ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ಕಬ್ಬಿಣದ ರಾಡ್‌ಗಳು ದ್ವಿಚಕ್ರ ವಾಹನದ ಮೇಲೆ ಕುಸಿದು ಬಿದ್ದ (Bengaluru Metro pillar fall) ಪರಿಣಾಮ ಮಹಿಳೆ ಮತ್ತು ಆಕೆಯ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿದೆ. ಬೆಳಿಗ್ಗೆ 10:30 ರ ಸುಮಾರಿಗೆ ಘಟನೆ ನಡೆದಿದ್ದು, ತೇಜಸ್ವಿನಿ (28) ಮತ್ತು ಎರಡೂವರೆ ವರ್ಷದ ಮಗು ವಿಹಾನ್ ಸಾವನ್ನಪ್ಪಿದ ದುರ್ದೈವಿಗಳು. ಗಂಭೀರ ಸ್ಥಿತಿಯಲ್ಲಿರುವ ಮತ್ತೊಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಂದೆ ಪ್ರಾಣಾಪಾಯದಿಂದ ಪರಾಗಿದ್ದಾರೆ. ಕಲ್ಯಾಣ್ ನಗರದಿಂದ ಹೆಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೆಟ್ರೊ ರೈಲ್ವೆ ಪಿಲ್ಲರ್‌ನ ಲೋಹದ ರಾಡ್‌ಗಳು ರಸ್ತೆ ಮೇಲೆ ಕುಸಿದು ಬಿದ್ದಿದ್ದರಿಂದ ಘಟನೆ ನಡೆದಿದೆ.
ಬೆಂಗಳೂರಿನ ಕಲ್ಯಾಣ್‌ನಗರದಿಂದ ಎಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಾಣವಾಗುತ್ತಿದ್ದ ಮೆಟ್ರೊ ರೈಲು ಪಿಲ್ಲರ್ ಕುಸಿದು ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಲೋಹಿತ್ ಕುಮಾರ್, ಆತನ ಪತ್ನಿ ತೇಜಸ್ವಿನಿ ಹಾಗೂ ಅವರ ಇಬ್ಬರು ಪುತ್ರರು ಗಾಯಗೊಂಡಿದ್ದಾರೆ. ಕೂಡಲೇ ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದುರಾದೃಷ್ಟವಶಾತ್ ತಾಯಿ ಮತ್ತು ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Namma Metro: ಹೊಸ ವರ್ಷದ ಮೊದಲ ದಿನವೇ ನಮ್ಮ ಮೆಟ್ರೋಗೆ ರೂ. 1 ಕೋಟಿಗೂ ಆದಾಯ
ಧಾರವಾಡ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್ ಕುಮಾರ್ ಮತ್ತು ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಮೋಟೋರೋಲಾ ಕಂಪನಿಯಲ್ಲಿ ವೃತ್ತಿ ಹೊಂದಿದ್ದ ತೇಜಸ್ವಿನಿ ನಾಗವಾರದಲ್ಲಿ ನೆಲೆಸಿದ್ದರು. ಅದರಂತೆ ಲೋಹಿತ್ ಅವರು ನಾಗವಾರದಿಂದ ಮಾನ್ಯತಾ ಟೆಕ್ ಪಾರ್ಕ್ ಬಳಿ ಪತ್ನಿಯನ್ನ ಬಿಟ್ಟು ನಂತರ ತನ್ನ ಇಬ್ಬರು ಮಕ್ಕಳನ್ನ ಬೇಬಿ ಸಿಟ್ಟಿಂಗ್ಗೆ ಬಿಡಲು ತೆರಳುತ್ತಿದ್ದಾಗ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಏಕಾ ಏಕಿಯಾಗಿ ಬಿದ್ದಿದ್ದು ಎಲ್ಲರಿಗೂ ಗಾಯಗಳಾಗಿದ್ದವು. ಗಾಯಾಳುಗಳ ಪೈಕಿ ತೇಜಸ್ವಿನಿ ಮತ್ತು ಓರ್ವ ಪುತ್ರ ವಿಹಾನ್ ಗಂಭೀರವಾಗಿ ಗಾಯಗೊಂಡಿದ್ದರು. ಇವರಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದುರ್ಘಟನೆ ಬಗ್ಗೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈಗ ನೀವು ಹೇಳಿದ ಮೇಲೆ ವಿಷಯ ಗೊತ್ತಾಗಿದೆ. ದುರ್ಘಟನೆಗೆ ಕಾರಣ ಏನೆಂದು ಕೇಳುತ್ತೇನೆ. ಮೃತರಿಗೆ ಪರಿಹಾರ ಘೋಷಣೆ ಮಾಡಲಾಗುವುದು ಎಂದರು. ಕಳಪೆ ಕಾಮಗಾರಿ ವಿಚಾರವಾಗಿ ಪ್ರತಿಕ್ರಿಯಿಸಿ, ವಿಷಯ ಈಗಷ್ಟೆ ತಿಳಿದುಬಂದ ಹಿನ್ನಲೆ ಆ ಎಲ್ಲದರ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ: ಸ್ಯಾಂಟ್ರೋ ರವಿಗೆ ಸೇರಿದ ಆಸ್ತಿ ಜಪ್ತಿಗೂ ಕ್ರಮ ಕೈಗೊಳ್ಳಲಾಗಿದೆ: ಸಿಎಂ ಬೊಮ್ಮಾಯಿ
ಘಟನೆ ಬಗ್ಗೆ ಟಿವಿ9 ಜೊತೆ ಮಾತನಾಡಿದ ಲೋಹಿತ್ ಸಹೋದರ, ಅಣ್ಣ-ಅತ್ತಿಗೆ ಮತ್ತು ಅವರ ಇಬ್ಬರು ಮಕ್ಕಳು ಸ್ಕೂಟಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಪಿಲ್ಲರ್ ಬಿದ್ದಿದ್ದೆ. ಅತ್ತಿಗೆ ಮತ್ತು ಮಗಳು ಇಬ್ಬರು ಸಾವನ್ನಪ್ಪಿದ್ದಾರೆ. ಅಣ್ಣ ಮತ್ತು ಒಂದು ಮಗು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದರು.
2021 ಡಿಜಿಟಲ್ನಿಂದ ನಡೆಯುತ್ತಿರುವ ಕಾಮಗಾರಿ ಇದಾಗಿದೆ. ತೆಲಂಗಾಣದ ಹೈದ್ರಾಬಾದ್ ಮೂಲದ ಕಂಪನಿ (NCC) ಕಂಪನಿಯು ಈ ಕಾಮಗಾರಿಯನ್ನು ನಡೆಸುತ್ತಿದೆ. ಸದ್ಯ ಕುಸಿದು ಬಿದ್ದ ನಿರ್ಮಾಣ ಹಂತದ ಪಿಲ್ಲರ್ ರಾಡ್ಗಳನ್ನು ತೆರವು ಮಾಡುವ ಕಾರ್ಯ ಆರಂಭವಾಗಿದೆ. ಗ್ಯಾಸ್ ಕಟರ್ ಮೂಲಕ ರಾಡ್ಗಳನ್ನು ಮೆಟ್ರೋ ಪಿಲ್ಲರ್ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರು ಕಟ್ ಮಾಡಿ ತೆಗೆಯುತ್ತಿದ್ದಾರೆ. 2 ರಿಂದ 3 ಗ್ಯಾಸ್ ಕಟರ್ ಬಳಸಿ ಬೃಹತ್ ಪಿಲ್ಲರ್ ತೆರವು ಮಾಡಲಾಗುತ್ತಿದ್ದು, ನಂತರ ಕ್ರೈನ್ ಸಹಾಯದ ಮೂಲಕ ಪಿಲ್ಲರ್ ತೆರವು ಮಾಡಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Tue, 10 January 23