ಬೆಂಗಳೂರು: ವಿಶ್ವವಿಖ್ಯಾತ ಐತಿಹಾಸಿಕ ಬೆಂಗಳೂರು ಕರಗ (Bengaluru Karaga 2023) ಚಾಲನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಇಂದು (ಮಾ. 29) ರಾತ್ರಿ 10 ಗಂಟೆಗೆ ಅದ್ದೂರಿ ರಥೋತ್ಸವ ಮತ್ತು ಮುಂಜಾನೆ 3 ಗಂಟೆಗೆ ಧ್ವಜರೋಹಣ ಮೂಲಕ ಕರಗಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಇಂದಿನಿಂದ ಏಪ್ರಿಲ್ 6ರವರೆಗೆ ಕರಗ ಮಹೋತ್ಸವ ನಡೆಯಲಿದೆ. 11 ದಿನ ಕಾಲ ವಿವಿಧ ಧಾರ್ಮಿಕ ಕೈಂಕಾರ್ಯಗಳು ನಡೆಯಲಿದ್ದು, ಈ ಬಾರಿ ಪೂಜಾರಿ ಜ್ಞಾನೇಂದ್ರ ಅವರು ಕರಗವನ್ನ ಹೊರಲಿದ್ದಾರೆ. ಏಪ್ರಿಲ್ 6 ರಂದು ರಾತ್ರಿ ಕರಗ ಮೆರವಣಿಗೆ ಆರಂಭಗೊಳ್ಳಲಿದ್ದು, ರಾತ್ರಿ 12.30ಕ್ಕೆ ಹೊರಡಲಿರುವ ದ್ರೌಪದಮ್ಮನ ಕರಗ ಕುಂಬಾರಪೇಟೆ, ನಗರ್ತಪೇಟೆ, ಗೊಲ್ಲರಪೇಟೆಗಳಲ್ಲಿ ಸಂಚಾರಿಸಲಿದೆ. ಸಂಪ್ರದಾಯದಂತೆ ಮಸ್ತಾನ್ ಸಾಬ್ ದರ್ಗಾಕ್ಕೆ ಕೂಡ ಕರಗ ಭೇಟಿ ನೀಡಲಿದೆ. ಏಪ್ರಿಲ್ 7 ಬೆಳಗ್ಗೆ ಧರ್ಮರಾಯಸ್ವಾಮಿ ದೇವಾಲಯ ತಲುಪಲಿದೆ. ಏಪ್ರಿಲ್ 8ರ ಸಂಜೆ 4 ಗಂಟೆಗೆ ವಸಂತೋತ್ಸವ ಹಾಗೂ ರಾತ್ರಿ 12ಕ್ಕೆ ಧ್ವಜರೋಹಣ ಮೂಲಕ 2023 ರ ಕರಗಕ್ಕೆ ತೆರೆ ಬೀಳಲಿದೆ.
ಬೆಂಗಳೂರಲ್ಲಿ ಕರಗ ಆಚರಣೆ ಕುರಿತು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿ, ಈ ಬಾರಿಯೂ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಕರಗ ನೆರವೇರಲಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಆಹ್ವಾನಿತ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಲು ಮಾತ್ರ ಅವಕಾಶ ಕಲ್ಪಿಸಲಾಗುವುದು. ಗಣ್ಯವ್ಯಕ್ತಿಗಳಿಗೂ ಸಾಮಾನ್ಯ ಜನರಂತೆ ದರ್ಶನ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Ram Navami Festival Recipes: ರಾಮನವಮಿಗೆ ವಿಶೇಷ ಖಾದ್ಯಗಳನ್ನು ತಯಾರಿಸಿ, ಇಲ್ಲಿದೆ ಪಾಕ ವಿಧಾನ
ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಏಕತೆಯನ್ನು ಸಂಕೇತಿಸುವ ಬೆಂಗಳೂರು ಕರಗವನ್ನು ಪುರಾತನದಿಂದ ಆಚರಿಸಲಾಗುತ್ತಿದೆ. ಏಪ್ರಿಲ್ 6ರಂದು ನಡೆಯುವ ಉತ್ಸವದಲ್ಲಿ ಭಾಗವಹಿಸಲು ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ದೇವಸ್ಥಾನದ ಅಧಿಕಾರಿಗಳು ಆಹ್ವಾನಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Ram Navami 2023: ಭಾರತದ ಪ್ರಸಿದ್ಧ ಶ್ರೀರಾಮನ ದೇವಾಲಯಗಳು ಎಲ್ಲೆಲ್ಲಿವೆ ಗೊತ್ತಾ?
ಬೆಂಗಳೂರು ಕರಗವನ್ನು ಸಾಂಪ್ರದಾಯಿಕವಾಗಿ ತಮಿಳು ಮಾತನಾಡುವ ತಿಗಳರ ಹಬ್ಬ ಎಂದು ಕರೆಯುತ್ತಾರೆ. ಇವರು ಪ್ರಾರಂಭಿಸಿ-ಉಳಿಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಕರಗ ಎಂಬುದು ಹೂವಿನಿಂದ ಅಲಂಕರಿಸಲ್ಪಟ್ಟ ಮಣ್ಣಿನ ಮಡಕೆ ಆಗಿದೆ. ಇದನ್ನು ಸಾಮಾನ್ಯವಾಗಿ ಮಹಿಳೆಯಂತೆ ಧರಿಸಿರುವ ತಿಗಳರ ಪುರುಷರು ತಲೆ ಮೇಲೆ ಹೊತ್ತುಕೊಳ್ಳುತ್ತಾರೆ. ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದು ದ್ರೌಪದಿ ಆದಿ ಶಕ್ತಿ ರೂಪದಲ್ಲಿ ಹಿಂದಿರುಗುತ್ತಾಳೆ ಎಂಬ ನಂಬಿಕೆ ಈ ಸಮುದಾಯದವರಲ್ಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:11 pm, Wed, 29 March 23