ಗಣೇಶ ಹಬ್ಬದ ಬಳಿಕ ಮತ್ತಷ್ಟು ಕಲುಷಿತಗೊಂಡ ಬೆಂಗಳೂರು ಕೆರೆಗಳು, ಪರಿಸರ ಪ್ರೇಮಿಗಳ ಆಕ್ರೋಶ

| Updated By: ಆಯೇಷಾ ಬಾನು

Updated on: Nov 24, 2023 | 2:32 PM

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮೂವತ್ತಕ್ಕೂ ಹೆಚ್ಚು ಕೆರೆಗಳ ನೀರಿನ ಪ್ರಯೋಗ ನಡೆಸಿದ್ದು, ಕೆರೆಯಲ್ಲಿ ಗಣನೀಯವಾಗಿ ಕೆಮಿಕಲ್ ಸೇರಿ ನೀರಿನಲ್ಲಿ ಅಪಾಯಕಾರಿ ಅಂಶಗಳು ಪತ್ತೆಯಾಗಿವೆ. ನಿಷೇಧ ಹೇರಿದ್ದರೂ ನಗರದ ಬಹುತೇಕ ಕಡೆಗಳಲ್ಲಿ ಪ್ಲಾಸ್ಟರ್ ಆಪ್ ಪ್ಯಾರೀಸ್ ಗಣೇಶ್ ಮೂರ್ತಿಗಳನ್ನ ಕೆರೆಗಳಲ್ಲಿ ವಿಸರ್ಜನೆ ಮಾಡಲಾಗಿದೆ. ಈ ಪರಿಣಾಮ ಕೆರೆಗಳು ಕಲುಷಿತಗೊಂಡಿದ್ದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗಣೇಶ ಹಬ್ಬದ ಬಳಿಕ ಮತ್ತಷ್ಟು ಕಲುಷಿತಗೊಂಡ ಬೆಂಗಳೂರು ಕೆರೆಗಳು, ಪರಿಸರ ಪ್ರೇಮಿಗಳ ಆಕ್ರೋಶ
ಗಣೇಶ ಹಬ್ಬದ ಬಳಿಕ ಮತ್ತಷ್ಟು ಕಲುಷಿತಗೊಂಡ ಬೆಂಗಳೂರು ಕೆರೆಗಳು
Follow us on

ಬೆಂಗಳೂರು, ನ.24: ಸುಪ್ರೀಂ ಕೋರ್ಟ್ ಆದೇಶದಂತೆ ಗಣೇಶ ಹಬ್ಬಕ್ಕೆ (Ganesha Festival)  ಪರಿಸರ ಸ್ನೇಹಿಯಾಗಿ ಹಬ್ಬ ಆಚರಣೆ ಮಾಡಲು ಬಿಬಿಎಂಪಿ (BBMP) ಸಾರ್ವಜನಿಕರಿಗೆ ಸಲಹೆ ನೀಡಿ ಪಾಲಿಕೆ ವ್ಯಾಪ್ತಿಯಲ್ಲಿ ರಾಸಾಯನಿಕ ಬಣ್ಣಗಳು, ಥರ್ಮಕೊಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿ ತಯಾರಿಕೆಗೆ ನಿಷೇಧ ಹೇರಿತ್ತು. ಆದರೆ ನಗರದ ಬಹುತೇಕ ಕಡೆಗಳಲ್ಲಿ ಪ್ಲಾಸ್ಟರ್ ಆಪ್ ಪ್ಯಾರೀಸ್ ಗಣೇಶ್ ಮೂರ್ತಿಗಳನ್ನ ಆಡಳಿತ ಮಂಡಳಿಯವರು ಕೂಡಿಸಿ ಗಣೇಶ ವಿಸರ್ಜನೆಗೆ ಪಾಲಿಕೆ ಗುರುತಿಸಿದ ಕೆರೆಗಳಲ್ಲಿ (Bengaluru Lakes) ಕೆಮಿಕಲ್‌ಯುಕ್ತ ಪ್ಲಾಸ್ಟರ್ ಗಣೇಶ ವಿಸರ್ಜನೆ ಮಾಡಿದ ಪರಿಣಾಮ ಕೆರೆಗಳು ಕಲುಷಿತಗೊಂಡಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿ ವರ್ಷದಂತೆ ಈ ವರ್ಷ ಗಣೇಶೋತ್ಸವ ಸಂಭ್ರಮ ಸಡಗರದಿಂದ ಆಚರಣೆ ಮಾಡಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆಗೆ ಬೆಂಗಳೂರು ನಗರದ ಕೆರೆಯಲ್ಲಿ ಬಿಬಿಎಂಪಿ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೇ ಸುಪ್ರೀಂ ಕೋರ್ಟ್ ಕೆಮಿಕಲ್ ಯುಕ್ತ ಗಣೇಶ ಮೂರ್ತಿ ಮಾರಾಟ ಹಾಗೂ ಕೆರೆಯಲ್ಲಿ ವಿಸರ್ಜನೆಗೊಳಿಸದಂತೆ ಆದೇಶ ನೀಡಿತ್ತು. ಆದರೆ ಈ ಬಗ್ಗೆ ಬಿಬಿಎಂಪಿ ನಿರ್ಲಕ್ಷದಿಂದ ಕೆಮಿಕಲ್ ಯುಕ್ತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶಗಳು ವಿಸರ್ಜನೆ ಮಾಡಲಾಗಿದೆ. ಹೀಗಾಗಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮೂವತ್ತಕ್ಕೂ ಹೆಚ್ಚು ಕೆರೆಗಳ ನೀರಿನ ಪ್ರಯೋಗ ನಡೆಸಿದ್ದು, ಕೆರೆಯಲ್ಲಿ ಗಣನೀಯವಾಗಿ ಕೆಮಿಕಲ್ ಸೇರಿ ನೀರಿನಲ್ಲಿ ಅಪಾಯಕಾರಿ ಅಂಶಗಳು ಪತ್ತೆಯಾಗಿವೆ.

ಇದನ್ನೂ ಓದಿ: ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ, ಇದರ ವಿಶೇಷತೆಗಳೇನು?

ಇನ್ನೂ ನಗರದಲ್ಲಿ ಆಡಳಿತ ಮಂಡಳಿಯವರು ಹಾಗೂ ಮನೆಯಲ್ಲಿ ಕೂಡಿಸಿದ ಗಣೇಶ ಮೂರ್ತಿ ವಿಸರ್ಜನೆಗೆ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರೆ ಪ್ರಮುಖ ಕೆರೆ,ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದ್ದಾರೆ. ಈ ಪರಿಣಾಮ ಸತು, ಸೀಸ ಮತ್ತು ತಾಮ್ರದಂತಹ ಭಾರೀ ಲೋಹಗಳಿಂದಾಗಿ‌ ನೀರಿನಲ್ಲಿ ಗಡಸುತನ ಹೆಚ್ಚಾಗಿದೆ. ಈ ಮೊದಲೆ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಇದ್ರು ಕೆಮಿಕಲ್ ಯುಕ್ತ ಗಣೇಶ ವಿಸರ್ಜನೆಗೆ ಅವಕಾಶ ನೀಡಿದೆ. ಇದಕ್ಕೆ ಬಿಬಿಎಂಪಿಯೇ ನೇರ ಹೊಣೆ ಅಂತ ಬಿಬಿಎಂಪಿ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಕೆಮಿಕಲ್‌ಯುಕ್ತ ಗಣೇಶ ಮೂರ್ತಿಗಳು ಕೆರೆ ಸೇರಿದ್ದರಿಂದಾಗಿ ಪರಿಸರದ ಮೇಲೆ‌ ಅಡ್ಡ ಪರಿಣಾಮವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಕೆಮಿಕಲ್ ಯುಕ್ತ ಬಣ್ಣ ಬಳಕೆಯ ಗಣೇಶ ಮೂರ್ತಿ ವಿಸರ್ಜನೆಯಾಗದಂತೆ ಕೇವಲ ಪರಿಸರ ಸ್ನೇಹಿಯಾದ ಗಣೇಶ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟರೆ ಮಾತ್ರ ಕೆರೆ ಹಾಗೂ ಪರಿಸರವನ್ನ ಉಳಿಸಿಕೊಳ್ಳಬಹುದು ಎನ್ನುವುದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ. ಈ ಬಗ್ಗೆ ಅಧಿಕಾರಿಗಳನ್ನ ಸಂಪರ್ಕಿಸಿದರೆ ಯಾರೊಬ್ಬರು ಕರೆ ಕೂಡ ಸ್ವೀಕರಿಸುತ್ತಿಲ್ಲ. ಮುಂದಿನ ಬಾರಿ ಗಣೇಶ ಹಬ್ಬಕ್ಕಾದರು ಸಂಬಂಧಪಟ್ಟ ಬಿಬಿಎಂಪಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆರೆ ಕಲುಷಿತ ಆಗದಂತೆ ಬ್ರೇಕ್ ಹಾಕಲು ಮುಂದಾಗುತ್ತಾರಾ ಇಲ್ವಾ ಕಾದು ನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ