ಬೆಂಗಳೂರಿನ ಮಾರ್ಕೆಟ್ ಫ್ಲೈಓವರ್​ನಿಂದ ಹಣ ಎಸೆದ ವ್ಯಕ್ತಿ ಖಾಕಿ ವಶಕ್ಕೆ

| Updated By: Rakesh Nayak Manchi

Updated on: Jan 24, 2023 | 5:01 PM

ವ್ಯಕ್ತಿಯೊಬ್ಬ ಬೆಂಗಳೂರಿನ ಕೆ.ಆರ್​.ಮಾರ್ಕೆಟ್​ ಫ್ಲೈ ಓವರ್​ ಮೇಲೆ ಬಂದು ಹಣ ಎಸೆದ ಘಟನೆಯೊಂದು ನಡೆದಿದೆ. ಆ ವ್ಯಕ್ತಿ ಯಾಕೆ ಹಣ ಎಸೆದಿದ್ದು? ಹಣ ಎಸೆದ ವ್ಯಕ್ತಿ ಹೇಳುವುದೇನು? ಇಲ್ಲಿದೆ ನೋಡಿ.

ಬೆಂಗಳೂರಿನ ಮಾರ್ಕೆಟ್ ಫ್ಲೈಓವರ್​ನಿಂದ ಹಣ ಎಸೆದ ವ್ಯಕ್ತಿ ಖಾಕಿ ವಶಕ್ಕೆ
ಹಣ ಎಸೆದ ಅರುಣ್ (ಎಡ ಚಿತ್ರ) ಮತ್ತು ಕೆ.ಆರ್​.ಮಾರ್ಕೆಟ್ ಫ್ಲೈಓವರ್​ ಮೇಲಿಂದ ಹಣ ಎಸೆಯುತ್ತಿರುವ ಅರುಣ್ (ಬಲ ಚಿತ್ರ)
Follow us on

ಬೆಂಗಳೂರು: ನೋಟು ಅಮಾನ್ಯೀಕರಣಗೊಂಡ ಸಮಯದಲ್ಲಿ ಹಣ ಕೂಡಿಟ್ಟಿದ್ದ ಕೆಲವು ವ್ಯಕ್ತಿಗಳು ಇನ್ನು ಈ ನೋಟುಗಳು ಪ್ರಯೋಜನವಿಲ್ಲ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಎಸೆದಿದ್ದರು. ಇದರ ಹೊರತಾಗಿ ಪಬ್​ಗಳಲ್ಲಿ ಪಬ್​ ಡಾನ್ಸರ್​ಗಳ ಮೇಲೆ ಹಣ ಎಸೆಯುವುದನ್ನು ನೋಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ನಗರದ ಕೆ.ಆರ್.ಮಾರ್ಕೆಟ್ ಫ್ಲೈಓವರ್​ (K.R. Market Flyover) ಮೇಲೆ ಬಂದು ಹಣ ಎಸೆದು ಸ್ಥಳದಿಂದ ತೆರಳಿದ್ದಾನೆ. ಈ ಪ್ರಕರಣ ಸಂಬಂಧ ತನಿಖೆಗೆ ಇಳಿದ ಪೊಲೀಸರು, ನಾಗಬಾವಿಯ ಯೂಟ್ಯೂಬ್​ ಚಾನಲ್ ಕಚೇರಿಯಲ್ಲಿ ಹಣ ಎಸೆದ ವ್ಯಕ್ತಿ ಇರುವುದನ್ನು ಖಚಿತಪಡಿಸಿ ಕಚೇರಿಗೆ ಎಂಟ್ರಿ ಕೊಟ್ಟು ವಶಕ್ಕೆ ಪಡೆದಿದ್ದಾರೆ. ಸದ್ಯ ಹಣ ಎಸೆದ ವ್ಯಕ್ತಿ ಅರುಣ್ ಎಂದು ತಿಳಿದುಬಂದಿದ್ದು, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

ಫ್ಲೈಓವರ್​ನಿಂದ ಹಣ ಎಸೆದ ಘಟನೆ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆ 92ಡಿ, ಐಪಿಸಿ 283ರ ಅಡಿ ಎನ್​ಸಿಆರ್ ಪ್ರಕರಣ ದಾಖಲಿಸಿದ ಕೆ.ಆರ್.ಮಾರ್ಕೆಟ್​ ಠಾಣಾ ಪೊಲೀಸರು, ಕಾರಣ ನೀಡುವಂತೆ ನಾಗರಭಾವಿಯಲ್ಲಿರುವ ಹಣ ಎಸೆದ ಅರುಣ್​ ನಿವಾಸಕ್ಕೆ ನೋಟಿಸ್ ಜಾರಿ ಕಳುಹಿಸಿದ್ದರು. ಅದಾಗ್ಯೂ ಉತ್ತರಿಸದಿದ್ದಾಗ ಅರುಣ್ ನಾಗರಭಾವಿಯಲ್ಲಿರುವ ಯೂಟ್ಯೂಬ್ ಕಚೇರಿಯಲ್ಲಿ ಇರುವುದು ಪೊಲೀಸರಿಗೆ ಖಚಿತವಾಗಿದೆ. ಅದರಂತೆ ಕಚೇರಿಗೆ ತೆರಳಿದ ಪೊಲೀಸರು ಅರುಣ್​ ಜೊತೆ ಮಾತುಕತೆ ನಡೆಸಿ ಠಾಣೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: Viral News: ಪ್ರೀತಿಗಾಗಿ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ; ಆದರೂ ಕೈ ಕೊಟ್ಟಳು ಗೆಳತಿ!

ಹಣ ಎಸೆದ ಅರುಣ್ ಹೇಳುವುದೇನು?

ನನಗೆ ಜ್ಞಾನ, ಬುದ್ಧಿ ಶಕ್ತಿ ಚೆನ್ನಾಗಿದೆ. ಕೆಟ್ಟ ಉದ್ದೇಶದಿಂದ ಹಣ ಎಸೆದಿಲ್ಲ ಎಂದು ಅರುಣ್​ ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾನೆ. ನಾನು ವಿದ್ಯಾವಂತನಾಗಿದ್ದೇನೆ, ನನಗೂ ಬುದ್ಧಿಯಿದೆ. ಸಾರ್ವಜನಿಕವಾಗಿ ಹಣ ಎಸೆದಿದ್ದು ತಪ್ಪು ಎಂದು ನನಗೆ ಗೊತ್ತಿದೆ. ರೀಲ್ಸ್ ಮಾಡುವ ಉದ್ದೇಶದಿಂದ ಹಣ ಎಸೆದಿಲ್ಲ. ನನಗೆ ಸಮಯ ನೀಡಿದರೆ ಎಲ್ಲವನ್ನೂ ಹೇಳುತ್ತೇನೆ. ದಯವಿಟ್ಟು ನನಗೆ ಸಮಯ ಕೊಡಿ ಎಂದು ಹೇಳಿದ್ದಾನೆ.

ಹಣ ಎಸೆದ ಅರುಣ್ ವಿರುದ್ಧ ಎಫ್​ಐಆರ್ ದಾಖಲು

ಫ್ಲೈಓವರ್​ನಲ್ಲಿ ಹಣ ಎಸೆದ ಪ್ರಕರಣ ಸಂಬಂಧ ಸಿಟಿ ಮಾರ್ಕೆಟ್‌ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ರಸ್ತೆಯಲ್ಲಿ ಹಣ ಎಸೆದು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಹಾಗೂ ಜನರು ಅಪಾಯಕಾರಿಯಾಗಿ ಓಡಾಡುವಂತೆ ಮಾಡಿದ ಆರೋಪ ಮೇಲೆ ಪೊಲೀಸರು ಐಪಿಸಿ ಸೆಕ್ಷನ್‌ 283, 290, ಕೆಪಿ ಕಾಯ್ದೆ 92(D)ರಡಿ ಪ್ರಕರಣ ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Tue, 24 January 23