Viral News: ಪ್ರೀತಿಗಾಗಿ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ; ಆದರೂ ಕೈ ಕೊಟ್ಟಳು ಗೆಳತಿ!

Sushma Chakre

Sushma Chakre |

Updated on: Jan 24, 2023 | 4:16 PM

Love Story: ಒಳ್ಳೆ ಗೆಳತಿಯರಾದ ಸೋನಾಲ್ ಮತ್ತು ಸನಾ ನಡುವೆ 4 ತಿಂಗಳೊಳಗೆ ಒಬ್ಬರನ್ನೊಬ್ಬರು ಬಿಟ್ಟು ಇರಲಾರದಂತಹ ಸಂಬಂಧ ಬೆಳೆಯಿತು. ಇಬ್ಬರೂ ಜೀವನಪೂರ್ತಿ ಒಟ್ಟಿಗೇ ಇರಲು ನಿರ್ಧರಿಸಿದರು.

Viral News: ಪ್ರೀತಿಗಾಗಿ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ; ಆದರೂ ಕೈ ಕೊಟ್ಟಳು ಗೆಳತಿ!
ಪ್ರೇಮಿಗಾಗಿ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ
Image Credit source: India Today

ಝಾನ್ಸಿ: ಈ ಕತೆ ಯಾವ ಸಿನಿಮಾ ಸ್ಟೋರಿಗೂ ಕಡಿಮೆಯಿಲ್ಲ. ಆಪ್ತ ಗೆಳತಿಯರಾಗಿದ್ದ ಇಬ್ಬರು ಯುವತಿಯರ ನಡುವೆ ಬಹಳ ಆತ್ಮೀಯತೆ ಬೆಳೆದಿತ್ತು. ಕೊನೆಕೊನೆಗೆ ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರಲಾರದ ಸ್ಥಿತಿಗೆ ತಲುಪಿದ್ದರು. ಕೊನೆಗೆ ಅವರಲ್ಲಿ ಒಬ್ಬಳು ಯುವತಿ ತನ್ನ ಗೆಳತಿಗಾಗಿ ಲಿಂಗವನ್ನೇ ಬದಲಾಯಿಸಿಕೊಂಡಳು. ಆದರೂ ಆಕೆಗೆ ಅದೃಷ್ಟ ಕೈಕೊಟ್ಟಿತ್ತು. ಒಂದು ವಿಚಿತ್ರವಾದ ಪ್ರೇಮಕತೆ (Love Story) ಇಲ್ಲಿದೆ ಓದಿ.

ಉತ್ತರ ಪ್ರದೇಶದ ಝಾನ್ಸಿಯ ಕುಟುಂಬವೊಂದರಲ್ಲಿ ಯುವತಿಯೊಬ್ಬಳು ಪೇಯಿಂಗ್ ಗೆಸ್ಟ್‌ ಆಗಿ ಸೇರಿಕೊಂಡಿದ್ದಳು. ತನ್ನ ತಂದೆ-ತಾಯಿಯೊಂದಿಗೆ ವಾಸವಾಗಿದ್ದ ಸೋನಾಲ್ ಮನೆಗೆ ಸನಾ ಪೇಯಿಂಗ್ ಗೆಸ್ಟ್ ಆಗಿ ಬಂದಳು. ಅದೇ ಮನೆಯ ಮೇಲಿನ ಮಹಡಿಯಲ್ಲಿ ಆಕೆ ಉಳಿದುಕೊಂಡಿದ್ದಳು. ಇಬ್ಬರೂ ಒಂದೇ ವಯಸ್ಸಿನವರಾದ್ದರಿಂದ ಸಹಜವಾಗಿಯೇ ಬಹಳ ಬೇಗ ಗೆಳತಿಯರಾದರು.

ಒಳ್ಳೆ ಗೆಳತಿಯರಾದ ಸೋನಾಲ್ ಮತ್ತು ಸನಾ ನಡುವೆ 4 ತಿಂಗಳೊಳಗೆ ಒಬ್ಬರನ್ನೊಬ್ಬರು ಬಿಟ್ಟು ಇರಲಾರದಂತಹ ಸಂಬಂಧ ಬೆಳೆಯಿತು. ಇಬ್ಬರೂ ಜೀವನಪೂರ್ತಿ ಒಟ್ಟಿಗೇ ಇರಲು ನಿರ್ಧರಿಸಿದರು. ಆದರೆ, ಸೋನಾಲ್ ಕುಟುಂಬವು ಅವರಿಬ್ಬರ ವಿಚಿತ್ರವಾದ ಪ್ರೀತಿಯನ್ನು ಒಪ್ಪದೆ ಸನಾಳನ್ನು ಮನೆಯಿಂದ ಆಚೆ ಕಳುಹಿಸಿದರು.

ಸರ್ಕಾರಿ ಕೆಲಸ ಮಾಡುತ್ತಿದ್ದ ಸನಾ ಅವರನ್ನು 2016ರಲ್ಲಿ ಝಾನ್ಸಿಗೆ ನೇಮಿಸಲಾಯಿತು. 1 ವರ್ಷದ ನಂತರ ಆಕೆಗೆ ಸರ್ಕಾರಿ ಕ್ವಾರ್ಟರ್ ಅನ್ನು ಮಂಜೂರು ಮಾಡಲಾಯಿತು. ಬಳಿಕ ಅವಳು ಅಲ್ಲಿ ಉಳಿದುಕೊಳ್ಳಲು ನಿರ್ಧರಿಸಿದಳು. 2017ರ ಆಗಸ್ಟ್ 10ರಂದು ಸನಾ ತಮ್ಮ ಸರ್ಕಾರಿ ಕ್ವಾರ್ಟರ್‌ಗೆ ತೆರಳಿದಳು. ಆದರೆ, ಆಕೆಗೆ ಸೋನಾಲ್​ಳನ್ನು ಮರೆಯಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Crime News: ಪ್ರೀತಿಯನ್ನು ನಿರಾಕರಿಸಿದ 15 ವರ್ಷದ ಬಾಲಕಿಗೆ ಶೂಟ್ ಮಾಡಿ ಕೊಂದ ಯುವಕ

ಸನಾ ಮನೆಯಿಂದ ಹೊರಗೆ ಹೋದ 4 ದಿನಗಳ ನಂತರ, ಸೋನಾಲ್ ಕೂಡ ಸನಾ ಜೊತೆ ಹೋಗಿ ವಾಸಿಸಲು ಶುರು ಮಾಡಿದಳು. ಸಮಯ ಕಳೆದಂತೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೋನಾಲ್ ಸನಾಳ ಮನವೊಲಿಸಿದಳು. ಅವರು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಭೇಟಿ ನೀಡಿ, ಸನಾಳ ಲಿಂಗ ಬದಲಾವಣೆಗೆ ಬೇಕಾ ಆಪರೇಷನ್ ಬಗ್ಗೆ ಮಾಹಿತಿ ಪಡೆದರು. ಅಲ್ಲಿ ವೈದ್ಯರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು. ನಂತರ ಸನಾ ಲಿಂಗ ಪರಿವರ್ತನೆಯ ಆಪರೇಷನ್​ಗೆ ‘ಫಿಟ್’ ಆಗಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಸೋನಾಲ್​ಳೊಂದಿಗೆ ಇರಬೇಕೆಂಬ ಒಂದೇ ಕಾರಣಕ್ಕೆ ಸನಾ ಜೂನ್ 22, 2020ರಂದು ಲಿಂಗ ಬದಲಾವಣೆಯ ಆಪರೇಷನ್ ಮಾಡಿಸಿಕೊಂಡರು. ಅದಾದ ನಂತರ ಸನಾ ಅಧಿಕೃತವಾಗಿ ತನ್ನ ಹೆಸರನ್ನು ಸೊಹೈಲ್ ಖಾನ್ ಎಂದು ಬದಲಾಯಿಸಿಕೊಂಡಳು. ಸಲಿಂಗ ಸಂಬಂಧವನ್ನು ಮನೆಯವರು ಒಪ್ಪದ ಕಾರಣಕ್ಕೆ ಸನಾ ಸೊಹೈಲ್ ಖಾನ್ ಆಗಿ ಬದಲಾದಳು.

ಸೋನಾಲ್ ಕೂಡ ಎಲ್ಲ ಕಡೆ ತಾನು ಸೊಹೈಲ್ ಖಾನ್​ನ ಪತ್ನಿ ಎಂದು ಹೇಳಿಕೊಂಡಿದ್ದರು. ತಾನು ಕೂಡ ಸನಾಳಂತೆ ಸರ್ಕಾರಿ ನೌಕರಿಯನ್ನು ಪಡೆಯಬೇಕೆಂದು ಬಯಸಿದಳು. ಕೊನೆಗೆ ಸೋನಾಲ್​ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು. ಅಲ್ಲಿಂದ ಸೋನಾಲ್​ ನಡವಳಿಕೆಯಲ್ಲಿ ಬದಲಾವಣೆಗಳು ಆಗತೊಡಗಿದವು.

ಸೋನಾಲ್ ಸನಾ ಅಲಿಯಾಸ್​ ಸೊಹೈಲ್​ನನ್ನು ಅವಾಯ್ಡ್​ ಮಾಡಲು ಪ್ರಾರಂಭಿಸಿದಳು. ತನ್ನ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿ ಕಳೆಯುತ್ತಿದ್ದಳು. ಇದು ಅವರ ನಡುವೆ ಆಗಾಗ್ಗೆ ವಾದಗಳಿಗೆ ಕಾರಣವಾಯಿತು. ಒಂದು ರಾತ್ರಿ ಸೊಹೈಲ್ ಖಾನ್ ಸೋನಾಲ್ ಅಳುತ್ತಿರುವುದನ್ನು ನೋಡಿ ಏನಾಯಿತೆಂದು ವಿಚಾರಿಸಿದಾಗ ನಿನ್ನಿಂದಾಗಿ ನಾನು ನನ್ನ ಕುಟುಂಬದಿಂದ ದೂರವಾಗಿದ್ದೇನೆ ಎಂದು ಗಲಾಟೆ ಮಾಡಿದಳು.

ಇದನ್ನೂ ಓದಿ: Viral News: ಮದುವೆಗೆ ಒಪ್ಪದ ಪ್ರೇಮಿಯ ಮನೆ ಮುಂದೆ ಯುವತಿಯಿಂದ 3 ದಿನ ಪ್ರತಿಭಟನೆ; ಆಮೇಲೇನಾಯ್ತು?

ಬಳಿಕ ಸೊಹೈಲ್ ಖಾನ್​ಗೆ ಸೋನಾಲ್ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಜ್ಞಾನ್‌ ಎಂಬ ಯುವಕನೊಂದಿಗೆ ಸಂಬಂಧ ಹೊಂದಿರುವುದು ಗೊತ್ತಾಯಿತು. ಈ ಬಗ್ಗೆ ಆಕೆಯನ್ನು ಕೇಳಿದಾಗ ತಾನು ಆತನನ್ನೇ ಮದುವೆಯಾಗಲು ನಿರ್ಧರಿಸಿರುವುದಾಗಿ ಸೋನಾಲ್ ಹೇಳಿದಳು. ಯಾರಿಗಾಗಿ ತಾನು ಮನೆಯವರನ್ನು, ಸಮಾಜವನ್ನು ಎದುರು ಹಾಕಿಕೊಂಡು ಲಿಂಗ ಪರಿವರ್ತನೆ ಮಾಡಿಕೊಂಡಳೋ ಆಕೆ ಇನ್ನೊಬ್ಬನ ಜೊತೆ ಬದುಕಲು ಬಯಸಿರುವುದನ್ನು ಕೇಳಿ ಸೊಹೈಲ್​ಗೆ ಆಘಾತವಾಯಿತು.

ಈ ವಿಚಾರವಾಗಿ ಸೊಹೈಲ್ ಖಾನ್ ಪೊಲೀಸರ ಸಹಾಯವನ್ನೂ ಕೇಳಿದಳು. ಕೊನೆಗೆ ಅವರಿಬ್ಬರ ನಡುವೆ ಜಗಳ ಹೆಚ್ಚಾಗಿ ಸೋನಾಲ್ ತನ್ನ ಮನೆಗೆ ವಾಪಾಸ್ ಹೋದಳು. ಬಳಿಕ ಸೋನಾಲ್ ಮತ್ತು ಆಕೆಯ ಕುಟುಂಬದವರು ಸನಾ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ಕಿರುಕುಳದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಸನಾ ಪೊಲೀಸರ ಮುಂದೆ ತನ್ನ ಕಷ್ಟವನ್ನು ವಿವರಿಸಿದಳು. ನಂತರ ಸೋನಾಲ್​ಳನ್ನು ವಿಚಾರಣೆಗೆ ಕರೆಸಲಾಯಿತು. ಆದರೆ, ಪೊಲೀಸರು ಸೋನಾಲ್​ ಪರವಾಗಿಯೇ ಮಾತನಾಡಿದ್ದರಿಂದ ಸನಾ ನ್ಯಾಯಾಲಯದ ಮೊರೆ ಹೋದರು.

ಹಲವು ಬಾರಿ ಸಮನ್ಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗದ ಸೋನಾಲ್ ಅವರನ್ನು ಜನವರಿ 18ರಂದು ಪೊಲೀಸರು ಬಂಧಿಸಿದ್ದರು. ಸೋನಾಲ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 23 ರಂದು ನಡೆಯಲಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada