
ಬೆಂಗಳೂರು, ನವೆಂಬರ್ 11: ಕಾರು ಮಾಲೀಕರಿಂದ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ಪಡೆದು, ಅವುಗಳನ್ನು ವಾಪಸ್ ನೀಡದೆ ವಂಚಿಸುತ್ತಿದ್ದ ಆರೋಪದ ಮೇಲೆ ಒಬ್ಬನನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಜೆ.ಪಿ. ನಗರ 9ನೇ ಫೇಸ್ ನಿವಾಸಿ ಸುನಿಲ್ ನಾಯಕ್ ಬಂಧಿತ ಆರೋಪಿ. ಆತನ ಬಳಿಯಿಂದ ಒಟ್ಟು 12 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುನಿಲ್ ನಾಯಕ್ ಈ ಹಿಂದೆ ವೃದ್ಧಾಶ್ರಮ ನಡೆಸುತ್ತಿದ್ದ. ಜೊತೆಗೆ ಟ್ರಾವೆಲ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಕಾರು ಮಾಲೀಕರನ್ನು ಸಂಪರ್ಕಿಸಿ, ತನ್ನ ವೃದ್ಧಾಶ್ರಮಕ್ಕೆ ಕಾರುಗಳು ಬಾಡಿಗೆಗೆ ಬೇಕಿವೆ ಎಂದು ಹೇಳುತ್ತಿದ್ದ. ದಿನಕ್ಕೆ ₹1,000ದಿಂದ ₹2,000 ಬಾಡಿಗೆ ನೀಡುವುದಾಗಿ ಭರವಸೆ ನೀಡಿ ಕಾರುಗಳನ್ನು ಪಡೆಯುತ್ತಿದ್ದ. ಆರಂಭದಲ್ಲಿ ಕೆಲ ದಿನ ಬಾಡಿಗೆ ಹಣವನ್ನೂ ನೀಡಿ ಮಾಲೀಕರ ವಿಶ್ವಾಸ ಗಳಿಸಿದ್ದ. ನಂತರ ಆ ಕಾರುಗಳು ತನ್ನದೇ ಎಂದು ಹೇಳಿ, ತುರ್ತಾಗಿ ಹಣ ಬೇಕಿದೆ ಎಂಬ ಕಾರಣ ನೀಡಿ ಅವುಗಳನ್ನು ಅಡಮಾನ ಇಟ್ಟು ಸಾಲ ಪಡೆಯುತ್ತಿದ್ದ. ಹೀಗೆ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಬಾಡಿಗೆಯೂ ಇಲ್ಲ, ಕಾರೂ ಇಲ್ಲ ಎಂಬಂತೆ ಮಾಲೀಕರಿಗೆ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ರೀತಿ ವಂಚಿಸಿ ಒಟ್ಟು ಸುಮಾರು ₹1.20 ಕೋಟಿ ಮೌಲ್ಯದ ಕಾರುಗಳನ್ನು ಮಾಲೀಕರಿಗೆ ವಾಪಸ್ ನೀಡದೆ ಆರೋಪಿ ಮೋಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಪೊಲೀಸರು ಆರೋಪಿಯನ್ನು ಬಂಧಿಸಿ, ಇನ್ನೋವಾ, ಎರ್ಟಿಗಾ, ಸಿಯಾಜ್, ಕ್ರೆಟಾ, ಎಕ್ಸ್‌ಯುವಿ ಹಾಗೂ ಬಲೆನೊ ಸೇರಿದಂತೆ ಒಟ್ಟು 12 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ