
ಬೆಂಗಳೂರು, ನವೆಂಬರ್ 25: ಕಂಬಳ ಕರಾವಳಿ ಜಿಲ್ಲೆಗಳ ಜಾನಪದ ಕಲೆ. ತುಳು ಹೆಚ್ಚುವರಿ ರಾಜ್ಯ ಭಾಷೆ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಐತಿಹಾಸಿಕ ಬೆಂಗಳೂರು ಕಂಬಳ (Bengaluru Kambala) ಕ್ಕೆ ಜ್ಯೋತಿ ಬೆಳಗುವ ಮೂಲಕ ಅಧಿಕೃತವಾಗಿ ಚಾಲನೆ ಬಳಿಕ ಮಾತನಾಡಿದ ಅವರು, ಕಂಬಳ ಸಮುದಾಯ ಭವನ ನಿರ್ಮಿಸಲು ಪ್ರಯತ್ನಿಸುತ್ತೇವೆ. ಕಂಬಳ ಕ್ರೀಡೆಯನ್ನು ನಾನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. ಬೆಂಗಳೂರು ನಗರಕ್ಕೆ ಪರಿಚಯಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.
ಕರಾವಳಿಯ ಲಕ್ಷಾಂತರ ಜನರು ಬೆಂಗಳೂರು ನಗರದಲ್ಲಿ ನೆಲೆಸಿದ್ದಾರೆ. ಈ ಹಿಂದೆ ಎರಡು ಬಾರಿ ಕರಾವಳಿಯಲ್ಲಿ ಕಂಬಳ ಉದ್ಘಾಟನೆ ಮಾಡಿದ್ದೆ. ಬೆಂಗಳೂರಿನಲ್ಲಿ ಪ್ರತಿವರ್ಷ ಕಂಬಳ ಮುಂದುವರಿಸುವ ಕೆಲಸ ಮಾಡಿ. ಬೆಂಗಳೂರಿನ ನಿವಾಸಿಗಳಿಗೂ ಇದು ಮನೋರಂಜನೆಯ ಕ್ರೀಡೆ ಆಗುತ್ತೆ. ಕೋರ್ಟ್ನಲ್ಲಿ ಕಂಬಳಕ್ಕೆ ತಡೆ ಬಂದಾಗ ನಾನೇ ಸುಗ್ರಿವಾಜ್ಞೆ ಹೊರಡಿಸಿದ್ದೆ. ಇದು ಸಾಮಾನ್ಯ ಜನರ ಕ್ರೀಡೆ ಎಂದು ಉಳಿಸುವ ಕೆಲಸ ಮಾಡಿದೆ ಎಂದರು.
ಇದನ್ನೂ ಓದಿ: Bengaluru Kambala: ಬೆಂಗಳೂರು ಕಂಬಳದಲ್ಲಿ ಅಂಕದ ಕೋಳಿಗಳ ಲಕ್ಕಿ ಡ್ರಾ, ಯಾರಿಗುಂಟು.. ಯಾರಿಗಿಲ್ಲ..
ಕೋಣ ಸಾಕುವುದು ಬಹಳ ಕಷ್ಟದ ಕೆಲಸ. ಒಂದು ಕೋಣ ಸಾಕಲು ವಾರ್ಷಿಕವಾಗಿ 15 ಲಕ್ಷ ರೂ. ಬೇಕು. ಇದು ಶ್ರೀಮಂತರ ಕ್ರೀಡೆ ಆಗುತ್ತೆ ಅಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಶ್ರೀಮಂತರು ಕೋಣ ಸಾಕಬಹುದು ಬಡವರು ಪಾಪ ಹೇಗೆ ಸಾಕುತ್ತಾರೆ. ಹಿಂದೆ ಗದ್ದೆಗಳಲ್ಲಿ ಕಂಬಳ ನಡೆಯುತಿತ್ತು. ಹದ ಮಾಡಿದ ಮಣ್ಣಿನ ನೀರಿನಲ್ಲಿ ಕೋಣ ಒಡಿಸುತ್ತಿದ್ದರು. ಕ್ರೀಡಾಪಟು ಆಗಿದ್ದರೆ ಮಾತ್ರ ಕೋಣಗಳ ಜೊತೆ ಓಡಲು ಸಾಧ್ಯ ಎಂದರು ಹೇಳಿದ್ದಾರೆ.
ತುಳು ಭಾಷೆಯಲ್ಲಿಯೇ ಮಾತು ಆರಂಭಿಸಿದ ಸ್ಪೀಕರ್ ಯು.ಟಿ.ಖಾದರ್, ಕಂಬಳ ಮತ್ತು ಯಕ್ಷಗಾನ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಣ್ಣುಗಳು. ಮಂಗಳೂರಲ್ಲಿದ್ದೇನಾ ಅಥವಾ ಬೆಂಗಳೂರಲ್ಲಿದ್ದೇನಾ ಎಂಬ ಸಂಶಯ ಬಂತು. ತುಳು ಭಾಷೆ ರಾಜ್ಯದ ಹೆಚ್ಚುವರಿ ಭಾಷೆಯಾಗಿ ಸೇರ್ಪಡೆ ಮಾಡಬೇಕು. ಈ ಕುರಿತಾಗಿ ವೇದಿಕೆ ಮೇಲೆ ಸಿಎಂಗೆ ಮನವರಿಕೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಂಬಳ ಆಯೋಜಕರಿಗೆ ಬಿಬಿಎಂಪಿ ಶಾಕ್; ಬ್ಯಾನರ್, ಫ್ಲೆಕ್ಸ್ ಹಾಕಿದ್ದಕ್ಕೆ ದಂಡ
ಕಂಬಳ ಆಯೋಜನೆಯಲ್ಲಿ ಸಂಘಟಕರ ಶ್ರಮ ಬಹಳ ದೊಡ್ಡದು. ಐತಿಹಾಸಿಕ ಕಂಬಳ ಪರಸ್ಪರ ಎಲ್ಲರನ್ನೂ ಒಟ್ಟುಗೂಡಿಸಿದೆ. ಪ್ರತಿವರ್ಷ ಬೆಂಗಳೂರು ಕಂಬಳ ನಡೆಯುವಂತಾಗಲಿ. ಕಂಬಳ ಎಲ್ಲಾ ಜಾತಿ ಜನರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತೆ. ಕೋಣಗಳನ್ನ ತರುವ ವ್ಯವಸ್ಥೆ, ಕರೆ ಮಾಡುವ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಕರ್ನಾಟಕ ಜನರಿಗೆ ಕಂಬಳ ಮುಟ್ಟುವಂತೆ ಆಗಲಿ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.