ನಲ್ಲಿ ದುರ್ನಾತ
ಈ ರಸ್ತೆಯನ್ನು ಪುನರ್ ನಿರ್ಮಿಸಲು ಸುಮಾರು 3 ಕೋಟಿ ರೂಪಾಯಿ ಖರ್ಚಾಗಿದ್ದು, ಈ ರಸ್ತೆಯನ್ನು ದ್ವಿಮುಖ ಸಂಚಾರಕ್ಕೆ ಮುಕ್ತಗೊಳಿಸುವುದರಿಂದ ಈ ಭಾಗದಲ್ಲಿ ಕೊಂಚ ಟ್ರಾಫಿಕ್ ಜಾಮ್ ಕಡಿಮೆಯಾಗುವ ನಿರೀಕ್ಷೆಯಿದೆ. ಕಮರ್ಷಿಯಲ್ ಸ್ಟ್ರೀಟ್, ಡಿಕನ್ಸನ್ ರಸ್ತೆ ಮತ್ತು ಕಬ್ಬನ್ ರಸ್ತೆಯಿಂದ ಬ್ರಿಗೇಡ್ ರಸ್ತೆ ಮತ್ತು ಎಂಜಿ ರಸ್ತೆ ಕಡೆಗೆ ಬರುವ ಪ್ರಯಾಣಿಕರ ಸಮಯ ಗಣನೀಯವಾಗಿ ಕಡಿಮೆಯಾಗುತ್ತದೆ.
2019ರ ಜೂನ್‌ನಲ್ಲಿ ನಮ್ಮ ಮೆಟ್ರೋದ ಪಿಂಕ್ ಲೈನ್‌ನ ಎಂಜಿ ರಸ್ತೆ ಭೂಗತ ನಿಲ್ದಾಣ ನಿರ್ಮಾಣಕ್ಕಾಗಿ ಈ ರಸ್ತೆಯನ್ನು ಬಂದ್ ಮಾಡಲಾಗಿತ್ತು. 2023ರ ವೇಳೆಗೆ ಪುನಃ ತೆರೆಯುವುದಾಗಿ ಹೇಳಿತ್ತು. ಆದರೆ, ಕೋವಿಡ್ ನಿಂದಾಗಿ ಸುರಂಗ ಮಾರ್ಗ ನಿರ್ಮಾಣ ಮತ್ತು ಇತರ ತಾಂತ್ರಿಕ ಸಮಸ್ಯೆಗಳಿಂದಾಗಿ ಕಾಮಗಾರಿ ನಿಗದಿತ ಸಮಯಕ್ಕೆ ಮುಗಿದಿರಲಿಲ್ಲ. ಬದಲಿಗೆ 2025ರ ಫೆಬ್ರವರಿಯಲ್ಲಿ ರಸ್ತೆಯ ಒಂದು ಭಾಗವನ್ನು ಮಾತ್ರ ತೆರೆದಿತ್ತು. ಕಾಮಧೇನು ಎಂಪೋರಿಯಂ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಸಂಚಾರಕ್ಕೆ ಅವಕಾಶವಿತ್ತು. ಉಳಿದ ಭಾಗವನ್ನು ನಿಲ್ದಾಣದ ಕಾಮಗಾರಿ ಮತ್ತು ಭಾರೀ ಯಂತ್ರೋಪಕರಣಗಳ ಸಂಚಾರಕ್ಕಾಗಿ ಮೀಸಲಿಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.