ಚೈತ್ರ ಪೂರ್ಣಿಮೆ ಬೆಳದಿಂಗಳ ಬೆಳಕಲ್ಲಿ ಕರಗ ಮೆರವಣಿಗೆಗೆ ಸಜ್ಜಾದ ತಿಗಳರ ಪೇಟೆ, 5 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ
ಇಂದು ಧರ್ಮರಾಯಸ್ವಾಮಿ ದೇವಸ್ಥಾನದಿಂದ ಐತಿಹಾಸಿಕ ಬೆಂಗಳೂರು ಕರಗದ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ತಿಗಳರ ಪೇಟೆ, ಕಾರ್ಪೊರೇಷನ್ ಸರ್ಕಲ್ ಬಳಿ ಭರ್ಜರಿ ಸಿದ್ಧತೆ ನಡೆದಿದೆ.
ಬೆಂಗಳೂರು: ಇಂದು ಬೆಂಗಳೂರು ನಗರದಲ್ಲಿ ಭಾವೈಕ್ಯತೆ ಪ್ರತೀಕ, ಐತಿಹಾಸಿಕ ಕರಗ ಶಕ್ತ್ಯೋತ್ಸವ ನಡೆಯಲಿದೆ(Bengaluru Karaga 2023). ಹೂವಿನ ಕರಗದ ಜೊತೆಗೆ ಧರ್ಮರಾಯಸ್ವಾಮಿ(Dharmaraya Swamy Temple) ಮಹಾರಥೋತ್ಸವ ನಡೆಯಲಿದೆ. ಚೈತ್ರ ಪೂರ್ಣಿಮೆ ಬೆಳದಿಂಗಳ ಬೆಳಕಲ್ಲಿ ಮಧ್ಯರಾತ್ರಿ 12.30ಕ್ಕೆ ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಇದಕ್ಕಾಗಿ ದೇವಸ್ಥಾನದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಕರಗ ಉತ್ಸವವನ್ನು ವೀಕ್ಷಿಸಲು ಈ ಬಾರಿ 5 ಲಕ್ಷಕ್ಕೂ ಹೆಚ್ಚು ಜನರು ಬರುವ ಸಾಧ್ಯತೆ ಇದೆ. ಹೀಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಕರಗ ಉತ್ಸವಕ್ಕೆ ಪೊಲೀಸ್ ಭದ್ರತೆ, ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಸಿಸಿ ಕ್ಯಾಮರಾಗಳ ಅಳವಡಿಸಲಾಗಿದೆ. ಕರಗ ಹೊರಡುವ ಮಾರ್ಗದ ರಸ್ತೆ, ಪಾದಚಾರಿ ಮಾರ್ಗ ದುರಸ್ಥಿ ಕಾರ್ಯ ನಡೆದಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಇ-ಶೌಚಾಲಯಗಳ ವ್ಯವಸ್ಥೆ ಮಡಲಾಗಿದೆ. ಜಲಮಂಡಳಿ ವತಿಯಿಂದ ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಸಂಚಾರ ದಟ್ಟಣೆಯಾಗದಂತೆ ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಪಡಿಸಲಾಗಿದೆ. ಕರಗದ ದಾರಿಯಲ್ಲಿ ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ತೆರಳಲಿದ್ದು, ಅಲ್ಲಿ ಧೂಪಾರತಿ ಸ್ವೀಕರಿಸಲಿದೆ. ರಾತ್ರಿ 12.30ಕ್ಕೆ ಕರಗ ಉತ್ಸವ ದ್ರೌಪದಿ ತಾಯಿಯ ಮೆರವಣಿಗೆ ನಡೆಯಲಿದ್ದು ಪೂಜಾರಿ ಎ.ಜ್ಞಾನೇಂದ್ರ 12ನೇ ಬಾರಿ ಕರಗ ಹೊರುತ್ತಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಕರಗ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ; ಇಂದಿನಿಂದ 11 ದಿನ ಸಂಭ್ರಮ
ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಪೂರ್ಣಿಮೆ ಬೆಳದಿಂಗಳ ಬೆಳಕಲ್ಲಿ ಅಂದ್ರೆ ಗುರುವಾರ ಮಧ್ಯರಾತ್ರಿ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಲಿದೆ. ಇದಕ್ಕೂ ಮುನ್ನ ಗುರುವಾರ ಬೆಳಗ್ಗೆ ದ್ರೌಪದಿ ದೇವಿಗೆ ಅರಿಶಿನ ಬಣ್ಣದ ಸೀರೆ ಉಡುಸಿ, ಬಳೆಗಳನ್ನು ತೊಡಿಸಿ ಕರಗ ಹೊತ್ತ ಅರ್ಚಕರು ಗಂಗಾಪೂಜೆ ಸಲ್ಲಿಸುತ್ತಾರೆ. ಅಲ್ಲಿಂದ ಹಸಿ ಕರಗವನ್ನು ಮಂಟಪಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಲಾಗುವುದು. ಶುಕ್ರವಾರ ಮಧ್ಯರಾತ್ರಿ 12.30ಕ್ಕೆ ಕರಗ ಮೆರವಣಿಗೆಗಾಗಿ ದೇವಸ್ಥಾನದಿಂದ ಹೊರ ಬರುತ್ತೆ. ಕರಗ ಮೆರವಣಿಗೆಯೂ ಸುಮಾರು 38 ಕಿ.ಮೀ ಒಳಗೊಂಡಿದೆ.
ಉತ್ಸವ ರೂಟ್ ಮ್ಯಾಪ್
ರಾತ್ರಿ 12.30ಕ್ಕೆ ಕರಗ ಉತ್ಸವ ದ್ರೌಪದಿ ತಾಯಿಯ ಮೆರವಣಿಗೆ ಆರಂಭವಾಗಲಿದ್ದು ಧರ್ಮರಾಯ ದೇಗುಲ ಪ್ರದಕ್ಷಿಣೆ ಹಾಕಿದ ಬಳಿಕ ಕುಂಬಾರಪೇಟ್ ರೋಡ್, ರಾಜ ಮಾರ್ಕೆಟ್ ಸರ್ಕಲ್-ಸಿಟಿ ಮಾರ್ಕೆಟ್ ಸರ್ಕಲ್, ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ಮೆರವಣಿಗೆ ಹೋಗಲಾಗುತ್ತೆ. ಸಿಟಿ ಮಾರ್ಕೆಟ್ ಸರ್ಕಲ್-ಪೊಲೀಸ್ ರೋಡ್ ಕಡೆಯಿಂದ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ ಬಳೇಪೇಟೆ ಸರ್ಕಲ್ ಮೂಲಕ ಅಣ್ಣಮ್ಮ ದೇವಿಯ ದೇವಸ್ಥಾನದಿಂದ ಕಬ್ಬನ್ ಪೇಟೆ ಮುಖ್ಯ ರಸ್ತೆ ಮೂಲಕ ಶ್ರೀಧರ್ಮರಾಯ ಸ್ವಾಮಿ ದೇಗುಲ ಪ್ರವೇಶಿಸಲಿದೆ.
ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:04 pm, Thu, 6 April 23