ಬೆಂಗಳೂರು: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ (Leopard spotted)ಗೊಂಡ ನಂತರ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಚಿರತೆ ಭೀತ ಕಲ್ಯಾಣ ಮಂಟಪಕ್ಕೂ ತಟ್ಟಿದೆ. ತುರಹಳ್ಳಿ ಸಮೀಪದ ಕನಕ ಭವನ ಕಲ್ಯಾಣ ಭವನದಲ್ಲಿ ಮದುವೆಯೊಂದು ನಡೆಯುತ್ತಿದ್ದು, ಚಿರತೆ ಭೀತಿ (Leopard scare) ಹಿನ್ನೆಲೆ ಈ ಮದುವೆ ಸಮಾರಂಭಕ್ಕೆ ಕೇವಲ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಆಗಮಿಸಿದ್ದಾರೆ. ಈ ಬಗ್ಗೆ ಮದುವೆ ಮನೆಯವರು ಬೇಸರ ವ್ಯಕ್ತಪಡಿಸುತ್ತಿದ್ದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ದೀಪಾ ಮತ್ತು ಗುರುಪ್ರಸಾದ್ ಎಂಬ ವಧು ವರರ ಮದುವೆ ತುರಹಳ್ಳಿ ಸಮೀಪದ ಕನಕ ಭವನ ಕಲ್ಯಾಣ ಭವನದಲ್ಲಿ ನಡೆಯುತ್ತಿದೆ. ಇಂದು ಬೆಳಗ್ಗೆ 8:40 ರಿಂದ 9:40 ರವರೆಗೆ ಮುಹೂರ್ತ ಇತ್ತು. ಈ ಮದುವೆಗೆ ಸುಮಾರು 2 ಸಾವಿರ ಜನರಿಗೆ ಆಹ್ವಾನ ನೀಡಲಾಗಿತ್ತು. ಈ ನಡುವೆ ಚಿರತೆ ಪ್ರತ್ಯಕ್ಷಗೊಂಡ ಹಿನ್ನೆಲೆ ಜನರು ಮದುವೆ ಹಾಲ್ ಕಡೆ ಸುಳಿಯುತ್ತಿಲ್ಲ. ಪರಿಣಾಮ ಮದುವೆ ಹಾಲ್ನಲ್ಲಿ ಕುರ್ಚಿಗಳು ಖಾಲಿ ಖಾಲಿ ಇವೆ. ಸ್ನೇಹಿತರು ಮತ್ತು ವಧ-ವರರ ಕುಟುಂಬಸ್ಥರು ಮಾತ್ರ ಮದುವೆಗೆ ಆಗಮಿಸಿದ್ದಾರೆ. ನಾವು ನಿರೀಕ್ಷಿಸಿದಷ್ಟು ಜನರು ಮದುವೆಗೆ ಬಂದಿಲ್ಲ ಎಂದು ಕುಟುಂಬಸ್ಥರು ಹಾಗೂ ವಧುವರನ ಸ್ನೇಹಿತರು ಬೇಸರ ತೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಟಿ. ನರಸೀಪುರ: ಚಿರತೆಗೆ ಬಲಿಯಾದ ಯುವತಿಯ ಕುಟುಂಬಕ್ಕೆ 7.5 ಲಕ್ಷ ಪರಿಹಾರ, ಉದ್ಯೋಗದ ಭರವಸೆ
ಬಗೆಬಗೆಯ ಅಡುಗೆ ತಯಾರಿ
2ಸಾವಿರ ಮಂದಿಗೆ ಮದುವೆ ಆಹ್ವಾನ ನೀಡಲಾಗಿದ್ದು, ಸುಮಾರು ಮೂರೂವರೆ ಸಾವಿರ ಮಂದಿಗೆ ಅಡುಗೆ ತಯಾರಿ ನಡೆಸಲಾಗಿದೆ. 30ಕ್ಕೂ ಹೆಚ್ಚು ಬಗೆಬಗೆಯ ಅಡುಗೆ ಮದುವೆಗೆ ತಯಾರಿ ನಡೆಸಲಾಗಿದೆ. ಆದರೆ ನಿರೀಕ್ಷೆಯಷ್ಟು ಜನರು ಬರದ ಹಿನ್ನೆಲೆ ಕುಟುಂಬಸ್ಥರು ಚಿರತೆ ಆತಂಕದಿಂದ ಎಲ್ಲವೂ ವ್ಯರ್ಥವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಾಲ ಮಾಡಿ ಮೂರುವರೆ ಲಕ್ಷ ಹಣ ಕಲ್ಯಾಣ ಮಂಟಪಕ್ಕೆ ಕಟ್ಟಿದ್ದೆವು. ಚಿರತೆ ಆತಂಕದಿಂದ ಎಲ್ಲವೂ ವ್ಯರ್ಥವಾಗಿದೆ. ಅಪಾರ ಬಂಧು ಬಳಗ ಹೊಂದಿದ್ದ ಕಾರಣ ದೊಡ್ಡ ಕಲ್ಯಾಣ ಮಾಡಿದ್ದೆವು. ತರಹೇವಾರಿ ಮಾಡಿಸಿದ್ದ ಅಡುಗೆ ಎಲ್ಲವೂ ಹಾಗೆ ಉಳಿದಿದೆ. ಆತಂಕದಲ್ಲೇ ಸ್ವಲ್ಪ ಜನ ಬಂದು ಹೋಗಿದ್ದಾರೆ. ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ ಅಂತ ವಧುವಿನ ಸೋದರ ಮಾವ ರಂಗಪ್ಪ ಬೇಸರ ವ್ಯಕ್ತಪಡಿಸಿದರು. ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯುವಂತೆ ಅವರು ಆಗ್ರಹಿಸಿದರು.
ಕೆಂಗೇರಿ ಸಮೀಪದ ಕೋಡಿಪಾಳ್ಯ, ಚಟ್ಟಿಪಾಳ್ಯ ನಿವಾಸಿಗಳಲ್ಲಿ ಭೀತಿ ಹೆಚ್ಚಿಸಿದೆ. ತುರಹಳ್ಳಿ ಗ್ರಾಮಕ್ಕೆ ಹೊಂದಿಕೊಂಡು ಕಗ್ಗಲೀಪುರ-ತುರಹಳ್ಳಿ ಅರಣ್ಯ ಪ್ರದೇಶವಿದ್ದು, ಸೋಂಪುರ, ಶ್ರೀನಿವಾಸಪುರ, ಆರ್.ಆರ್.ನಗರ, ಮೈಲಸಂದ್ರ, ಕೋಡಿಪಾಳ್ಯ, ಗೆಟ್ಟಿಗರಹಳ್ಳಿಯನ್ನ ಸುತ್ತುವರಿದಿದೆ. ಈ ಅರಣ್ಯ ಪ್ರದೇಶವು 514.26 ಎರಕೆ ವಿಸ್ತೀರ್ಣದಲ್ಲಿದೆ. ಈ ಭಾಗದಲ್ಲಿ ನಿನ್ನೆ ಜಿಂಕೆಯನ್ನ ಬೇಟೆಯಾಡಿರುವ ಚಿರತೆ (Leopard hunting deer)ಯ ವಿಡಿಯೋ ವೈರಲ್ (Viral video) ಆದ ನಂತರ ಜನರು ಭಯಭೀತರಾಗಿದ್ದಾರೆ.
ಐಟಿಸಿ ಪ್ಯಾಕ್ಟರಿಯಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ಇಂದು ಸಹ ಚೀತಾ ಕೂಂಬಿಂಗ್ ಮುಂದುವರೆಯಲಿದೆ. 2 ತಂಡಗಳಿಂದ ಚಿರತೆಯ ಚಲನ ವಲನಗಳ ಮೇಲೆ ನಿಗಾ ಇಡಲಾಗಿದೆ. ಒಬ್ಬೊಬ್ಬರೇ ಓಡಾಡದಂತೆ ಸೂಚನೆ ಅಧಿಕಾರಿಗಳು ಸೂಚನೆ ನೀಡಲಾಗಿದೆ. ಈ ಭೀತಿಯ ನಡುವೆಯೂ ಯಾವುದೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿಲ್ಲ. ಅಂಗಡಿ ಮಾಲೀಕರು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: Leopard Attack ಚಿರತೆ ದಾಳಿಗೊಳಗಾಗಿದ್ದ ಯುವತಿ ಸಾವು, ಟಿ. ನರಸೀಪುರ ತಾಲೂಕಿನಲ್ಲೇ ಇದು 2ನೇ ಬಲಿ
ತುರಹಳ್ಳಿಯಲ್ಲಿ ಚಿರತೆ ದಾಳಿ ನಡೆಸಿದ ರಸ್ತೆಯತ್ತ ಜನರು ಸುಳಿಯುತ್ತಿಲ್ಲ. ಇಡೀ ರಸ್ತೆ ಸಂಪೂರ್ಣ ಖಾಲಿಯಾಗಿದೆ. ಬೆಳ್ಳಂಬೆಳಗ್ಗೆ ವಾಕಿಂಗ್ ಬರುತ್ತಿದ್ದವರೆಲ್ಲಾ ತಡವಾಗಿ ರಸ್ತೆಗೆ ಇಳಿದಿದ್ದಾರೆ. ಇನ್ನೊಂದೆಡೆ ತುರಹಳ್ಳಿ ಪ್ರದೇಶ ಸುತ್ತಲೂ ಸಾಕಷ್ಟು ಬಡವಾಣೆಗಳಿದ್ದು, ಜನವಸತಿ ಪ್ರದೇಶವಾಗಿದೆ. ಇಲ್ಲಿಗೆ ಚಿರತೆ ನುಗ್ಗದಂತೆ ಎಚ್ಚರವಹಿಸುವುದು ಅವಶ್ಯಕವಾಗಿದೆ. ಸಾಧ್ಯವಾದಷ್ಟು ಬೇಗ ಚಿರತೆ ಸೆರೆಹಿಡಿದು ಕಾಡಿಗೆ ಶಿಫ್ಟ್ ಮಾಡಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ತುರಹಳ್ಳಿ ಅರಣ್ಯದೊಳಗೆ ವಾಕಿಂಗ್ ಮಾಡದಂತೆ ಸೂಚನೆ ನೀಡಲಾಗಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Fri, 2 December 22