ಬೆಂಗಳೂರು: ಆನ್ಲೈನ್ ಲೋನ್ ಆ್ಯಪ್‌ಗಳ (Online Loan App) ಮೂಲಕ ಪಡೆದ ಸಾಲವನ್ನು ಮರುಪಾವತಿಸದ ಬ್ಯಾಂಕ್ ನೌಕರನಿಗೆ ಆ ಆ್ಯಪ್ನವರು ಇನ್ನಿಲ್ಲದ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ 55 ವರ್ಷದ ಬ್ಯಾಂಕ್ ಉದ್ಯೋಗಿಯೊಬ್ಬರು ಸೋಮವಾರ ಬೆಳಗ್ಗೆ ಸಿಟಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರಿನ (Bangalore) ಕೆಂಗೇರಿ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 40 ಲೋನ್ ಆ್ಯಪ್ಗಳಲ್ಲಿ ಸಾಲ ಪಡೆದಿದ್ದ ನಂದಕುಮಾರ್ ಎಂಬ ಬ್ಯಾಂಕ್ ನೌಕರ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ನಾಗದೇವನಹಳ್ಳಿ ನಿವಾಸಿ ನಂದಕುಮಾರ್ ಆನ್ಲೈನ್ ಆ್ಯಪ್ ಮೂಲಕ ಸಾಲ ಪಡೆದಿದ್ದರು. ಸಾಲ ವಾಪಾಸ್ ನೀಡುವುದು ತಡವಾಗಿದ್ದರಿಂದ ಆ ಆ್ಯಪ್ನವರು ನಂದಕುಮಾರ್ ಅವರ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅದನ್ನು ಅವರ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕಳುಹಿಸಿದ್ದರು. ಇದರಿಂದ ನಂದಕುಮಾರ್ ಅವಮಾನದಿಂದ ಕುಗ್ಗಿ ಹೋಗಿದ್ದರು. ಇದರಿಂದ ಪಾರಾಗಲು ಆತ್ಮಹತ್ಯೆಯ ನಿರ್ಧಾರ ಮಾಡಿದ್ದರು.
ಮೃತ ನಂದಕುಮಾರ್ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನಗಾದ ಅವಮಾನದ ಬಗ್ಗೆ ಬರೆದಿದ್ದಾರೆ. ನಾನು 40 ಲೋನ್ ಆ್ಯಪ್ ಮೂಲಕ ಸಾಲ ಪಡೆದುಕೊಂಡಿದ್ದು, ಅದರಲ್ಲಿ ಒಂದು ಆ್ಯಪ್ ನಿಂದ 3 ಸಾವಿರ ಹಾಗೂ ಉಳಿದ ಆ್ಯಪ್ನಿಂದ 16 ಸಾವಿರ ರೂ. ಸಾಲ ತೆಗೆದುಕೊಂಡಿದ್ದೇನೆ. ಆದರೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ಕಿರುಕುಳ ಹೆಚ್ಚಾಯಿತು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ತಮಿಳುನಾಡಿನಲ್ಲಿ ಮತ್ತೊಬ್ಬಳು ವಿದ್ಯಾರ್ಥಿನಿ ಆತ್ಮಹತ್ಯೆ; 2 ವಾರದಲ್ಲಿ ಇದು 4ನೇ ಸಾವು!
ಸಾಲದ ಹೊರೆ ಒಂದೆಡೆಯಾದರೆ ನಂದಕುಮಾರ್ ಅವರ ವೈವಾಹಿಕ ಜೀವನವೂ ಚೆನ್ನಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಾಲ ನೀಡಿದ್ದವರು ನಂದ ಕುಮಾರ್‌ಗೆ ಮಾರ್ಫ್ ಮಾಡಿದ ಚಿತ್ರಗಳನ್ನು ಕಳುಹಿಸಿ ಪೋರ್ನ್ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಇದರ ಜೊತೆಗೆ ನಂದಕುಮಾರ ಅವರ ಫೋನ್ನಲ್ಲಿದ್ದ ಕಾಂಟಾಕ್ಟ್ ನಂಬರ್ಗಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು, ಇದನ್ನು ನಂದಕುಮಾರ್ ಅವರೇ ಕಳುಹಿಸಿದ್ದಾರೆ ಎಂದು ಅವರು ಅಂದುಕೊಳ್ಳುವಂತೆ ಮಾಡಿದ್ದರು ಎನ್ನಲಾಗಿದೆ.
ಮೃತನ ವೈಯಕ್ತಿಕ ವಿವರಗಳು ಸಾಲ ನೀಡಿದವರಿಗೆ ಹೇಗೆ ದೊರೆಯಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ನಂದಕುಮಾರ್ಗೆ ಕೆಲವು ಲಿಂಕ್ಗಳನ್ನು ಕಳುಹಿಸಿ, ಅದನ್ನು ಓಪನ್ ಮಾಡಲು ಹೇಳಿದ್ದರು. ಆ ಲಿಂಕ್ ಓಪನ್ ಮಾಡಿದ ನಂತರ ನಂದಕುಮಾರ್ ಖಾಸಗಿ ವಿವರಗಳೆಲ್ಲವೂ ಆರೋಪಿಗಳಿಗೆ ಸಿಕ್ಕಿತ್ತು ಎನ್ನಲಾಗಿದೆ. ಆ ಲಿಂಕ್ ಮೂಲಕ ನಂದಕುಮಾರ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡಿ ಅಲ್ಲಿಂದ ಅವರ ಸ್ನೇಹಿತರ ಸಂಪರ್ಕ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.
Published On - 12:53 pm, Fri, 29 July 22