ಬೆಂಗಳೂರು, ಮಾರ್ಚ್.06: ವಿಡಿಯೋದಲ್ಲಿ ಕಂತೆ ಕಂತೆ ಹಣ ತೋರಿಸಿ ವಂಚಿಸುತ್ತಿದ್ದವನನ್ನ ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚಕ (Cheating) ಕಿಶನ್ ಅಲಿಯಾಸ್ ಮಾಕಳಿ ಕಿಶನ್ ಬಂಧಿತ ಆರೋಪಿ. ಈ ಆರೋಪಿ ಟ್ರೇಡಿಂಗ್ (Treading) ಹೆಸರಿನಲ್ಲಿ ಅಮಾಯಕರಿಗೆ ಬಲೆ ಬೀಸಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ. ನೂರಾರು ಜನ ಇತನನ್ನು ನಂಬಿ ಹಣ ಕಳೆದುಕೊಂಡಿದ್ದಾರೆ (Money Double).
ವಂಚಕ ಕಿಶನ್ ಕಂತೆ ಕಂತೆ ಹಣದ ವಿಡಿಯೋ ಕಳಿಸಿ ನೀವು ಮಾಡಿದ ಹೂಡಿಕೆ ಹಣಕ್ಕೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಜನರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಬಳಿಕ ಅವರಿಂದ ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡುತ್ತಿದ್ದ. ಸದ್ಯ ಗುಣನಿಧಿ ಎಂಬುವರ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 15.15 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ಗುಣನಿಧಿಯವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ರೌಡಿಶೀಟರ್ ಜೊತೆಗೆ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಫೋಟೋ ವೈರಲ್
ಸ್ನೇಹಿತ ಗೌತಮ್ ಮೂಲಕ ಗುಣನಿಧಿ ಅವರಿಗೆ ವಂಚಕ ಕಿಶನ್ ಪರಿಚಯವಾಗಿತ್ತು. ಲೋನ್ ಮಾಡಿ ಹಣ ಕೊಡಿಸು ಅದನ್ನು ಹೂಡಿಕೆ ಮಾಡಿ ಲಾಭಾಂಶ ನೀಡುವೆ ಎಂದು ನಂಬಿಸಿ ಲೋನ್ಗಾಗಿ ಬ್ರೋಕರ್ ವೆಂಕಟೇಶ್ ಸಂಪರ್ಕಿಸುವಂತೆ ಕಿಶನ್ ತಿಳಿಸಿದ್ದ. ಬ್ರೋಕರ್ ವೆಂಕಟೇಶ್ ದಾಖಲೆ ಪಡೆದು ಬ್ಯಾಂಕ್ನಿಂದ ಲೋನ್ ಕೊಡಿಸಿದ್ದರು. ಲೋನ್ ಅಮೌಂಟ್ RTGS ಮೂಲಕ ಕಿಶನ್ ಅಕೌಂಟ್ಗೆ ವರ್ಗಾವಣೆಯಾಗಿತ್ತು. ಬ್ಯಾಂಕ್ ಲೋನ್ EMI ತಾನೇ ಪಾವತಿಸುವುದಾಗಿ ಕಿಶನ್ ನಂಬಿಸಿದ್ದ. ಮೊದಲ 5-6 EMI ಪಾವತಿಸಿದ್ದ ಕಿಶನ್, ಒಂದೇ ವರ್ಷಕ್ಕೆ ಲೋನ್ ಕ್ಲಿಯರ್ ಮಾಡಿ ಪ್ರಾಫಿಟ್ ನೀಡುವ ಆಮಿಷವೊಡ್ಡಿದ್ದ. ಆದರೆ ಯಾವುದೇ ಲಾಭ ನೀಡದೆ ಹಣ ಪಡೆದು ವಂಚನೆ ಮಾಡಿದ್ದಾನೆ.
ವಂಚಕ ಕಿಶನ್, ಇದೇ ರೀತಿ ನೂರಾರು ಜನರನ್ನು ನಂಬಿಸಿ ವಂಚನೆ ಮಾಡಿದ್ದಾನೆ. ಸುಮಾರು 80-100 ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಿಂಗ್ ರಿಯಲ್ ಎಸ್ಟೇಟ್ ಕಂಪನಿ ನಡೆಸುತ್ತಿರುವ ವಂಚಕ ಕಿಶನ್ಗೆ ಹಣ ವಾಪಸ್ ಕೇಳಿದರೆ ಗನ್ ತೋರಿಸಿ ಬೆದರಿಸುತ್ತಿರುವ ಆರೋಪ ಕೇಳಿ ಬಂದಿದೆ. ಹೂಡಿಕೆದಾರರು ಜೀವ ಭಯದಿಂದ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ವಂಚನೆಗೊಳಗಾದವರು ಬಂದು ದೂರು ನೀಡುವಂತೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲ್ ಅಡಾವತ್ ಮನವಿ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ