Bengaluru Karaga: ಬೆಂಗಳೂರು ಕರಗ ಮೆರವಣಿಗೆಯಲ್ಲಿ ಸಾಗುತ್ತಾ ತಪ್ಪದೆ ದರ್ಗಾಗೆ ಹೋಗುವುದೇಕೆ ಗೊತ್ತಾ!? ಮಿಸ್ ಮಾಡದೆ ವಿಡಿಯೋ ನೋಡಿ

ಆ ಘಟನೆಯ ನಂತರ, ಕರಗ ಹೊರುವವರು ಪ್ರತಿ ವರ್ಷ ತಪ್ಪದೇ ದರ್ಗಾಗೆ ಬಂದು ಹೋಗುವುದಾಗಿ ಆಣೆ ಮಾಡುತ್ತಾರೆ. ಇದು ಕರಗವು ದರ್ಗಾಗೆ ಬರಲು ಕಾರಣ ಎಂದು ಅಕ್ಕಿಪೇಟೆ ರಸ್ತೆಯ ತವಕ್ಕಲ್‌ ಮಸ್ತಾನ್‌ ದರ್ಗಾದ ಮುಜಾವರ್ ಇಂತಿಯಾಜ್ ಅಹ್ಮದ್ ಅವರು ವಿವರಿಸಿದ್ದಾರೆ. ಭಕ್ತಿ ಪ್ರಧಾನ ಕಹಾನಿ ಇಲ್ಲಿದೆ ಓದಿ.

Bengaluru Karaga: ಬೆಂಗಳೂರು ಕರಗ ಮೆರವಣಿಗೆಯಲ್ಲಿ ಸಾಗುತ್ತಾ ತಪ್ಪದೆ ದರ್ಗಾಗೆ ಹೋಗುವುದೇಕೆ ಗೊತ್ತಾ!? ಮಿಸ್ ಮಾಡದೆ ವಿಡಿಯೋ ನೋಡಿ
ದರ್ಗಾಗೆ ಭೇಟಿ ನೀಡಿದ ಬೆಂಗಳೂರು ಕರಗ
Follow us
ಆಯೇಷಾ ಬಾನು
|

Updated on:Apr 27, 2024 | 4:33 PM

ಕತ್ತಲ ರಾತ್ರಿ, ಪೂರ್ಣಿಮೆ ಬೆಳಕಲ್ಲಿ ಮುತ್ತೈದೆ ಉಡುಪು ಧರಿಸಿ ತಾಯಿ ದ್ರೌಪದಿಯ ಪ್ರತಿರೂಪದಂತೆ ತೋರುವ ಪೂಜಾರಿ. ಆತನ ಸುತ್ತ ಸಾವಿರಾರು ವೀರಗಾರರು ಕೈಯಲ್ಲಿ ಕತ್ತಿ ಹಿಡಿದು ಗೋವಿಂದ ಗೋವಿಂದ ಎಂಬ ಕೂಗು. ಬೀದಿ ಬೀದಿಯಲ್ಲಿ ರಾಜಕಳೆ. ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಮೇಳ. ಹೂವಿನ ಕರಗ ಹೊತ್ತ ಪೂಜಾರಿ ಮುಸ್ಲಿಂ ಸಂತನ ಸಮಾಧಿಗೆ ಭೇಟಿ ನೀಡಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರುವ ಈ ಆಚರಣೆ ಬಗ್ಗೆ ನಿಮಗೆ ತಿಳಿದಿರಬಹುದು. ಮಹಾಭಾರತದ ಸಮಯದ ಹುಟ್ಟಿಕೊಂಡ ಈ ಆಚರಣೆಯೇ ಬೆಂಗಳೂರು ಕರಗ.

ಕರ್ನಾಟಕದಲ್ಲಿ ಕರಗ ಉತ್ಸವವನ್ನು ನಾನಾ ರೀತಿಯಲ್ಲಿ ಆಚರಿಸಲಾಗುತ್ತೆ. ಆದರೆ ಬೆಂಗಳೂರು ಕರಗ ಎಲ್ಲದಕ್ಕಿಂತ ದೊಡ್ಡದು. ಹಾಗೂ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ವಿಶ್ವವಿಖ್ಯಾತ ಜಾನಪದ ಆಚರಣೆ. ಇಲ್ಲಿ ಆದಿಶಕ್ತಿ ಶ್ರೀ ದ್ರೌಪದಿಯನ್ನು, ವಹ್ನಿಕುಲ ಕ್ಷತ್ರಿಯ ಜನಾಂಗದವರು ಕುಲದೇವತೆಯಾಗಿ ಆರಾಧಿಸುತ್ತಾರೆ. ಬೆಂಗಳೂರಿನ ತಿಗಳರಪೇಟೆಯಲ್ಲಿ ವಹ್ನಿಕುಲ ಅಥವಾ ತಿಗಳ ಸಮುದಾಯದವರು ಕರಗ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇವರ ನಂಬಿಕೆಗಳ ಪ್ರಕಾರ ದ್ರೌಪದಿ ಮತ್ತು ಪಾಂಡವರಲ್ಲಿ ಹಿರಿಯನಾದ ಧರ್ಮರಾಯನಿಗೆ ಮೀಸಲಿಟ್ಟು ಇಲ್ಲಿ ಸುಮಾರು 800 ವರ್ಷಗಳ ಹಿಂದೆ ದೇವಾಲಯ ನಿರ್ಮಿಸಿ ಪೂಜಿಸಿಕೊಂಡು ಬರಲಾಗುತ್ತಿದೆ. ಹಾಗೂ ಅಂದಾಜು 5 ಶತಮಾನಗಳಿಂದ ತಿಗಳರು ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಕರಗ ಉತ್ಸವವನ್ನು ಆಚರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಪ್ರತೀ ವರ್ಷ ಯುಗಾದಿ ಹಬ್ಬದ ನಂತರ ಕರಗ ಉತ್ಸವಕ್ಕೆ ಚಾಲನೆ ಸಿಗುತ್ತೆ. ದ್ವಾದಶಿಯಂದು ಆರತಿ ಸೇವೆ ಮತ್ತು ದೀಪೋತ್ಸವ ನಡೆಯುತ್ತೆ. ಮತ್ತು ತ್ರಯೋದಶಿಯಂದು ಹಸಿಕರಗ. ಪೂರ್ಣಿಮೆಯಂದು ಕರಗದ ಉತ್ಸವ ನಡೆಯುತ್ತೆ. ಬೆಂಗಳೂರಿನ ತಿಗಳರ ಪೇಟೆಯಲ್ಲಿರುವ ದ್ರೌಪದಿ ಹಾಗೂ ಧರ್ಮರಾಯ ಸ್ವಾಮಿ ದೇಗುಲದಲ್ಲಿ ಕರಗ ಉತ್ಸವಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಕಾರ್ಯಗಳು ನಡೆಯುತ್ತದೆ. ಕರಗ ಹಬ್ಬದ ಆಚರಣೆಯು ಹಿಂದೂ ವರ್ಷದ ಮೊದಲ ತಿಂಗಳ ಸಪ್ತಮಿಯಿಂದ ಆರಂಭವಾಗಿ ಸುಮಾರು 11 ದಿನಗಳ ಕಾಲ ನಡೆಯುತ್ತದೆ. ಈ 11 ದಿನಗಳಲ್ಲಿ 3 ದಿನಗಳ ಕಾಲ ತಾಯಿ ದ್ರೌಪದಿ ತಮ್ಮೊಡನೆ ಇರುತ್ತಾಳೆಂದು ತಿಗಳರ ನಂಬಿಕೆ. ಈ ವೇಳೆ ಅವರು ಕಳಸ ಹೊತ್ತು ನೃತ್ಯ ಮಾಡುತ್ತಾ ದೇವರಿಗೆ ಹರಕೆಯನ್ನು ಒಪ್ಪಿಸುತ್ತಾರೆ. ನಂಬಿಕೆಯ ಪ್ರಕಾರ, ಇವರು ತಲೆಯ ಮೇಲೆ ಹೊತ್ತಿರುವ ಕರಗ ಎನ್ನುವ ಕಲಶ ಅಪ್ಪಿ ತಪ್ಪಿಯೂ ನೆಲಕ್ಕೆ ಬೀಳುವಂತಿಲ್ಲ.

ಆಚರಣೆಯ ಗುಟ್ಟು ಬಹಿರಂಗವಾದ್ರೆ ಸಮುದಾಯಕ್ಕೆ ಕೆಡಕು

ಇನ್ನು ಈ ಕರಗ ಉತ್ಸವದ ಆಚರಣೆ ಕೆಲ ಪೂಜೆ, ನಿಯಮಗಳ ಗುಟ್ಟುಗಳು ಅರ್ಚಕರನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿದಿರುವುದಿಲ್ಲ. ಪೂಜಾ ವಿಧಾನಗಳನ್ನು ಬಹಿರಂಗಪಡಿಸಿದರೆ ತಿಗಳ ಸಮುದಾಯಕ್ಕೆ ಶ್ರೇಯಸ್ಸು ಅಲ್ಲ ಎಂಬ ಪ್ರತೀತಿ ಇದೆ. ಈ ಸಂಪ್ರದಾಯ ಮತ್ತು ಪೂಜೆಯನ್ನು ಬೆಂಗಳೂರು ಮೂಲದ ತಿಗಳರೇ ನಡೆಸುವುದು ವಾಡಿಕೆ. ಇವರ ಮೂಲಪುರುಷ ರಾಜ ವೀರವಹ್ನಿ ಬೆಂಕಿಯಿಂದ ಜನಿಸಿದ ಎಂಬ ನಂಬಿಕೆ ಇದೆ. ಹೀಗಾಗಿ ಅಗ್ನಿಯ ಅಧಿದೇವತೆಯಾದ ದ್ರೌಪದಿಯನ್ನು ಸ್ಮರಿಸಿ ಕರಗ ಉತ್ಸವವನ್ನು ಮಾಡಲಾಗುತ್ತೆ.

ಯಾರು ಈ ತಿಗಳರು?

ತಿಗಳ ಅಥವಾ ತಿಗುಳ ಎಂದರೆ ಕನ್ನಡದಲ್ಲಿ ತಮಿಳು ಎಂದರ್ಥ. ಇವರು ಮೂಲತಃ ತಮಿಳುನಾಡಿನಿಂದ ಕರ್ನಾಟಕಕ್ಕೆ ವಲಸೆ ಬಂದವರು. ಇವರು ತಮ್ಮನ್ನು ವಹ್ನಿಕುಲ ಕ್ಷತ್ರಿಯರು ಎಂದು ಕರೆದುಕೊಳ್ಳುತ್ತಾರ. ತಮಿಳು ಮತ್ತು ಕನ್ನಡ ಮಿಶ್ರಿತ ತಿಗುಳ ಅಥವಾ ತಿಗಳಾರಿ ಭಾಷೆ ಮಾತನಾಡುತ್ತಾರೆ. ತಿಗಳರು ಕನ್ನಡ ನೆಲದ ಗಂಗರ ವಂಶದವರು ಎನ್ನಲಾಗುತ್ತೆ. ಮಹಾಭಾರತದ ಭೀಷ್ಮನ ವಂಶಜರು ಎಂದೂ ಸಹ ಹೇಳಲಾಗುತ್ತೆ. ಅಲ್ಲದೆ ಚೋಳರ ಸೈನ್ಯದಲ್ಲಿದ್ದ ಕ್ಷತ್ರಿಯರೇ ಈ ತಿಗಳರು ಎಂಬ ಚರ್ಚೆಗಳೂ ಇವೆ.

ತಿಗಳರು ಬೆಂಗಳೂರಿಗೆ ಬಂದದ್ದು ಹೇಗೆ?

ಹೈದರಾಲಿ ಬೆಂಗಳೂರಿನಲ್ಲಿ ಸುಂದರ ತೋಟ ನಿರ್ಮಿಸುವ ಕನಸು ಕಂಡಿದ್ದ. ಹೀಗೆ ನೆರೆಯ ತಮಿಳುನಾಡಿಗೆ ದಾಳಿ ಮಾಡಿದಾಗ ಅಲ್ಲಿ ತಿಗಳ ಸಮುದಾಯದವರು ನಿರ್ಮಿಸಿದ್ದ ತೋಟಗಳನ್ನು ಕಂಡು ಆಕರ್ಷಿತನಾದ. ಬೆಂಗಳೂರಿನಲ್ಲಿಯೂ ಇದೇ ರೀತಿ ತೋಟ ನಿರ್ಮಿಸಲು ತಮಿಳುನಾಡಿನಿಂದ ಬೆಂಗಳೂರಿಗೆ ತಿಗಳರನ್ನು ಕರೆಸಿಕೊಂಡ ಎಂಬ ಬಗ್ಗೆ ಇತಿಹಾಸದಲ್ಲಿ ಉಲ್ಲೇಖಗಳಿವೆ.

ಕರಗ ಎಂಬ ಪದದ ಅರ್ಥವೇನು?

‘ಕರಗ’ ಎಂಬುವುದು ಹೂವಿನ ದಿಂಡು ಮತ್ತು ದೇವಿಯ ವಿಗ್ರಹವನ್ನು ಹೊಂದಿರುವ ಕಲಶದ ಅನುರೂಪ. ಕರಗ ದಲ್ಲಿ ಕ ಎಂದರೆ ಕೈಯಿಂದ ಮುಟ್ಟದ, ರ ಎಂದರೆ ರುಂಡದ ಮೇಲೆ ಧರಿಸುವ, ಗ ಎಂದರೆ ತಿರುಗುವುದು ಎಂಬರ್ಥವನ್ನು ಹೊಂದಿದೆ. ಕರಗವನ್ನು ಮುಟ್ಟದೆ ಅಂದರೆ ಹೂವಿನ ದಿಂಡಿನಿಂದ ಅಲಂಕೃತಗೊಂಡ ಮಣ್ಣಿನ ಮಡಿಕೆ ಅದರಲ್ಲಿರುವ ಕಲಶವನ್ನು ಕೈಯಲ್ಲಿ ಮುಟ್ಟದೆ ಆ ಕಲಶವನ್ನು ಹೊರುವ ವ್ಯಕ್ತಿಯ ತಲೆ ಮೇಲೆ ಇಡಲಾಗುತ್ತದೆ. ಕರಗವನ್ನು ಹೊರುವವರು ಮುತ್ತೈದೆಯಂತೆ ಕಂಕಣ, ಮಾಂಗಲ್ಯ ಮತ್ತು ಹಣೆಯ ಮೇಲೆ ಸಿಂಧೂರವನ್ನು ಇಟ್ಟುಕೊಂಡಿರುತ್ತಾರೆ. ಕರಗವು ಪಾಂಡವರ ಪತ್ನಿ ದ್ರೌಪದಿಯನ್ನು ಸರ್ವೋತ್ಕೃಷ್ಟ ಮಹಿಳೆ ಎಂದು ಚಿತ್ರಿಸುತ್ತದೆ ಮತ್ತು ಅವಳನ್ನು ಶಕ್ತಿ ದೇವತೆ ಎಂದು ಗೌರವಿಸುತ್ತದೆ.

Bengaluru Karaga Festival Complete history know all about it why karaga visit darga and who is thigalaru

ಕರಗದ ಇತಿಹಾಸ

ದಂತಕಥೆಗಳ ಪ್ರಕಾರ, ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ವೇಳೆ ದ್ರೌಪದಿ ಮೂರ್ಛೆ ಬೀಳುತ್ತಾರೆ. ಆದರೆ ಇದು ಪಾಂಡವರ ಅರಿವಿಗೆ ಬರುವುದಿಲ್ಲ. ತಿಳಿಯದೆ ಮುಂದೆ ನಡೆಯುತ್ತಾರೆ. ಸ್ವಲ್ಪ ಸಮಯದ ನಂತರ ಎಚ್ಚರ ಆದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿರುವುದು ದೌಪದಿಯ ಕಣ್ಣಿಗೆ ಬೀಳುತ್ತೆ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗೌಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಠಿ ಮಾಡುತ್ತಾಳೆ. ಆಗ ದ್ರೌಪದಿ ಸೃಷ್ಠಿ ಮಾಡಿದ ಈ ಕಿರು ಸೇನೆ ರಕ್ಕಸನ ವಿರುದ್ಧ ಹೋರಾಡಿ ಗೆಲ್ಲುತ್ತೆ. ನಂತರ ದ್ರೌಪದಿ ಆದಿಶಕ್ತಿಯಾಗಿ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗಿ ನೆಲೆಸಲು ನಿರ್ಧರಿಸುತ್ತಾಳೆ.

ತಾಯಿಯ ಅಗಲುವಿಕೆಯನ್ನು ನೆನೆದು ಆಕೆಯನ್ನು ಹೋಗದಂತೆ ದೌಪದಿಯ (ಸೇನೆ) ಮಕ್ಕಳು ಬೇಡಿಕೊಳ್ಳುತ್ತಾರೆ. ಆಗ ಶ್ರೀಕೃಷ್ಣನು ಮಕ್ಕಳಿಗೆ ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (‘ಅಲಗುಸೇವೆ’) ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು ಎಂದು ತಮ್ಮ ನೋವನ್ನು ತೋಡಿಕೊಳ್ಳಲು ಹೇಳುತ್ತಾನೆ. ಇದನ್ನು ನೋಡಿದ ದ್ರೌಪದಿಗೆ ತೀವ್ರ ದುಃಖವಾಗಿ ಪ್ರತಿವರ್ಷ ಮೂರು ದಿನ ಭೂಮಿಗೆ ಬಂದು ಮಕ್ಕಳೊಂದಿಗೆ ಇರುವುದಾಗಿ ಭರವಸೆಯನ್ನು ನೀಡುತ್ತಾಳೆ. ಆ ಮೂರು ದಿನಗಳನ್ನೇ ಕರಗ ಎಂದು ಆಚರಿಸಲಾಗುತ್ತದೆ. ಹುಣ್ಣಿಮೆಗೆ 9 ದಿನ ಇರುವಾಗಲೇ ಧಾರ್ಮಿಕ ಆಚರಣೆಗಳು ಶುರುವಾಗುತ್ತವೆ. ಮೊದಲು ಧರ್ಮರಾಯ ದೇವಸ್ಥಾನದ ಮುಂದೆ ದ್ವಜಾರೋಹಣ, ದೀಪಾರತಿ ಉತ್ಸವ, ಹಸಿ ಕರಗ, ಪೊಂಗಲು ಸೇವೆ, ಹೂವಿನ ಕರಗ, ವಸಂತೋತ್ಸವ, ಗಾವುಸೇವೆ ನಡೆಯುತ್ತೆ.

ಹಸಿ ಕರಗ ಆಚರಣೆ

ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ಸಂಪಂಗಿ ಕೆರೆಯ ಬಳಿ ಚೈತ್ರಶುದ್ಧ ತ್ರಯೋದಶಿಯಂದು ಕರಗ ಹೊರುವ ಪೂಜಾರಿ, ಅರ್ಚಕರ ವಂಶಸ್ಥರು ಮತ್ತು ವೀರಕುಮಾರರು ಮಧ್ಯರಾತ್ರಿ ಸೇರುತ್ತಾರೆ. ಬಳಿಕ ಅಲ್ಲಿ ಸ್ಥಳವನ್ನು ಸ್ವಚ್ಚಗೊಳಿಸಿ ಕೆಂಪು ಕೊಡೆಯನ್ನು ನಿರ್ಮಿಸುತ್ತಾರೆ. ಈ ಪೂಜೆಯ 7 ದಿನಗಳ ಹಿಂದಿನಿಂದ ಉಪವಾಸವಿದ್ದ ವೀರಕುಮಾರರು ತಮ್ಮ ಚೂಪಾದ ಕತ್ತಿಗಳನ್ನು ಸಿದ್ದಪಡಿಸಿ ಇಟ್ಟುಕೊಳ್ಳುತ್ತಾರೆ. ಕರಗ ದೇವತೆಯ ಹೆಸರಿನಲ್ಲಿ ವೀರಕುಮಾರರು ದೀಕ್ಷೆ ಪಡೆದುಕೊಂಡಿರುತ್ತಾರೆ. ಈ ವೀರಕುಮಾರರೇ ಕರಗದ ಅಂಗರಕ್ಷರು. ಇವರು ತಮ್ಮ ಕತ್ತಿಗಳಿಂದ ಎದೆಗೆ ಹೊಡೆದುಕೊಳ್ಳುತ್ತಾರೆ. ಎದೆ ಮೇಲೆ ಗಾಯಗಳಾದರೆ ದೇವತೆಯ ಭಂಡಾರವನ್ನು ಹಚ್ಚಿಕೊಳ್ಳುತ್ತಾರೆ. ನೂರಾರು ವೀರಕುಮಾರರು ಸೊಂಟದ ಸುತ್ತ ಕೆಂಪು ಪಟ್ಟಿಯನ್ನು ಕಟ್ಟಿಕೊಂಡು ಎದೆಯ ಸುತ್ತ ಬಿಳಿ ವಸ್ತ್ರ ಮತ್ತು ತಲೆಗೆ ಪೇಟವನ್ನು ಸುತ್ತಿಕೊಳ್ಳುತ್ತಾರೆ.

ನಡುರಾತ್ರಿ ಹಸಿಕರಗವನ್ನು ಸಿದ್ದಪಡಿಸಲಾಗುತ್ತೆ. ಗೋಪುರದ ಆಕಾರದಲ್ಲಿ ಕರಗವನ್ನು ಕೆಂಪು ವಸ್ತ್ರದಿಂದ ಅಲಂಕರಿಸಿ ಸೇವಂತಿಗೆ ಹೂಗಳಿಂದ ಸಿಂಗರಿಸಿ ಅರಿಶಿಣ ಕುಂಕುಮವನ್ನು ಹಚ್ಚಲಾಗುತ್ತೆ. ಜೊತೆಗೆ ಕರಗದ ಪೂಜಾರಿಯನ್ನೂ ಸಹ ಸೇವಂತಿಗೆ ಹೂಗಳಿಂದ ಸಿಂಗರಿಸಲಾಗುತ್ತೆ. ನಂತರ ಮಹಾಮಂಗಳಾರತಿ ನೆರವೇರುತ್ತೆ. ಬಳಿಕ ವೀರಕುಮಾರರು ಗೋವಿಂದಾ ಗೋವಿಂದಾ ಎಂದು ನಾಮ ಸ್ಮರಣೆ ಮಾಡುತ್ತ ಅಲಗುಸೇವೆಯನ್ನು ಅರ್ಪಿಸುತ್ತಾರೆ. ರಾತ್ರಿಯಿಡೀ ಮೆರವಣಿಗೆ ನಡೆದು ಬೆಳಗ್ಗೆ 6 ಗಂಟೆ ಒಳಗೆ ದೇವಸ್ಥಾನ ತಲುಪುತ್ತಾರೆ.

Bengaluru Karaga Festival Complete history know all about it why karaga visit darga and who is thigalaru ಹೂವಿನ ಕರಗ

ಇನ್ನು ಹೂವಿನ ಕರಗ ಆಚರಣೆಯು ಹುಣ್ಣಿಮೆಯಂದು ನಡೆಯುತ್ತೆ. ಅಂದು ಸಂಜೆ ಪೂಜಾರಿ ಹೆಣ್ಣಿನಂತೆ ಸೀರೆಯುಟ್ಟು, ಮಾಂಗಲ್ಯ ಧರಿಸಿ, ಕೈಗಳಿಗೆ ಬಳೆ ತೊಟ್ಟು, ಅರಿಶಿಣ, ಕುಂಕುಮವನಿಟ್ಟುಕೊಳ್ಳುತ್ತಾರೆ. ರಾತ್ರಿ ಸಂಪಂಗಿ ಕೆರೆಯ ಬಳಿ ಎಲ್ಲರೂ ಸೇರುತ್ತಾರೆ. ಪೂಜಾರಿಯು ಅಚ್ಚಮಲ್ಲಿಗೆ, ಜಡೆಕುಚ್ಚು, ಹೂವಿನ ಹಾರ ಹರಿಶಿನ ಬಣ್ಣದ ಸೀರೆಯುಟ್ಟು ಒಡವೆಗಳನ್ನು ಧರಿಸಿ ಮಧುಮಗಳಂತೆ ಸಿದ್ದವಾಗುತ್ತಾರೆ. ವೀರಕುಮಾರರಿಂದ ಪೂಜೆಯಾದ ನಂತರ ಕರಗ ಹೊರುವ ಪೂಜಾರಿಯ ಮುಖದಲ್ಲಿ ಆದಿಶಕ್ತಿ ಅವಾಹನಳಾಗುತ್ತಾಳೆ. ಗಂಟೆಯ ಸದ್ದಿನೊಂದಿಗೆ ಗರ್ಭಗುಡಿ ಪ್ರವೇಶಿಸಲಾಗುತ್ತೆ. ಕರಗವನ್ನು ಮಲ್ಲಿಗೆ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಿದ ನಂತರ ಮೆರವಣಿಗೆ ಆರಂಭವಾಗುತ್ತದೆ. ಮುಂದೆ ಮಹಾ ರಥ ಸಾಗುತ್ತದೆ. ಇದನ್ನು ಕೃಷ್ಣ ನಡೆಸುತ್ತಾನೆ ಎಂದು ಭಾವಿಸಲಾಗುತ್ತೆ. ಇನ್ನು ಈ ರಥದ ಮೇಲೆ ನಾಲ್ಕು ಯುಗಗಳನ್ನು ಸಂಕೇತಿಸುವ ಧ್ವಜಗಳನ್ನು ಹಾಕಲಾಗುತ್ತೆ. ರಥ ಸ್ವಲ್ಪ ದೂರ ಸಾಗಿದ ನಂತರ ವಾಪಾಸ್ ದೇವಸ್ಥಾನದ ಬಳಿ ಬಂದು ನಿಲ್ಲುತ್ತೆ. ಆದರೆ ಕರಗ ಬೆಂಗಳೂರಿನ ಅನೇಕ ಕಡೆಗಳಲ್ಲಿ ಸಾಗಿ ಬರುತ್ತೆ. ಸುಮಾರು 10-15 ಕಿ,ಮೀ ವರೆಗೂ ಸುತ್ತಿ ಮುಂಜಾನೆ 6 ಗಂಟೆಯೊಳಗೆ ಕರಗ ದೇವಸ್ಥಾನಕ್ಕೆ ಬಂದು ಸೇರುತ್ತೆ. ಈ ಕರಗ ಮೆರವಣಿಗೆಯಲ್ಲಿ ದೇಶ-ವಿದೇಶದಿಂದ ಆಗಮಿಸಿದ ಲಕ್ಷಾಂತರ ಮಂದಿ ಭಾಗಿಯಾಗುತ್ತಾರೆ. ಜಾತಿ-ಧರ್ಮದ ಗೊಡವೆಯಿಲ್ಲದೆ ಎಲ್ಲಾ ಧರ್ಮದ ಜನರು ಸೇರುತ್ತಾರೆ.

Bengaluru Karaga Festival Complete history know all about it why karaga visit darga and who is thigalaru

ದರ್ಗಾಗೆ ಭೇಟಿ ನೀಡಿ ಭಾವೈಕ್ಯತೆ ಸಾರುವ ಕರಗ ಆಚರಣೆ

ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಅರಳೆಪೇಟೆಯ ಮಸ್ತಾನ್ ಸಾಹೇಬ ದರ್ಗಾದಲ್ಲಿಯೂ ಕರಗಕ್ಕೆ ಪೂಜೆ ಸಲ್ಲಿಸಲಾಗುತ್ತೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಕರಗವು ಸೂರ್ಯೋದಯಕ್ಕೂ ಮುನ್ನ ಅಂದರೆ ಬೆಳಗ್ಗೆ 6 ಗಂಟೆಯೊಳಗೆ ದೇವಸ್ಥಾನವನ್ನು ಸೇರಬೇಕು. ನಂತರ ಮರು ದಿನ ವಿಶೇಷ ಪೂಜೆಗಳು ನೆರವೇರುತ್ತವೆ.

Bengaluru Karaga Festival Complete history know all about it why karaga visit darga and who is thigalaru

ಕರಗ ದರ್ಗಾಗೆ ಹೋಗುವುದೇಕೆ?

ನೂರಾರು ವರ್ಷಗಳ ಹಿಂದೆ ಕರಗ ಮೆರವಣಿಗೆ ವೇಳೆ ದರ್ಗಾ ಬಳಿ ಮುಸ್ಲಿಂ ವ್ಯಕ್ತಿಯೋರ್ವ ಅಡ್ಡ ಬಂದಿದ್ದು ವೀರಕುಮಾರರ ಕತ್ತಿ ಆತನಿಗೆ ತಾಕುತ್ತೆ. ಇದರಿಂದ ಆತನಿಗೆ ರಕ್ತ ಬರುತ್ತೆ. ಆಗ ಗಂಧ ಹಚ್ಚಿ ಆರೈಕೆ ಮಾಡಲಾಗುತ್ತೆ. ಆಗ ಆತ ನಮಗೆ ದರ್ಗಾಗೆ ಬಂದು ಹೋಗಲು ವಿನಂತಿ ಮಾಡಿಕೊಳ್ಳುತ್ತಾನೆ. ಈ ರೀತಿ ಸೌಹಾರ್ದತೆಯ ಸಂಕೇತವಾಗಿ ಈ ಪದ್ಧತಿ ನಡೆದುಕೊಂಡು ಬಂದಿದೆ ಎಂದು ಧರ್ಮರಾಯ ದೇವಸ್ಥಾನದ ಕಮಿಟಿ ಸದಸ್ಯರಾದ ಶ್ರೀಧರ್ ಅವರು ಟಿವಿ9 ಪ್ರೀಮಿಯಂ ನ್ಯೂಸ್ ಆ್ಯಪ್​ಗೆ ತಿಳಿಸಿದ್ದಾರೆ.

ಇನ್ನು ಅಕ್ಕಿಪೇಟೆ ರಸ್ತೆಯ ತವಕ್ಕಲ್‌ ಮಸ್ತಾನ್‌ ದರ್ಗಾದ ಮುಜಾವರ್ ಇಂತಿಯಾಜ್ ಅಹ್ಮದ್ ಅವರು ಬೆಂಗಳೂರು ಕರಗ ದರ್ಗಾಗೆ ಭೇಟಿ ನೀಡುವುದರ ಹಿಂದಿರುವ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

18ನೇ ಶತಮಾನದ ಮಧ್ಯದಲ್ಲಿ ಬೆಂಗಳೂರು ಹೈದರಾಲಿಯ ಆಡಳಿತದಲ್ಲಿತ್ತು. ಈ ವೇಳೆ ಹಝರತ್ ತವಕ್ಕಲ್ ಮಸ್ತಾನ್ ಅವರು ಕೆ.ಆರ್​. ಮಾರ್ಕೆಟ್​ನಲ್ಲಿರುವ ಹೈದರಾಲಿಯ ಕೋಟೆಯೊಂದರ ಮರು ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದರು. ಆದರೆ ಮಸ್ತಾನ್ ಬಾಬಾ ಅವರು ಈ ಕಾರ್ಯಕ್ಕೆ ಸಂಬಳ ಪಡೆಯದೆ ನಿರಾಕರಿಸಿದ್ದರು. ಈ ವಿಷಯ ಹೈದರಾಲಿಗೆ ತಿಳಿಯುತ್ತೆ. ಆಗ ಹೈದರಾಲಿ ಯಾರು ಈ ವ್ಯಕ್ತಿ, ಕಷ್ಟಪಟ್ಟು ಕೆಲಸ ಮಾಡಿಯೂ ಸಂಬಳವನ್ನು ನಿರಾಕರಿಸುತ್ತಿರೋದು ಏಕೆ? ಪತ್ತೆ ಹಚ್ಚಿ ಎಂದು ಕಿಲ್ಲೆದಾರನಿಗೆ ಆದೇಶಿಸುತ್ತಾರೆ.

ಮಸ್ತಾನ್ ಬಾಬಾ ಕೋಟೆ ನಿರ್ಮಾಣ ಕಾರ್ಯ ಮುಗಿಸಿದ ಬಳಿಕ ಹಣ್ಣೊಂದನ್ನು ತೆಗೆದುಕೊಂಡು ತಾವಿರುವಲ್ಲಿಗೆ ಹೋಗುತ್ತಿದ್ದರು. ಏಕೆಂದರೆ ಮಸ್ತಾನ್ ಬಾಬಾ ಪ್ರತಿ ದಿನ ಉಪವಾಸವಿರುತ್ತಿದ್ದರು. ಕೆಲಸ ಮುಗಿದ ಬಳಿಕ ಹಣ್ಣನ್ನು ಸೇವಿಸಿ ಉಪವಾಸ ನಿಲ್ಲಿಸುತ್ತಿದ್ದರು. ಮತ್ತೆ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಅದೇ ರೀತಿ ಆ ದಿನವೂ ಹಣ್ಣನ್ನು ತೆಗೆದುಕೊಂಡು ತಾವು ಇರುವಲ್ಲಿಗೆ ಹೋಗುವಾಗ ಹೈದರಾಲಿಯ ಕಿಲ್ಲೆದಾರರು ಮಸ್ತಾನ್ ಬಾಬಾ ಅವರನ್ನು ಹಿಂಬಾಲಿಸುತ್ತಾರೆ. ಆಗ ಮಸ್ತಾನ್ ಬಾಬಾ ಹಣ್ಣು ತಿಂದು ಉಪವಾಸ ಮುರಿದು ನಮಾಜ್ ಮಾಡಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಆಗ ಮಸ್ತಾನ್ ಬಾಬಾರ ದೇಹ ಮೂರು ಭಾಗಗಳಾಗಿ ಛಿದ್ರವಾಗುತ್ತೆ. ಇದನ್ನು ಬಾಬಾ ಅವರ ಸಾಕು ನಾಯಿಗಳು ಗಮನಿಸುತ್ತಿದ್ದವು. ಇದನ್ನು ಕಂಡ ಹೈದರಾಲಿ ಸೈನಿಕರು ವಿಚಾರವನ್ನು ಮುಟ್ಟಿಸುತ್ತಾರೆ. ಆದರೆ ಮರು ದಿನ ಬೆಳಗ್ಗೆ ಮಸ್ತಾನ್ ಬಾಬಾ ಎಂದಿನಂತೆ ಕೆಲಸಕ್ಕೆ ಹಾಜರಾಗುತ್ತಿದ್ದರು.

ಇದರಿಂದ ಅಚ್ಚರಿಗೊಳಗಾದ ಹೈದರಾಲಿ ಮಸ್ತಾನ್ ಬಾಬಾ ಅವರನ್ನು ಕರೆದು ಕೇಳುತ್ತಾರೆ. ಆಗ ಮಸ್ತಾನ್ ಬಾಬಾ, ನಾನು ದೇವರ ಅನುಯಾಯಿ ಎಂದು ಹೇಳುತ್ತಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಪ್ರತಿಯೊಬ್ಬರೂ ಮಸ್ತಾನ್ ಬಾಬಾ ಅವರನ್ನು ಪರೀಕ್ಷೆಗೊಡ್ಡಲು, ಅವರನ್ನು ಸತತವಾಗಿ ಸತಾಯಿಸಲು ಶುರು ಮಾಡುತ್ತಾರೆ. ಆಗ ಮಸ್ತಾನ್ ಬಾಬಾ ಓಡಿ ಹೋಗಿ ಧರ್ಮರಾಯ ದೇವಸ್ಥಾನದಲ್ಲಿ ಅವಿತುಕೊಳ್ಳುತ್ತಾರೆ. ಈ ವೇಳೆ ಧರ್ಮರಾಯ ಪ್ರತ್ಯಕ್ಷನಾಗಿ ನೀವೊಬ್ಬ ಪವಾಡ ಪುರುಷ. ಹೀಗಾಗಿ ನನಗೊಂದು ಸಹಾಯ ಮಾಡಬೇಕು. ಪ್ರತಿ ವರ್ಷ ದ್ರೌಪದಿಯ ಕರಗ ಮಹೋತ್ಸವ ನಡೆಯುತ್ತೆ. ಕರಗ ಹೊತ್ತು ಊರೆಲ್ಲ ಮೆರವಣಿಗೆ ನಡೆಯುತ್ತೆ. ಈ ವೇಳೆ ಕರಗ ಬಿದ್ದರೆ ಕರಗ ಹೊತ್ತವನನ್ನು ವೀರಕುಮಾರರು ಕತ್ತರಿಸಿ ಹಾಕುತ್ತಾರೆ. ಪವಾಡ ಪುರುಷರಾದ ನೀವು ತಲೆಯ ಮೇಲೆ ಹೊತ್ತ ಕರಗವು ಬೀಳದಂತೆ ಪ್ರಾರ್ಥನೆ ಮಾಡಿ ಎಂದು ಧರ್ಮರಾಯ ಹೇಳುತ್ತಾನೆ. ಅದರಂತೆ ಕರಗ ಏಳು ದೇವಸ್ಥಾನಗಳನ್ನು ಸುತ್ತಿ ಬಂದು ದೇವಸ್ಥಾನಕ್ಕೆ ಪ್ರವೇಶಿಸುತ್ತದೆ. ಆಗ ಮಸ್ತಾನ್ ಬಾಬಾ ಬಳಿ ಬಂದು ನೀವು ಪ್ರಾರ್ಥಿಸಿದಂತೆ ನಾವು ಯಾವುದೇ ತೊಂದರೆ ಇಲ್ಲದೆ ಕರಗವನ್ನೂ ಬೀಳಿಸದೆ ಸುರಕ್ಷಿತವಾಗಿ ಹಿಂದಿರುಗಿದ್ದೇವೆ ಎಂದು ಹೇಳಿ ಪ್ರತಿ ವರ್ಷ, ನೀವು ಇರುವವರೆಗೂ ನಾವು ನಿಮ್ಮ ದರ್ಗಾಗೆ ಬಂದು ಪ್ರಾರ್ಥಿಸುತ್ತೇವೆ ಎಂದು ಹೇಳುತ್ತಾರೆ.

ಇದೆಲ್ಲ ಆದ ಬಳಿಕ ಮಸ್ತಾನ್ ಬಾಬಾ ಅಮರರಾದರು. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅಕ್ಕಿ ಪೇಟೆಯಲ್ಲಿ ದರ್ಗಾ ಕಟ್ಟಿಸಿದರು. ದರ್ಗಾದಲ್ಲೇ ಮಸ್ತಾನ್ ಬಾಬಾ ದೇಹ ತ್ಯಾಗ ಮಾಡಿದರು. ನಂತರ ಕರಗ ಹೋರುವವರಲ್ಲಿ ನಾವೇಕೆ ಮುಸ್ಲಿಮರ ದರ್ಗಾಗೆ ಹೋಗಬೇಕು ಎಂಬ ಅಪಸ್ವರ ಕೇಳಿ ಬಂತು. ಹೀಗಾಗಿ ಕರಗ ಹೊತ್ತವರು ಕರಗ ಮೆರವಣಿಗೆ ವೇಳೆ ದರ್ಗಾಗೆ ಬರದೆ ಸಂಪಂಗಿ ಕೆರೆ ಬಳಿ ತೆರಳಿದರು. ಈ ವೇಳೆ ಹೂವಿನ ಕರಗ ಗಾಳಿಯಲ್ಲಿ ಹಾರಿ ಬಂದು ದರ್ಗಾದ ಮೇಲೆ ಕುಳಿತುಕೊಂಡಿತು. ಆಗ ಕರಗ ಹೊರುವವರು ಬಂದು ದೇವರಲ್ಲಿ ಕ್ಷಮೆ ಕೇಳುತ್ತಾರೆ. ಮತ್ತೆ ಈ ತಪ್ಪು ಮಾಡುವುದಿಲ್ಲ ಎಂದು ಬೇಡಿಕೊಳ್ಳುತ್ತಾರೆ. ಪ್ರತಿ ವರ್ಷ ತಪ್ಪದೇ ದರ್ಗಾಗೆ ಬಂದು ಹೋಗುವುದಾಗಿ ಆಣೆ ಮಾಡುತ್ತಾರೆ. ಇದು ಕರಗವು ದರ್ಗಾಗೆ ಬರಲು ಕಾರಣ ಎಂದು ಅಕ್ಕಿಪೇಟೆ ರಸ್ತೆಯ ತವಕ್ಕಲ್‌ ಮಸ್ತಾನ್‌ ದರ್ಗಾದ ಮುಜಾವರ್ ಇಂತಿಯಾಜ್ ಅಹ್ಮದ್ ಅವರು ಟಿವಿ9 ಪ್ರೀಮಿಯಮ್ ನ್ಯೂಸ್ ಆ್ಯಪ್ ಪ್ರತಿನಿಧಿ ಆಯೇಷಾ ಬಾನು ಜೊತೆ ಮಾತನಾಡುತ್ತಾ ವಿವರಿಸಿದ್ದಾರೆ.

ಪೂಜಾರಿ ತನ್ನ ಮನೆಗೆ ಹಿಂತಿರುಗಿ ಪತ್ನಿಗೆ ತಾಳಿ ಕಟ್ಟುತ್ತಾನೆ

ಕರಗ ಉತ್ಸವದ ಕೊನೆಯ ದಿನ ತಿಗಳ ಸಮುದಾಯ ವಸಂತೋತ್ಸವದಲ್ಲಿ ಭಾಗಿಯಾಗುತ್ತೆ. ಈ ದಿನ ಪುರುಷರಿಗೆ ತೆಂಗಿನಕಾಯಿ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ತೆಂಗಿನಕಾಯಿಯನ್ನು ಒಡೆಯುವಾಗ ಅವರ ಮೇಲೆ ಅರಿಶಿನ ನೀರನ್ನು ಚೆಲ್ಲಲಾಗುತ್ತದೆ. ದೇವಸ್ಥಾನದಲ್ಲಿ ಹಾರಿಸಿದ ಬಾವುಟವನ್ನು ಇಳಿಸಿದಾಗ ಕರಗ ಉತ್ಸವ ಮುಕ್ತಾಯಗೊಳ್ಳುತ್ತೆ. ಇನ್ನು ಕರಗದ ಪೂಜಾರಿ ಕರಗ ಆಚರಣೆ ಆರಂಭವಾಗುತ್ತಿದ್ದಂತೆ ತನ್ನ ಹೆಂಡತಿಯ ತಾಳಿ ಬಿಚ್ಚಿಡುತ್ತಾನೆ. ಕರಗ ಮುಗಿಯುತ್ತಿದ್ದಂತೆ ತನ್ನ ಮನೆಗೆ ಹಿಂತಿರುಗಿ ತನ್ನ ಪತ್ನಿಗೆ ಮತ್ತೆ ತಾಳಿ ಕಟ್ಟುತ್ತಾನೆ ಎಂಬ ವದಂತಿ ಇತ್ತು. ಆದರೆ ಅದು ಸುಳ್ಳು ಎಂದು ಧರ್ಮರಾಯ ದೇವಸ್ಥಾನದ ಕಮಿಟಿ ಸದಸ್ಯರಾದ ಶ್ರೀಧರ್ ಅವರು ತಿಳಿಸಿದ್ದಾರೆ.

ನಾವು ಚಂದ್ರವಂಶಸ್ಥರಾದ ಕಾರಣ ಕರಗದ ಮೆರವಣಿಗೆ ರಾತ್ರಿ ವೇಳೆ ನಡೆಯುತ್ತೆ. ಕರಗ ಶುರುವಾಗುತ್ತಿದ್ದಂತೆ ಪ್ರತಿ ದಿನವೂ ದೇವರಿಗೆ ವಿಶೇಷ ಪೂಜೆ ಇರುತ್ತೆ. ತಾಯಿಯ ಪೂಜೆ ನಂತರವೇ ತಿಂಡಿ ಸೇವಿಸಬೇಕು. ಕರಗ ಹೊರುವ ಪೂಜಾರಿಯು 6 ತಿಂಗಳ ಹಿಂದಿನಿಂದಲೇ ತಮ್ಮಲ್ಲಿದ್ದ ಕೆಟ್ಟ ಚಟಗಳನ್ನೆಲ್ಲ ಬಿಟ್ಟು ಮಡಿ ಮೈಲಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಾರೆ. ಕರಗದ ಸಮಯದಲ್ಲಿ 9-11 ದಿನಗಳ ಕಾಲ ದೇವಸ್ಥಾನದಲ್ಲೇ ಉಳಿದುಕೊಳ್ಳುತ್ತಾರೆ. ಅಲ್ಲಿ ಅವರೇ ಅಡುಗೆ ಮಾಡಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾರೆ ಎಂದು ಶ್ರೀಧರ್ ಅವರು ಟಿವಿ9 ಪ್ರೀಮಿಯಂ ನ್ಯೂಸ್ ಆ್ಯಪ್​ಗೆ ತಿಳಿಸಿದ್ದಾರೆ.

Published On - 4:24 pm, Wed, 10 April 24

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ