
ಬೆಂಗಳೂರು, ನವೆಂಬರ್ 17: ಬೆಂಗಳೂರಿನ (Bengaluru) ಶಾಂತಿನಗರದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ವ್ಯಕ್ತಿಗಳು ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ, ದರೋಡೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿಸಿ ಮೋಹನ್ ಕೂಡ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಬೆಂಗಳೂರು ನಗರ ಪೊಲೀಸರ ತಕ್ಷಣವೇ ಕೈಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂಸದ ಮೋಹನ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಮತ್ತೊಂದು ಸ್ಕೂಟಿಯಲ್ಲಿ ಬಂದ ಮೂವರು ಅಡ್ಡಗಟ್ಟಿದ್ದಾರೆ. ನಂತರ ಅವರ ಮೇಲೆ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿರುವುದು ಕಂಡು ಬಂದಿದೆ. ವ್ಯಕ್ತಿಯ ಜೇಬನ್ನು ಪರಿಶೀಲಿಸುತ್ತಿರುವುದು ಕೂಡ ಕಾಣಿಸಿದೆ. ಸಂತ್ರಸ್ತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಮೂರು ಆಗಂತುಕರ ಪೈಕಿ ಒಬ್ಬ ಕೋಲಿನಿಂದ ಹೊಡೆದಿದ್ದಾನೆ. ದರೋಡೆ ಮಾಡಿದ ನಂತರ ಹಾಗಂತಕರ ಗ್ಯಾಂಗ್ ಅಲ್ಲಿಂದ ಪರಾರಿಯಾಗಿರುವುದು ವಿಡಿಯೋದಲ್ಲಿದೆ.
Requesting immediate action from @BlrCityPolice in Shantinagar.pic.twitter.com/d3b9R6x5vI
— P C Mohan (@PCMohanMP) November 17, 2025
ವಿಡಿಯೋಗೆ ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು, ಕರ್ನಾಟಕದಲ್ಲಿ ಸುರಕ್ಷತೆ ಇಲ್ಲ ಎಂದು ಬರೆದಿದ್ದಾರೆ. ಇನ್ನೊಬ್ಬರು ‘ಗೂಂಡಾಗಿರಿ’ ಎಂದು ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ವಿಷಯಕ್ಕೆ ಸ್ಪಂದಿಸಿದ್ದಾರೆಯೇ ಅಥವಾ ಆರೋಪಿಗಳನ್ನು ಬಂಧಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಬೆಂಗಳೂರು: ಒಬ್ಬನನ್ನೇ ಮದುವೆಯಾಗಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಹೆಂಡತಿ
ಈ ಹಿಂದೆ ತಮ್ಮ ಕ್ಷೇತ್ರದಲ್ಲಿ ಮೂಲಸೌಕರ್ಯ ಮತ್ತು ನಾಗರಿಕ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಮೂಲಕ ಸಂಸದ ಪಿ.ಸಿ. ಮೋಹನ್ ಗಮನ ಸೆಳೆದಿದ್ದರು. ಇದೀಗ ದರೋಡೆ ಪ್ರಕರಣದಲ್ಲಿ ನಗರ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.