BWSSB: ಬೆಂಗಳೂರು ನಗರದಲ್ಲಿ ಪ್ರತಿದಿನ ಶೇ 29 ರಷ್ಟು ನೀರು ಸೋರಿಕೆಯಿಂದ ಪೋಲು

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರತಿನಿತ್ಯ ಸರಬರಾಜು ಮಾಡುವ 1,450 ಮಿ.ಲೀ ನೀರಿನಲ್ಲಿ 420 ಮಿ.ಲೀ ಅಥವಾ ಶೇ 29 ರಷ್ಟು ನೀರು ಸೋರಿಕೆಯಿಂದಲೆ ಪೋಲಾಗುತ್ತಿದೆ.

BWSSB: ಬೆಂಗಳೂರು ನಗರದಲ್ಲಿ ಪ್ರತಿದಿನ ಶೇ 29 ರಷ್ಟು ನೀರು ಸೋರಿಕೆಯಿಂದ ಪೋಲು
ಸಾಂಧರ್ಬಿಕ ಚಿತ್ರ

Updated on: Mar 01, 2023 | 8:36 AM

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಪ್ರತಿನಿತ್ಯ ಸರಬರಾಜು ಮಾಡುವ 1,450 ಮಿ.ಲೀ ನೀರಿನಲ್ಲಿ 420 ಮಿ.ಲೀ ಅಥವಾ ಶೇ 29 ರಷ್ಟು ನೀರು ಸೋರಿಕೆಯಿಂದಲೆ ಪೋಲಾಗುತ್ತಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್​​ ಆಫ್​ ಇಂಡಿಯಾ ವರದಿ ಮಾಡಿದೆ. ನಗರದಲ್ಲಿ ನೀರು ಸರಬರಾಜಿಗೆ ಅಳವಡಿಸಲಾದ ಪೈಪ್​ಲೈನ್​ಗಳು ಅಧಿಕ ವಾಹನ ಸಂಚಾರದಿಂದ ಹಾನಿಯಾಗಿ ಬಹುತೇಕ 87 ಮಿ.ಲೀ ನೀರು ಪೋಲಾಗುತ್ತಿದೆ. ಇದನ್ನು ಹೊರತುಪಡಿಸಿ ಸಾರ್ವಜನಿಕ ನಲ್ಲಿ ಸೋರಿಕೆ, ಗೃಹ ನಲ್ಲಿ ಸೋರಿಕೆ, ಸ್ಲಂಗಳಲ್ಲಿ ನೀರು ಪೋಲು ಮತ್ತು ನೀರಿನ ಮೀಟರ್​ ಅಸಮರ್ಪಕ ಕಾರ್ಯ ನಿರ್ವಹಣೆ ಮತ್ತು ನೀರು ಸಂಗ್ರಹದ ಟ್ಯಾಂಕ್​ ಹಾಳಾಗಿರುವುದರಿಂದ ಸಾಕಷ್ಟು ನೀರು ಪೋಲಾಗುತ್ತಿದೆ.

ಇವುಗಳನ್ನು ಹೊರತುಪಡಿಸಿ ನೀರು ಸರಬರಾಜಿಗೆ ಮಾಡಲಾದ ಪೈಪ್​ ಲೈನ್​ಗಳು 80 ವರ್ಷದಷ್ಟು ಹಳೆಯದಾಗಿದ್ದು, ಈ ಪೈಪ್​ಲೈನ್​ಗಳು ಸಿಮೆಂಟ್​​ನಿಂದ ಕೂಡಿವೆ. ಸದ್ಯ ಇವು ಬಹುತೇಕ ಹಾಳಾಗಿದ್ದರಿಂದ ಹೆಚ್ಚಿನ ನೀರು ಪೋಲಾಗುತ್ತಿದೆ. ಈ ಬಗ್ಗೆ ಜಲಮಂಡಳಿ ಚೇರಮನ್ ಎನ್​​​​ ಜಯರಾಮ್​ ಮಾತನಾಡಿ ಹೆಚ್ಚಿನ ನೀರು ಮೆಜೆಸ್ಟಿಕ್​ ಮತ್ತು ಗಾಂಧಿನಗರದಲ್ಲಿ ಪೋಲಾಗುತ್ತಿದೆ. ಇದಕ್ಕೆ ಕಾರಣ ವಿದ್ಯುತ್​​ ಮತ್ತು ಟೆಲಿಪೋನ್​ ವೈರ್​​ ಹಾಕಲು ನೆಲ ಅಗಿಯುತ್ತಿದ್ದು, ಇದರಿಂದ ನೀರಿನ ಪೈಪ್​​ ಲೈನ್​ಗಳಿಗೆ ಹಾನಿಯಾಗುತ್ತಿದೆ ಎಂದು ಹೇಳಿದ್ದಾರೆ.

ಈ ಸೋರಿಕೆಯನ್ನು ತಡೆಯಲು ಮಂಡಳಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಮೀಟರ್‌ಗಳ ಅಳವಡಿಕೆಯಿಂದ ನೀರಿನ ಸೋರಿಕೆ ಬಹುತೇಕೆ ಕಡಿಮೆಯಾಗಿದೆ. ನಗರದಲ್ಲಿ ಮೊದಲು ಶೇ 45 ರಷ್ಟು ನೀರು ಸೋರಿಕೆಯಾಗುತ್ತಿತ್ತು. 2 ವರ್ಷಗಳ ಹಿಂದೆ ಶೇ 38 ಕ್ಕೆ ಇಳಿಕೆಯಾಗಿದೆ. ಈಗ ಶೇ 29 ರಷ್ಟಿದೆ. ಮುಂದಿನ ದಿನಗಳಲ್ಲಿ ಶೇ 100 ರಷ್ಟು ನೀರು ಸೋರಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇನ್ನು ದೆಹಲಿ, ಮುಂಬೈ, ಚೆನ್ನೈ ಅಥವಾ ಹೈದರಾಬಾದ್​ನಂತ ದೊಡ್ಡ ನಗರದಲ್ಲೇ ಆಗಿಲಿ ಅಥವಾ ಭಾರತದ ಯಾವುದೇ ನಗರದಲ್ಲಿ ಶೇ 100 ರಷ್ಟು ಮೀಟರ್​ನ್ನು ಅಳವಡಿಸಲು ಸಾಧ್ಯವಾಗಿಲ್ಲ. ಆದಾಗ್ಯೂ, ಸೆಂಟ್ರಲ್ ಪಬ್ಲಿಕ್ ಹೆಲ್ತ್ ಮತ್ತು ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ಆರ್ಗನೈಸೇಶನ್ ನಿಯಮಗಳ ಪ್ರಕಾರ, ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವು ಕೇವಲ ಶೇ 15 ರಷ್ಟು ಆಗಿರಬೇಕು. ಇದನ್ನು ಸಾಧಿಸಲು, BWSSB ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ಸೋರಿಕೆ ತಡೆಯಲು ಬೆಂಗಳೂರು ಪಶ್ಚಿಮ, ದಕ್ಷಿಣ ಮತ್ತು ಕೇಂದ್ರ ವಿಭಾಗಗಳಲ್ಲಿ 132.5 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ 654 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಸೋರಿಕೆ ತಡೆಯಲು ಮಂಡಳಿಗೆ ಸಾಧ್ಯವಾಗಿರುವುದು ಇದು ಒಂದು ಕಾರಣವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ವಿಧಾನಸಭೆಯಲ್ಲಿ ಹೇಳಿದ್ದರು.

ನಗರದ ಉತ್ತರ ಮತ್ತು ಆಗ್ನೇಯ ವಿಭಾಗಗಳಲ್ಲಿ 22 ಚದರ ಕಿ.ಮೀ ಪ್ರದೇಶದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಹಳೆಯ ಪೈಪ್‌ಲೈನ್‌ಗಳನ್ನು ಬದಲಾಯಿಸಲು ಬಿಡಬ್ಲ್ಯೂಎಸ್‌ಎಸ್‌ಬಿಗೆ 8,000 ಕೋಟಿ ರೂಪಾಯಿ ಅಗತ್ಯವಿದೆ ಎಂದು ಜಯರಾಮ್​ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ