Bengaluru Metro Pillar Collapse: ಸ್ವಯಂ ಪ್ರೇರಿತವಾಗಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​​

| Updated By: ವಿವೇಕ ಬಿರಾದಾರ

Updated on: Jan 18, 2023 | 8:11 AM

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಬಿದ್ದು ತಾಯಿ, ಮಗು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್​​ ಸ್ವಯಂ ಪ್ರೇರಿತವಾಗಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

Bengaluru Metro Pillar Collapse: ಸ್ವಯಂ ಪ್ರೇರಿತವಾಗಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​​
ಮೆಟ್ರೋ ಕಂಬ ಕುಸಿತ, ಕರ್ನಾಟಕ ಹೈಕೋರ್ಟ್​​
Follow us on

ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ (Bengaluru Metro pillar fall)  ಬಿದ್ದು ತಾಯಿ, ಮಗು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್​​ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಪ್ರಕರಣ ಸಂಬಂಧ ಮಾಧ್ಯಮಗಳ ಸುದ್ದಿ ಆಧರಿಸಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತಿಕೊಂಡಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರ ನೇತೃತ್ವದ ಪೀಠ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ BMRCL, BBMP ಮತ್ತು ಸಂಬಂಧಪಟ್ಟ ಗುತ್ತಿಗೆದಾರರನ್ನು ಪ್ರತಿವಾದಿಗಳನ್ನಾಗಿಸಲು ಸೂಚನೆ ನೀಡಿದೆ.

ಈ ಪ್ರಕರಣವು ಸಾರ್ವಜನಿಕರಲ್ಲಿ ಕಳವಳ ಮತ್ತು ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆ ಮೂಡಿಸುತ್ತದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ಮತ್ತು ಟೆಂಡರ್​ ನೀಡುವ ಸಂದರ್ಭದಲ್ಲಿ ಸುರಕ್ಷರತೆಯು ಟೆಂಡರ್​ನ ಭಾಗವಾಗಿರಲಿಲ್ಲವೇ? ಟೆಂಡರ್​ ಸಮಯದಲ್ಲಿ ಸರ್ಕಾರ ಸೂಚಿಸಿದ  ಸುರಕ್ಷತಾ ಕ್ರಮಗಳನ್ನು ಗುತ್ತಿಗೆದಾರರು ಪಾಲಿಸಿದ್ದಾರೆಯೇ ? ಎಂದು ಪ್ರಶ್ನೆ ಮಾಡಿದೆ.

ಘಟನೆ ಹಿನ್ನೆಲೆ

ಜನವರಿ 10 ರಂದು  ಬೆಂಗಳೂರಿನ ನಾಗವಾರ ರಿಂಗ್ ರೋಡ್‍ನ ಎಚ್‍ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕಂಬಿ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟಿದ್ದರು. ಮೃತ ತೇಜಸ್ವಿನಿ ಹಾಗೂ ಅವರ ಪತಿ ತಮ್ಮಿಬ್ಬರು ಅವಳಿ ಮಕ್ಕಳ ಜೊತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಪಿಲ್ಲರ್‌ ಅವರ ಬೈಕ್ ಮೇಲೆ ಬಿದ್ದಿತ್ತು. ಅವರ ಕುಟುಂಬದ ನಾಲ್ವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಜನರು ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೇಜಸ್ವಿನಿ ಹಾಗೂ ಮಗು ವಿಹಾನ್ ಮೃತಟ್ಟಿದ್ದಾರೆ. ಒಂದು ವರ್ಷದ ಮಗು ಮತ್ತು ಲೋಹಿತ್‌ ಕುಮಾರ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಜಾಮ್​ಗೆ ನನ್ನ ಸೊಸೆ, ಮೊಮ್ಮಗನ ಸಾವೇ ಕಾರಣ ಎಂಬ ಸಣ್ಣ ಸುಳಿವೂ ಇರಲಿಲ್ಲ: ವಿಜಯ್​ ಕುಮಾರ್

ಐವರ ವಿರುದ್ಧ ಕೇಸ್ ಬುಕ್

ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ತೇಜಸ್ವಿನಿ ಪತಿ ಲೋಹಿತ್ ಕುಮಾರ್ ಅವರು ದೂರು ನೀಡಿದ್ದು, ಸೈಟ್ ಇಂಜಿನಿಯರ್ಸ್‌, ಕಂಟ್ರ್ಯಾಕ್ಟರ್ಸ್‌, BMRCL ಆಫೀಸರ್ಸ್‌, ಸೈಟ್ ಇನ್‌ಚಾರ್ಜ್‌ ಆಫೀಸರ್ಸ್ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಗುತ್ತಿಗೆದಾರ, ಅಧಿಕಾರಿಗೆ BMRCLನೋಟಿಸ್ ನೀಡಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಐಐಎಸ್ಸಿಗೆ ಮನವಿ ಮಾಡಲಾಗಿದೆ. ಆಂತರಿಕ ತಾಂತ್ರಿಕ ತಂಡದಿಂದಲೂ ಘಟನೆ ಬಗ್ಗೆ ತನಿಖೆ ನಡೆಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿತ್ತು.

ಮೃತ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಮೃತರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. BMRCL  ಕೂಡ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದೆ.

ಇದನ್ನೂ ಓದಿ: ಅನುಭವ ಇಲ್ಲದವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇ ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣ; BMRCL ನೌಕರರ ಸಂಘದ ‌ಉಪಾಧ್ಯಕ್ಷ ಆರೋಪ

BMRCLನ ಮುಖ್ಯ ಇಂಜಿನಿಯರ್ ಅಮಾನತು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನವರಿ 10 ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಮೆಟ್ರೊ ಎಂಡಿ, ಬೆಂಗಳೂರು ನಗರ ಪೊಲಿಸ್ ಆಯುಕ್ತ ಹಾಗೂ ಡಿಸಿಪಿ ಜೊತೆ ಸಭೆ ನಡೆಸಿದ್ದರು. ಸಭೆಯಲ್ಲಿ ಬಿಎಂಆರ್​ಸಿಎಲ್​ನ ಮುಖ್ಯ ಇಂಜಿನಿಯರ್​​ನ್ನು​ ಅಮಾನತು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದರು. ಹಾಗೇ ದುರಂತಕ್ಕೆ ಕಾರಣರಾದವರ ವಿರುದ್ಧ, ಎನ್​ಸಿಸಿ ಕಂಪನಿ ಮುಖ್ಯಸ್ಥರ ವಿರುದ್ಧ, ಮೆಟ್ರೋ ಕಂಟ್ರ್ಯಾಕ್ಟರ್, ಅವರ ಇಂಜಿನಿಯರ್​ಗಳ ವಿರುದ್ಧವೂ ಕ್ರಮಿನಲ್​ ಕೇಸ್​ ದಾಖಲಿಸುವಂತೆ ಬಿಎಂಆರ್​ಸಿಎಲ್​ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Fri, 13 January 23