Leopard Attack ಚಿರತೆ ದಾಳಿಗೊಳಗಾಗಿದ್ದ ಯುವತಿ ಸಾವು, ಟಿ. ನರಸೀಪುರ ತಾಲೂಕಿನಲ್ಲೇ ಇದು 2ನೇ ಬಲಿ
ಮನೆ ಮುಂದೆ ಕುಳಿತ್ತಿದ್ದಾಗ ಯುವತಿ ಮೇಲೆ ಚಿರತೆ ದಾಳಿ ಮಾಡಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 20 ವರ್ಷದ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಮೈಸೂರು: ಚಿರತೆ ( Leopard ) ದಾಳಿಗೊಳಗಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಇಂದು(ಡಿಸೆಂಬರ್ 01) ಮೃತಪಟ್ಟಿದ್ದಾಳೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ಮನೆ ಮುಂದೆ ಕುಳಿತಿದ್ದಾಗ ಗುರುವಾರ ಸಂಜೆ ಚಿರತೆ ದಾಳಿ ಮಾಡಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮೇಘನಾಳನ್ನ (20) ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.
ಟಿ.ನರಸೀಪುರ ತಾಲೂಕಿನಲ್ಲೇ ಚಿರತೆ ದಾಳಿಗೆ ಎರಡನೇ ಬಲಿಯಾಗಿದೆ. ಕಳೆದ ತಿಂಗಳಷ್ಟೇ ಟಿ.ನರಸಿಪುರ ತಾಲೂಕಿನಲ್ಲೇ ಚಿರತೆ ಓರ್ವ ಯುವಕನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಇದೀಗ ಮೇಘನಾಳನ್ನ ಬಲಿಪಡೆದುಕೊಂಡಿದೆ. ಒಂದು ತಿಂಗಳಲ್ಲೇ ಚಿರತೆ ದಾಳಿಗೆ 2ನೇ ಬಲಿಯಾಗಿರುವುದರಿಂದ ಇದೀಗ ಟಿ. ನರಸೀಪುರ ತಾಲೂಕಿನ ಜನರಲ್ಲಿ ಚಿರತೆ ಭಯ ಶುರುವಾಗಿದ್ದು, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ: ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ಅಲರ್ಟ್
ಇದರಿಂದ ರೊಚ್ಚಿಗೆದ್ದ ಎಸ್.ಕೆಬ್ಬೆಹುಂಡಿ ಗ್ರಾಮಸ್ಥರು, ಕೂಡಲೇ ಚಿರತೆ ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಮೈಸೂರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಮೈಸೂರು ಭಾಗದಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಲೇ ಇವೆ. ಇದರಿಂದ ಜನರು ಭಯದಿಂದಲೇ ಹೊರಗಡೆ ಓಡಾಡುವಂತಾಗಿದೆ.
ಬೆಂಗಳೂರಿನಲ್ಲೂ ಚಿರತೆ ಪ್ರತ್ಯಕ್ಷ ಇತ್ತ ಬೆಂಗಳೂರಿನಲ್ಲೂ ಸಹ ಚಿರತೆ ಪ್ರತ್ಯಕ್ಷವಾಗಿವೆ. ಕಳೆದ 2 ತಿಂಗಳಿಂದ 4 ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ತುರಹಳ್ಳಿ ಅರಣ್ಯ ಪ್ರದೇಶದ ಸುತ್ತಮುತ್ತ ಚಿರತೆ ದಾಳಿ ಭೀತಿ ಎದುರಾಗಿದ್ದು, ಕೋಡಿಪಾಳ್ಯ, ಜಟ್ಟಿಗರಹಳ್ಳಿ, ಸೋಂಪುರ, ಬಿ.ಎಂ.ಕಾವಲು, ಗಟ್ಟಗೆರೆಪಾಳ್ಯ ಸುತ್ತಮುತ್ತದ ಜನರು ಆತಂಕಗೊಂಡಿದ್ದಾರೆ.
15 ದಿನದ ಹಿಂದೆ ಸೋಂಪುರ ಬಳಿ ಹಸು ಬೇಟೆಯಾಡಿದ್ದ ಚಿರತೆ, ಬಳಿಕ ಕಳೆದ 8 ದಿನಗಳ ಹಿಂದೆ ಮನೆ ಮುಂದಿದ್ದ ನಾಯಿ ಮೇಲೂ ದಾಳಿ ಮಾಡಿತ್ತು. ಅಲ್ಲದೇ 4 ದಿನಗಳ ಹಿಂದೆ ಕರು ಬೇಟೆಯಾಡಿರುವ ಕುರುಹು ಪತ್ತೆಯಾಗಿದ್ದು, ಮತ್ತಷ್ಟು ಭಯ ಹುಟ್ಟಿಸಿದೆ.
ಜಟ್ಟಿಗರಹಳ್ಳಿಯಲ್ಲಿರುವ ಪ್ರಾಥಮಿಕ ಶಾಲೆ ಮಕ್ಕಳಲ್ಲಿ ಆತಂಕ ಮನೆ ಮಾಡಿದೆ. ಪ್ರತಿ ದಿನ 45 ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುತ್ತಾರೆ. ಇದೀಗ ಚಿರತೆ ಪ್ರತ್ಯಕ್ಷವಾಗಿರುವ ವಿಚಾರ ತಿಳಿದು ಮಕ್ಕಳು ಹಾಗೂ ಪೋಷಕರಲ್ಲಿ ಭಯ ಶುರುವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೆಲವು ಕಡೆ ಬೋನುಗಳನ್ನು ಇಟ್ಟು ಚಿರತೆgಳನ್ನು ಸೆರೆಹಿಡಿಯಲು ಹರಸಾಹಸಪಡುತ್ತಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:17 pm, Thu, 1 December 22