ಬೆಂಗಳೂರು, ಏಪ್ರಿಲ್ 15: ಐತಿಹಾಸಿಕ ಬೆಂಗಳೂರು ಕರಗ (Bengaluru Karaga) ಉತ್ಸವ ಸೋಮವಾರ ಬೆಳಗ್ಗಿನಿಂದಲೇ ಆರಂಭವಾಗಿದೆ. ಇಂದಿನಿಂದ ಏಪ್ರಿಲ್ 23 ರ ವರೆಗೆ ಬೆಂಗಳೂರು ಕರಗ ಮಹೋತ್ಸವ (Karaga Festival) ನಡೆಯಲಿದ್ದು, ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. 13 ಬಾರಿ ಕರಗ ಹೊತ್ತಿರುವ ಪೂಜಾರಿ ಎ. ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ. ಕರಗ ಉತ್ಸವದ ಸಂದರ್ಭದ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ.
ಈ ವರ್ಷ ಸುಮಾರು 3000 ವೀರ ಕುಮಾರರು ಕರಗದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಂಪಂಗಿ ಕೆರೆ ಅಂಗಳದಲ್ಲಿ ಏಪ್ರಿಲ್ 21ರಂದು ಹಸಿ ಕರಗ ನಡೆಯಲಿದೆ.
ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದ ಕಳೆದ ಕೆಲವು ವರ್ಷಗಳಿಂದ ಕರಗ ಸಾಧಾರಣವಾಗಿ ಆಚರಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ಉತ್ಸವ ಜರಗುವ ನಿರೀಕ್ಷೆ ಇದೆ.
ಪುರಾಣ ಕಥೆಗಳು ಮತ್ತು ನಂಬಿಕೆಯ ಪ್ರಕಾರ, ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ವೇಳೆ ದ್ರೌಪದಿ ಮೂರ್ಛೆ ಬೀಳುತ್ತಾಳೆ. ಆದರೆ ಇದು ಪಾಂಡವರ ಅರಿವಿಗೆ ಬರುವುದಿಲ್ಲ. ಅವರು ತಿಳಿಯದೆ ಮುಂದೆ ನಡೆಯುತ್ತಾರೆ. ಸ್ವಲ್ಪ ಸಮಯದ ನಂತರ ಎಚ್ಚರ ಆದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿರುವುದು ದೌಪದಿಯ ಕಣ್ಣಿಗೆ ಬೀಳುತ್ತದೆ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗೌಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಟಿ ಮಾಡುತ್ತಾಳೆ. ಆಗ ದ್ರೌಪದಿ ಸೃಷ್ಟಿ ಮಾಡಿದ ಈ ಕಿರು ಸೇನೆ ರಕ್ಕಸನ ವಿರುದ್ಧ ಹೋರಾಡಿ ಗೆಲ್ಲುತ್ತದೆ. ನಂತರ ದ್ರೌಪದಿ ಆದಿಶಕ್ತಿಯಾಗಿ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗಿ ನೆಲೆಸಲು ನಿರ್ಧರಿಸುತ್ತಾಳೆ. ಇದರ ನೆನಪಿಗಾಗಿ ಕರಗ ಆಚರಿಸಲಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ